ಮಂಗಳವಾರ, ಮೇ 18, 2021
30 °C
ಮಠಗಳು ಸೇರಿದಂತೆ ಹಲವೆಡೆಗೆ ಭೇಟಿ ನೀಡಿದ್ದರು

ಮುಖ್ಯಮಂತ್ರಿಗೆ ಕೋವಿಡ್: ಹಲವರಿಗೆ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಕೋವಿಡ್–19 ದೃಢಪಟ್ಟಿರುವುದು ಇಲ್ಲಿನ ಹಲವರಿಗೆ ಆತಂಕ ತಂದೊಡ್ಡಿದೆ.

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಪರವಾಗಿ ಪ್ರಚಾರಕ್ಕೆಂದು ಎರಡು ದಿನಗಳ ‍ಪ್ರವಾಸ ಕೈಗೊಂಡಿದ್ದ ಅವರೊಂದಿಗೆ ಜನಪ್ರತಿನಿಧಿಗಳು ಸೇರಿದಂತೆ ರಾಜಕೀಯ ನಾಯಕರು, ಅಧಿಕಾರಿಗಳು, ಭದ್ರತಾ ಸಿಬ್ಬಂದಿ, ಹೋಟೆಲ್‌ನವರು, ಮಾಧ್ಯಮ ಪ್ರತಿನಿಧಿಗಳು   ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದರು. ಮುಖ್ಯಮಂತ್ರಿಯು ಜ್ವರದ ಕಾರಣದಿಂದ ಚಿಕಿತ್ಸೆ ಪಡೆದಿದ್ದರು. ಅದರ ನಡುವೆಯೇ ಪ್ರಚಾರ ನಡೆಸಿದ್ದರು.

ಬುಧವಾರ ಸಾಂಬ್ರಾ ವಿಮಾನನಿಲ್ದಾಣಕ್ಕೆ ಬಂದಿದ್ದ ಅವರು, ಬೆಳಗಾವಿ ಗ್ರಾಮೀಣ ಕ್ಷೇತ್ರ, ಗೋಕಾಕ ಮತ್ತು ಮೂಡಲಗಿಯಲ್ಲಿ ಪ್ರಚಾರ ನಡೆಸಿದ್ದರು. ಆಗ, ಅವರೊಂದಿಗೆ ಸಚಿವರಾದ ಜಗದೀಶ ಶೆಟ್ಟರ್, ಉಮೇಶ ಕತ್ತಿ, ಮುರುಗೇಶ ನಿರಾಣಿ, ಶ್ರೀಮಂತ ಪಾಟೀಲ, ಶಾಸಕ ಬಾಲಚಂದ್ರ ಜಾರಕಿಹೊಳಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಅಭ್ಯರ್ಥಿ ಮಂಗಲಾ ಅಂಗಡಿ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು. ಬಹುತೇಕರು ಮಾಸ್ಕ್‌ ಧರಿಸಿ ಪಾಲ್ಗೊಂಡಿದ್ದರು. ರೋಡ್ ಷೋ ಸೇರಿದಂತೆ ಕಲವೆಡೆ ಅಂತರ ಕಾಯ್ದುಕೊಳ್ಳುವುದು ಸಾಧ್ಯವಾಗಿರಲಿಲ್ಲ. ಪ್ರಚಾರ ಸಭೆಗಳಲ್ಲಿ ಸಾವಿರಾರು ಮಂದಿ ಮಾಸ್ಕ್‌ ಕೂಡ ಧರಿಸದೆ, ಅಂತರ ಕಾಯ್ದುಕೊಳ್ಳದೆ ಪಾಲ್ಗೊಂಡಿದ್ದು ಕಂಡುಬಂದಿತ್ತು.

ಗುರುವಾರ ಮುಖ್ಯಮಂತ್ರಿ ಶಿವಬಸವನಗರದ ನಾಗನೂರು ರುದ್ರಾಕ್ಷಿಮಠ ಹಾಗೂ ಹುಕ್ಕೇರಿ ಹಿರೇಮಠಕ್ಕೆ ಭೇಟಿ ನೀಡಿ ಶ್ರೀಗಳಿಂದ ಆಶೀರ್ವಾದ ಪಡೆದಿದ್ದರು. ಹುಕ್ಕೇರಿ ಹಿರೇಮಠದಲ್ಲಿ ನಡೆದಿದ್ದ ಅಗ್ನಿಹೋತ್ರ, ಸುದರ್ಶನ ಹೋಮದಲ್ಲೂ ಪಾಲ್ಗೊಂಡಿದ್ದರು. ಅವರೊಂದಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕೂಡ ಇದ್ದರು. 70 ಸ್ವಾಮೀಜಿಗಳು ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಬಳಿಕ ಯಡಿಯೂರಪ್ಪ ಅವರು ಬೆಳಗಾವಿಯ ದಕ್ಷಿಣ ಕ್ಷೇತ್ರದಲ್ಲಿ ಮುಖಂಡರೊಂದಿಗೆ ರೋಡ್ ಷೋ ನಡೆಸಿದ್ದರು. ಜ್ವರ ಮತ್ತು ಸುಸ್ತು ಜಾಸ್ತಿಯಾದ್ದರಿಂದ ರೋಡ್ ಷೋ ಮೊಟಕುಗೊಳಿಸಿ, ತಾವು ತಂಗಿದ್ದ ಯುಕೆ–27 ಹೋಟೆಲ್‌ನಲ್ಲಿ ವಿಶ್ರಾಂತಿ ಪಡೆದಿದ್ದರು. ಸಂಜೆ ಪ್ರಚಾರಕ್ಕೆ ಬಂದಿದ್ದ ಮಹಾರಾಷ್ಟ್ರದ ವಿಧಾನಸಭೆ ವಿರೋಧಪಕ್ಷದ ನಾಯಕ ದೇವೇಂದ್ರ ಫಡಣವಿಸ್ ಅವರನ್ನು ಭೇಟಿಯಾಗಿ ಬಳಿಕ ವಿಮಾನದಲ್ಲಿ ಬೆಂಗಳೂರಿಗೆ ವಾಪಸಾಗಿದ್ದರು. ಹೋಟೆಲ್‌ ಆವರಣದಲ್ಲಿ ನಗರಪಾಲಿಕೆಯಿಂದ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿತ್ತು.

ಮುಖ್ಯಮಂತ್ರಿ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ರಾಜಕೀಯ ನಾಯಕರು, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು ಮತ್ತು ಪ್ರಚಾರ ಸಭೆ ನಡೆದ ಸ್ಥಳಗಳಲ್ಲೂ ರ‍್ಯಾಂಡಮ್‌ ಪರೀಕ್ಷೆ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಲಾಖೆಯವರು ಮಾಹಿತಿ ಕಲೆ ಹಾಕುತ್ತಿದ್ದಾರೆ.

‘ಮುಂಜಾಗ್ರತಾ ಕ್ರಮವಾಗಿ ಪರೀಕ್ಷೆಗೆ ಒಳಪಟ್ಟಿದ್ದೇನೆ. ಕೋವಿಡ್ ನೆಗೆಟಿವ್ ವರದಿ ಬಂದಿದೆ’ ಎಂದು ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಮಾಹಿತಿ ನೀಡಿದ್ದಾರೆ.

‘ಮುಖ್ಯಮಂತ್ರಿ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದವರನ್ನು ತಪಾಸಣೆಗೆ ಒಳಪಡಿಸುವ ಕಾರ್ಯ ಆರಂಭಗೊಂಡಿದೆ. ಇದಕ್ಕಾಗಿ ತಂಡಗಳನ್ನು ರಚಿಸಲಾಗಿದೆ. ಅವರು ಮುಖ್ಯಮಂತ್ರಿ ತಂಗಿದ್ದ ಹೋಟೆಲ್‌, ಭೇಟಿ ನೀಡಿದ್ದ ಮಠಗಳು, ರ‍್ಯಾಲಿ ನಡೆಸಿದ್ದ ಸ್ಥಳಗಳಿಗೆ ಆದ್ಯತೆ ನೀಡಲಾಗಿದೆ. ಅವರೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿಐಪಿಗಳಿಗೆ ಪರೀಕ್ಷೆ ಮಾಡಿಸಿಕೊಳ್ಳುವಂತೆ ತಿಳಿಸಲಾಗಿದೆ. 400ಕ್ಕೂ ಹೆಚ್ಚು ಮಂದಿಯಿಂದ ಗಂಟಲು ಅಥವಾ ಮೂಗಿನ ದ್ರವದ ಮಾದರಿ ಸಂಗ್ರಹಿಸಲಾಗಿದೆ. ವರದಿ ನಿರೀಕ್ಷಿಸಲಾಗುತ್ತಿದೆ’ ಎಂದು ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ ‘ಪ್ರಜಾವಾಣಿ’ಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು