ಮಂಗಳವಾರ, ಏಪ್ರಿಲ್ 7, 2020
19 °C

ಕೊರೊನಾ ಯಾರೋ ಒಬ್ಬಿಬ್ಬರಲ್ಲ, ಇಡೀ ಸಮಾಜ ಎದುರಿಸಬೇಕು: ಸಿ.ಟಿ.ರವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಕೊರೊನಾ ಬಗ್ಗೆ ಎಚ್ಚರಿಕೆ ವಹಿಸಬೇಕು. ಆದರೆ, ಅನಗತ್ಯ ಭಯ ಅಥವಾ ಭೀತಿಯ ಅಗತ್ಯವಿಲ್ಲ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಹೇಳಿದರು.

ಇಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಆರೋಗ್ಯ ಇಲಾಖೆಯು ಮುಂಜಾಗ್ರತೆ ವಹಿಸಿ ಎಂದು ಹೇಳಬಹುದು, ಜನರಿಗೆ ನಿರ್ದೇಶನ ಕೊಡಬಹುದು. ಒಟ್ಟು ಸಮಾಜ ಎದುರಿಸಬೇಕಾದ ವಿಷಯವಿದು. ಒಂದು ಇಲಾಖೆ ಅಥವಾ ಒಬ್ಬ ವ್ಯಕ್ತಿ ಮಾಡುವ ಕೆಲಸವಿದಲ್ಲ. ಎಲ್ಲರೂ ಜಾಗರೂಕತೆ ವಹಿಸಬೇಕಾಗುತ್ತದೆ. ರೋಗ ಬಂದ ಮೇಲೆ ಪರಿಹಾರ ಹುಡುಕುವುದಕ್ಕಿಂತ, ಬಾರದಂತೆ ನೋಡಿಕೊಳ್ಳಬೇಕು. ಅದು ಬುದ್ಧಿವಂತ ಸಮಾಜದ ಲಕ್ಷಣ’ ಎಂದು ಪ್ರತಿಕ್ರಿಯಿಸಿದರು.

‘ಪ್ರಾಧಿಕಾರಗಳು, ಅಕಾಡೆಮಿಗಳಿಗೆ ಅನುದಾನ ಕಡಿತಗೊಳಿಸಿರುವುದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಜೊತೆ ಚರ್ಚಿಸಿದ್ದೆ. ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ಸಾಂಸ್ಕೃತಿಕ ಸಂಸ್ಥೆಗಳವರು ಕೂಡ ವಿಷಯ ಪ್ರಸ್ತಾಪಿಸಿದ್ದರು. ಸರಿಪಡಿಸುವ ಭರವಸೆಯನ್ನು ಮುಖ್ಯಮಂತ್ರಿ ನೀಡಿದ್ದರು. ಆದರೆ, ಅದು ಬಜೆಟ್‌ನಲ್ಲಿ ವ್ಯಕ್ತವಾಗಿಲ್ಲ. ಮತ್ತೊಮ್ಮೆ ಭೇಟಿಯಾಗಿ ಚರ್ಚಿಸಿದ್ದೇನೆ. ಮರುಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ’ ಎಂದರು.

‘ಹೊಸದಾಗಿ 9 ಜಯಂತಿಗಳನ್ನು ಆಚರಿಸುವಂತೆ ಮನವಿಗಳು ನನ್ನ ಬಳಿ ಬಂದಿವೆ. ಮಹಾನುಭಾವರ ಹೆಸರಿನ ಜಯಂತಿಗಳನ್ನು ಜಾತಿಗೆ ಸೀಮಿತಗೊಳಿಸಬಾರದು, ಕೇಂದ್ರೀಕರಿಸಬಾರದು ಎನ್ನುವ ಅಭಿಪ್ರಾಯ ನನ್ನನ್ನೂ ಒಳಗೊಂಡಂತೆ ಬಹುತೇಕರದಾಗಿದೆ. ಹೊಸ ರೂಪದಲ್ಲಿ ಜಯಂತಿಗಳನ್ನು ನಡೆಸಲು ಯೋಚಿಸಲಾಗುತ್ತಿದೆ. ದೇಶದಲ್ಲಿ ಜಾತಿಗಳಿಗೂ ಕೊರತೆ ಇಲ್ಲ, ಮಹಾತ್ಮರಿಗೂ ಕೊರತೆ ಇಲ್ಲ. ಅವರನ್ನೆಲ್ಲಾ ಜಾತಿಗೆ ಕಟ್ಟಿ ಹಾಕುತ್ತಿರುವುದರಿಂದ ಬೇರೆ ಅಭಿ‍ಪ್ರಾಯ ವ್ಯಕ್ತವಾಗುತ್ತಿದೆ. ಈ ಬಗ್ಗೆಯೂ ಚರ್ಚಿಸಲಾಗುವುದು’ ಎಂದರು.

ಮುಖ್ಯಮಂತ್ರಿ ಪುತ್ರ ವಿಜಯೇಂದ್ರ ಸೂಪರ್‌ ಸಿಎಂ ರೀತಿ ವರ್ತಿಸುತ್ತಿದ್ದಾರೆ ಎಂಬ ಮಾತುಗಳಿವೆಯಲ್ಲಾ ಎನ್ನುವ ಪ್ರಶ್ನೆಗೆ, ‘ಈಗ ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪ’ ಎಂದಷ್ಟೇ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು