ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19: ಸಂಕಷ್ಟದಲ್ಲಿರುವವರಿಗೆ ಬಿಜೆಪಿ ಸಹಾಯಹಸ್ತ

ರಾಜ್ಯ ಘಟಕದ ವಕ್ತಾರ ಎಂ.ಬಿ. ಝಿರಲಿ
Last Updated 15 ಮೇ 2021, 7:04 IST
ಅಕ್ಷರ ಗಾತ್ರ

ಬೆಳಗಾವಿ: ‘ಶತಮಾನದಲ್ಲಿ ಕಂಡು ಕೇಳರಿಯದ ಸಾಂಕ್ರಾಮಿಕ ರೋಗದ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಸೋಂಕಿನಿಂದಾಗಿ ಜಿಲ್ಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವವರಿಗೆ ಬಿಜೆಪಿಯಿಂದ ಸಹಾಯಹಸ್ತ ಚಾಚುತ್ತಿದ್ದೇವೆ’ ಎಂದು ಪಕ್ಷದ ರಾಜ್ಯ ಘಟಕದ ವಕ್ತಾರ ಎಂ.ಬಿ. ಝಿರಲಿ ತಿಳಿಸಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಮ್ಮ ಶಾಸಕರು, ಸಚಿವರು, ಸಂಸದರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸೇವಾ ಚಟುವಟಿಕೆಗಳಲ್ಲಿ ತೊಡಗಿದ್ದಾರೆ’ ಎಂದು ಹೇಳಿದರು.

‘ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಹಾಗೂ ಉತ್ತರದ ಅನಿಲ ಬೆನಕೆ ಸೇರಿ ನಗರದಲ್ಲಿನ ಆಸ್ಪತ್ರೆಗಳಲ್ಲಿನ ಹಾಸಿಗೆಗಳ ವ್ಯವಸ್ಥೆಯನ್ನು ಹಳಿಗೆ ತಂದಿದ್ದಾರೆ. ಕೋವಿಡ್ ಕೇರ್‌ ಕೇಂದ್ರಗಳನ್ನು ಆರಂಭಿಸಿದ್ದಾರೆ. ಖಾಸಗಿ ಆಸ್ಪತ್ರೆಗಳವರ ಮನವೊಲಿಸಿ ಚಿಕಿತ್ಸೆ ಲಭ್ಯವಾಗುವಂತೆ ಮಾಡಿದ್ದಾರೆ. 2 ಆಂಬುಲೆನ್ಸ್‌ಗಳನ್ನು ಒದಗಿಸಿದ್ದಾರೆ. ರೋಗಿಗಳೊಂದಿಗೆ ಬರುವವರಿಗೆ ಸಂಜೆ 7ರಿಂದ 9ರವರೆಗೆ ಊಟದ ವ್ಯವಸ್ಥೆ ಮಾಡಿದ್ದಾರೆ’ ಎಂದು ಮಾಹಿತಿ ನೀಡಿದರು.

ಸಕಾರಾತ್ಮಕ ವಿಷಯ ತಿಳಿಸಿ
‘ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಸಹೋದರನ ಪುತ್ರನ ಸಾವಿನ ನೋವಲ್ಲೂ ಅಥಣಿಯಲ್ಲಿ ಕೋವಿಡ್ ಕೇಂದ್ರಕ್ಕೆ ₹ 50 ಲಕ್ಷ ಮೌಲ್ಯದ ಉಪಕರಣಗಳನ್ನು ದೇಣಿಗೆ ನೀಡಿದ್ದಾರೆ. ಸಂಸದ ಅಣ್ಣಾಸಾಹೇಬ ಜೊಲ್ಲೆ–ಸಚಿವೆ ಶಶಿಕಲಾ ಜೊಲ್ಲೆ ದಂಪತು ಕೂಡ ಆಸ್ಪತ್ರೆ ಆರಂಭಿಸಿದ್ದಾರೆ. ಮುಖಂಡ ಪ್ರಭಾಕರ ಕೋರೆ ಅವರು ಪ್ರಕಾಶ ಹುಕ್ಕೇರಿ ಜೊತೆ ಸೇರಿ ಕೇಂದ್ರ ಆರಂಭಿಸಿದ್ದಾರೆ. ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಐದು ಸಾವಿರ ಮೆಡಿಕಲ್ ಕಿಟ್ ವಿತರಿಸಿದ್ದಾರೆ’ ಎಂದರು.

‘ಯುವಕರ ಸಾವಿನ ಪ್ರಕರಣಗಳೂ ವರದಿಯಾಗುತ್ತಿವೆ. ಪ್ರತಿಯೊಬ್ಬರೂ ಹೆದರಿದ್ದಾರೆ. ಹೀಗಿರುವಾಗ, ಕೆಲವರು ಸಾಮಾಜಿಕ ಜಾಲತಾಣದಲ್ಲಿ ಭಯ ಉಂಟು ಮಾಡುತ್ತಿದ್ದಾರೆ. ಈ ವೇಳೆ ಮಾಧ್ಯಮ ಸಕಾರಾತ್ಮಕ ವಿಷಯಗಳನ್ನು ಹೈಲೈಟ್ ಮಾಡಬೇಕು’ ಎಂದು ಕೋರಿದರು.

‘ಸೋಂಕು ಹರಡುತ್ತಿರುವುದು ನಿಜ. ಅಂತೆಯೇ ಗುಣಮುಖ ಆಗುವವರ ಸಂಖ್ಯೆಯೂ ಜಾಸ್ತಿ ಇದೆ. ಸಾಮಾನ್ಯ ಜ್ವರ ಬಂದರೂ ಭಯದಿಂದ, ಆಸ್ಪತ್ರೆಗೆ ಬರುವುದರಿಂದ ಗೊಂದಲ ಉಂಟಾಗುತ್ತಿದೆ. ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ’ ಎಂದರು.

ಕೋರೆ ಜೊತೆ ಚರ್ಚೆ
‘ಕೆಎಎಲ್‌ಇ ಆಸ್ಪತ್ರೆಯಲ್ಲಿ ಹೆಚ್ಚಿನ ಹಾಸಿಗೆಗಳನ್ನು ಜನರಿಗೆ ಉಚಿತವಾಗಿ ಒದಗಿಸುವಂತೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರೊಂದಿಗೆ ಚರ್ಚಿಸಲಾಗುವುದು’ ಎಂದು ಪ್ರತಿಕ್ರಿಯಿಸಿದರು.

ಶಾಸಕ ಅಭಯ ಪಾಟೀಲ, ‘ರೆಮ್‌ಡಿಸಿವಿರ್‌ ಮತ್ತು ಆಮ್ಲಜನಕ ಪೂರೈಕೆ ವ್ಯವಸ್ಥೆ ಸುಧಾರಿಸಿದೆ. ರೋಗಿಗಳ ಸ್ಥಿತಿಗತಿ ಪರಿಗಣಿಸಿ ಹಂಚಿಕೆ ಮಾಡಲಾಗುತ್ತಿದೆ. ಹಾಗೊಂದು ವೇಳೆ ದೂರು ಬಂದಲ್ಲಿ ತಕ್ಷಣ ಮಾತನಾಡಿ ಸರಿಪಡಿಸಲಾಗುತ್ತಿದೆ. ಆ ಚುಚ್ಚುಮದ್ದನ್ನು ಯಾರ‍್ಯಾರ ಹೆಸರಲ್ಲಿ ಕೊಡಲಾಗಿದೆ. ಅದು ನಿಗದಿತ ವ್ಯಕ್ತಿಗೆ ತಲುಪಿದೆಯೇ ಎನ್ನುವುದನ್ನು ‍ಪರಿಶೀಲಿಸಿ ವರದಿ ಕೊಡುವಂತೆ ಸೂಚಿಸಲಾಗಿದೆ’ ಎಂದು ತಿಳಿಸಿದರು.

ಸಂಸದೆ ಮಂಗಲಾ ಅಂಗಡಿ ಮಾತನಾಡಿ, ‘ಸಮಸ್ಯೆಗಳ ಪರಿಹಾರಕ್ಕೆ ಕ್ರಮ ವಹಿಸಲಾಗಿದೆ. ಆಹಾರ ಕಿಟ್ ವಿತರಣೆ ಮಾಡಲಾಗುತ್ತಿದೆ. ತಾಲ್ಲೂಕುವಾರು ಸಭೆ ನಡೆಸಿ, ಸಮಸ್ಯೆಗಳ ಪರಿಹಾರಕ್ಕೆ ಸೂಚಿಸುತ್ತಿದ್ದೇನೆ’ ಎಂದರು.

ಶಾಸಕ ಅನಿಲ ಬೆನಕೆ, ನಗರ ಘಟಕದ ಅಧ್ಯಕ್ಷ ಶಶಿಕಾಂತ ಪಾಟೀಲ ಇದ್ದರು.

***

ವಿರೋಧ ಪಕ್ಷದವರು ಹಾಗೂ ಕೆಲ ಸಮಾಜಕಂಟಕರು ಹೆದರಿಕೆ ಉಂಟು ಮಾಡುವ ಕೆಲಸದಲ್ಲಿ ತೊಡಗಿದ್ದಾರೆ. ಇದು ರಾಜಕೀಯ ಮಾಡುವ ಸಮಯವಲ್ಲ. ಮಾನವೀಯತೆಯಿಂದ ವರ್ತಿಸಬೇಕು
-ಎಂ.ಬಿ. ಝಿರಲಿ,ಬಿಜೆಪಿ ರಾಜ್ಯ ಘಟಕದವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT