ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಗದ ಬೆಲೆ: ಮಿನಿ ವಿಧಾನಸೌಧ ಎದುರು ಚೆಂಡು ಹೂ, ಕೋಸು ಚೆಲ್ಲಿ ಆಕ್ರೋಶ

Last Updated 23 ಏಪ್ರಿಲ್ 2021, 14:23 IST
ಅಕ್ಷರ ಗಾತ್ರ

ಗೋಕಾಕ (ಬೆಳಗಾವಿ ಜಿಲ್ಲೆ): ದಿಢೀರನೆ ಭಾಗಶಃ ಲಾಕ್‌ಡೌನ್‌ ಜಾರಿಯಾದ್ದರಿಂದ ಸರಿಯಾದ ಬೆಲೆ ಸಿಗದಿದ್ದಕ್ಕೆ ಆಕ್ರೋಶಗೊಂಡ ತಾಲ್ಲೂಕಿನ ದಂಡಾಪೂರದ ರೈತ ರಾಮಪ್ಪ ಸಿದ್ದಪ್ಪ ರಾಜಾಪೂರ ಅವರು ಚೆಂಡು ಹೂವುಗಳು ಹಾಗೂ ಹೂಕೋಸನ್ನು ಇಲ್ಲಿನ ಮಿನಿ ವಿಧಾನಸೌಧದ ಬಾಗಿಲಲ್ಲಿ ಚೆಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ರೈತನ ದಿಢೀರ್ ಪ್ರತಿಭಟನೆಯಿಂದಾಗಿ ಅಲ್ಲಿನ ಸಿಬ್ಬಂದಿ ಹಾಗೂ ಅಧಿಕಾರಿಗಳು ಕಕ್ಕಾಬಿಕ್ಕಿಯಾದರು.

‘ಕಷ್ಟಪಟ್ಟು ಬೆಳೆದ ಬೆಳೆಗೆ ಯೋಗ್ಯ ಬೆಲೆ ಸಿಗಲಿಲ್ಲ. ಹೀಗಾಗಿ, ಸರ್ಕಾರದ ಗಮನಸೆಳೆಯಲು ಹೀಗೆ ಮಾಡಬೇಕಾಯಿತು. ಕೃಷಿಕರ ಸಂಕಷ್ಟಗಳನ್ನು ಅಧಿಕಾರಿಗಳು ಅರಿಯಲಿ’ ಎಂದು ಹೇಳಿದರು.

‘7 ಎಕರೆ ಜಮೀನಿದ್ದು, ಅದರಲ್ಲಿ 5 ಎಕರೆಯಲ್ಲಿ ಚೆಂಡು ಹೂ ಹಾಗೂ 2 ಎಕರೆಯಲ್ಲಿ ಹೂಕೋಸು ಬೆಳೆದಿದ್ದೆ. ₹ 3 ಲಕ್ಷ ವೆಚ್ಚವಾಗಿದೆ. ಯೋಗ್ಯ ಬೆಲೆ ಸಿಕ್ಕರೆ ಶ್ರಮಕ್ಕೆ ಪ್ರತಿಫಲ ದೊರೆಯುತ್ತದೆ ಎನ್ನುವಷ್ಟರಲ್ಲಿ ಸರ್ಕಾರ ಭಾಗಶಃ ಲಾಕ್‌ಡೌನ್‌ ಜಾರಿ ಮಾಡಿದೆ. ಇದರಿಂದಾಗಿ ಅಪಾರ ಹಾನಿ ಸಂಭವಿಸಿದೆ. ಮಾರುಕಟ್ಟೆಯುಲ್ಲಿ ಬೇಡಿಕೆ ಕುಸಿದಿರುವುದರಿಂದಾಗಿ, ಹೂ ಹಾಗೂ ಹೂಕೋಸನ್ನು ಮಾರುಕಟ್ಟೆಗೆ ತರಲು ಮಾಡಿರುವ ಖರ್ಚು ಕೂಡ ಸಿಗುತ್ತಿಲ್ಲ’ ಎಂದು ರಾಯಪ್ಪ ಅಳಲು ತೋಡಿಕೊಂಡರು.

ಸ್ಥಳಕ್ಕೆ ಬಂದ ತಹಶೀಲ್ದಾರ್‌ ನವೀನ ಹುಲ್ಲೂರ, ನಗರ ಠಾಣೆಯ ಪಿಎಸ್ಐ ಕೆ.ಬಿ. ವಾಲಿಕಾರ ಹಾಗೂ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಂ.ಎಲ್. ಜನ್ಮಟ್ಟಿ ರೈತನೊಂದಿಗೆ ಮಾತುಕತೆ ನಡೆಸಿ ಮನವೊಲಿಸುವಲ್ಲಿ ಯಶಸ್ವಿಯಾದರು.

‘ಕೃಷಿ ಉತ್ಪನ್ನಗಳ ಸಾಗಣೆಗೆ ಅವಕಾಶವಿದೆ. ರೈತರು ನಿರಾಶರಾಗಬಾರದು. ತೊಂದರೆಗಳಿದ್ದಲ್ಲಿ ತಾಲ್ಲೂಕು ಆಡಳಿತವನ್ನು ನೇರವಾಗಿ ಸಂಪರ್ಕಿಸಬೇಕು. ಉತ್ಪನ್ನಗಳ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದು ಅಧಿಕಾರಿಗಳು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT