ಮಂಗಳವಾರ, ಅಕ್ಟೋಬರ್ 26, 2021
21 °C
ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧೆ: ಶೇಖರಗೌಡ ಮಾಲಿಪಾಟೀಲ

ಕನ್ನಡ ಸಾಹಿತ್ಯ ಭವನ ನಿರ್ಮಾಣ, ಸಮಾವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಸಮಸ್ತ ಕನ್ನಡಿಗರ ಆಶಯಗಳನ್ನು ನನಸಾಗಿಸುವ ಉದ್ದೇಶದಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ’ ಎಂದು ಸಹಕಾರಿ ಧುರೀಣ ಮತ್ತು ಕಸಾಪ ಕೊಪ್ಪಳ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ ತಿಳಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಹಲವು ದಶಕದಿಂದ ಕನ್ನಡಪರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಕಸಾಪ ಕೊ‍ಪ್ಪಳ ಜಿಲ್ಲಾ ಘಟಕದ ಅಧ್ಯಕ್ಷನಾಗಿ 2 ಅವಧಿಗೆ ಕೆಲಸ ಮಾಡಿದ್ದೇನೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದ 78ನೇ ಅಖಿಲ ಭಾರತ ಕನ್ನಡ ಸಮ್ಮೇಳನವನ್ನು ಯಶಸ್ವಿಯಾಗಿ ಸಂಘಟಿಸಿದ್ದೇನೆ. ಮುಂದೆಯೂ ಕನ್ನಡಮ್ಮನ ಸೇವೆ ಮಾಡಲು ಮತದಾರರು ಅವಕಾಶ ಮಾಡಿಕೊಡಬೇಕು’ ಎಂದು ಕೋರಿದರು.

‘ಪ್ರಚಾರಕ್ಕೆ ಹೋದಲೆಲ್ಲಾ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ನಾನು ಅಧ್ಯಕ್ಷನಾದರೆ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಿಸುತ್ತೇನೆ. ಪರಿಷತ್ತಿನ ಕೇಂದ್ರ ಸ್ಥಾನವಾದ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮಾದರಿ ಕನ್ನಡ ಶಾಲೆ ಸ್ಥಾಪಿಸುತ್ತೇನೆ. ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲೂ ಪ್ರತಿ ವರ್ಷ ವಿವಿಧ ಸಾಹಿತ್ಯ ಸಾಂಸ್ಕೃತಿಕ ಸಮಾವೇಶ ಆಯೋಜಿಸುತ್ತೇ‌ನೆ. ಉದಯೋನ್ಮುಖ ಹಾಗೂ ಯುವ ಬರಹಗಾರರ ಕಮ್ಮಟ ಮತ್ತು ಶಿಬಿರಗಳನ್ನು ನಡೆಸುತ್ತೇನೆ’ ಎಂದು ಭರವಸೆ ನೀಡಿದರು.

‘ವಚನ, ದಾಸ, ನಾಟಕ, ಮಕ್ಕಳ ಸಾಹಿತ್ಯ ಸೇರಿದಂತೆ ವಿವಿಧ ಪ್ರಕಾರಗಳ ಸಮಾವೇಶ ಆಯೋಜಿಸಲಾಗುವುದು. ಪರಿಷತ್ ಪ್ರಕಟಿಸಿರುವ ಅಪರೂಪದ ಮೌಲಿಕ ಗ್ರಂಥಗಳನ್ನು (ಹಸ್ತಪ್ರತಿ, ಸಂಶೋಧನೆ, ಹಳೆಗನ್ನಡ, ಆಧುನಿಕ ಸಾಹಿತ್ಯ) ಮರುಮುದ್ರಣ ಮಾಡುತ್ತೇನೆ. ಕನ್ನಡ, ರೈತ ಹಾಗೂ ಜನಪರ ಚಳವಳಿ, ಕೈಗಾರಿಕೆ ಹಾಗೂ ವಾಣಿಜ್ಯೋದ್ಯಮ- ಕನ್ನಡ ಸಂಘಗಳ ‘ಜನಸಾಮಾನ್ಯ’ ಸಮಾವೇಶ ನಡೆಸುತ್ತೇನೆ’ ಎಂದು ತಿಳಿಸಿದರು.

‘ಸಾಹಿತ್ಯ ಸಮ್ಮೇಳನಾಧ್ಯಕ್ಷರನ್ನು ವರ್ಷಪೂರ್ತಿ ಬಳಸಿಕೊಳ್ಳಲಾಗುವುದು. ಕನ್ನಡ ನಿಧಿ ಸ್ಥಾಪಿಸಿ, ಅದರಲ್ಲಿ ದೊರೆಯುವ ಹಣವನ್ನು ಅಶಕ್ತ ಸಾಹಿತಿಗಳ ಕಲ್ಯಾಣಕ್ಕೆ ನೀಡಲಾಗುವುದು’ ಎಂದು ಹೇಳಿದರು.

‘ಗಡಿಗಳಲ್ಲಿ ಕನ್ನಡಿಗರ ಅಸ್ತಿತ್ವಕ್ಕ ಧಕ್ಕೆ ಬಂದಾಗ ಧ್ವನಿ ಎತ್ತುತ್ತಲೇ ಬಂದಿದ್ದೇನೆ‌. ಮುಂದೆಯೂ ಜೊತೆಗಿರುತ್ತೇನೆ. ರಂಗಭೂಮಿಗೆ ಅಪಾರ ಕೊಡುಗೆ ನೀಡಿದ ಏಣಗಿ ಬಾಳಪ್ಪ ಅವರ ತವರಾದ ಬೆಳಗಾವಿಯಲ್ಲಿ ಮೊದಲ ರಂಗಭೂಮಿ ಸಮಾವೇಶ ಏರ್ಪಡಿಸುತ್ತೇನೆ’ ಎಂದರು.

ಸಾಹಿತಿ ಆರ್.ಜಿ. ಹಳ್ಳಿ ನಾಗರಾಜ, ಮುಖಂಡ ಎಂ.ಶಿವಕುಮಾರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು