ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಕರ್ಫ್ಯೂ: ರೈತರ ನೋವಿಗೆ 'ಬರೆ’

ಮಾರುಕಟ್ಟೆ ಬಂದ್, ಬೆಲೆ ಕುಸಿತದಿಂದ ಕಂಗಾಲು, ಪರಿಹಾರಕ್ಕೆ ಆಗ್ರಹ
Last Updated 9 ಮೇ 2021, 19:30 IST
ಅಕ್ಷರ ಗಾತ್ರ

ಬೆಳಗಾವಿ: ಹೋದ ವರ್ಷ ಲಾಕ್‌ಡೌನ್‌, ನೆರೆ, ಅತಿವೃಷ್ಟಿ, ಬೆಲೆ ಕುಸಿತ ಮೊದಲಾದವುಗಳಿಂದ ನಷ್ಟ ಅನುಭವಿಸಿದ್ದ ಜಿಲ್ಲೆಯ ರೈತರಿಗೆ ಈ ಬಾರಿಯ ಕೋವಿಡ್ ಕರ್ಫ್ಯೂ ಬಲವಾದ ‘ಬರೆ’ ಹಾಕಿ ನೋವನ್ನು ಉಲ್ಬಣಗೊಳಿಸಿದೆ.

ಕೊರೊನಾ ಹರಡುವುದನ್ನು ನಿಯಂತ್ರಿಸುವುದಕ್ಕಾಗಿ ಸರ್ಕಾರ ಹಲವು ನಿರ್ಬಂಧ ವಿಧಿಸಿದೆ. ಜಾತ್ರೆ–ಉತ್ಸವಗಳನ್ನು ನಿಷೇಧಿಸಿದೆ. ಹೋಟೆಲ್‌ಗಳು ಬಂದ್ ಆಗಿದೆ. ಮದುವೆಗೂ ನಿರ್ಬಂಧವಿದೆ. ಇದೆಲ್ಲದರ ಪರಿಣಾಮದಿಂದ ತೋಟಗಾರಿಕೆ ಬೆಳೆಗಳಾದ ಹೂವು, ಹಣ್ಣು ಹಾಗೂ ತರಕಾರಿಗಳಿಗೆ ಬೇಡಿಕೆ ಕುಸಿದಿದ್ದು, ಬೆಲೆ ಸಿಗದಂತಾಗಿದೆ.

ಒಂದೆಡೆ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಇನ್ನೊಂದೆಡೆ ಜನರ ಸಂಚಾರಕ್ಕೆ ನಿರ್ಬಂಧವಿದೆ. ಹೀಗಾಗಿ, ವ್ಯಾಪಾರಿಗಳು ಕೂಡ ಹೂಡಿಕೆ ಮಾಡಿ ಉತ್ಪನ್ನಗಳನ್ನು ಖರೀದಿಸಿ ತಂದು ಮಾರಲು ಹಿಂದೇಟು ಹಾಕುತ್ತಿದ್ದಾರೆ. ತರುವ ಸ್ವಲ್ಪ ‍ಪ್ರಮಾಣದ ತರಕಾರಿಯನ್ನು ಹೆಚ್ಚಿನ ಬೆಲೆಗೆ ಮಾರುತ್ತಿರುವುದರಿಂದಾಗಿ ಗ್ರಾಹಕರಿಗೂ ‘ಹೊರೆ’ ಆಗುತ್ತಿದೆ.

ನಂಬಿದ್ದರು

ಮದುವೆ, ಜಾತ್ರೆ–ಉತ್ಸವಗಳ ಸೀಸನ್‌ ನಂಬಿಕೊಂಡು ಜಿಲ್ಲೆಯ ಅಲ್ಲಲ್ಲಿ ರೈತರು ತರಕಾರಿ ಹಾಗೂ ವಿವಿಧ ಹೂವುಗಳನ್ನು ಬೆಳೆದಿದ್ದರು. ಅದರಲ್ಲೂ ಬಹು ಬೇಡಿಕೆ ಇರುವ ಚೆಂಡು ಹೂವು ಹಾಕಿದ್ದರು. ಆ ಹೂವಿಗೆ ಮಹಾರಾಷ್ಟ್ರದ ಮುಂಬೈ ಪ್ರಮುಖ ಮಾರುಕಟ್ಟೆಯಾಗಿದೆ. ನೆರೆಯ ಮಹಾರಾಷ್ಟ್ರದಲ್ಲಿ ಕೋವಿಡ್ ಸ್ಫೋಟದ ಕಾರಣದಿಂದಾಗಿ ಮುಂಬೈ ಮಾರುಕಟ್ಟೆ ಬಂದ್ ಆಗಿದೆ. ಆದ್ದರಿಂದ ಅಲ್ಲಿಗೆ ಹೂವು, ತರಕಾರಿಗಳ ಸಾಗಣೆ ಸ್ಥಗಿತಗೊಂಡಿದೆ. ಅಲ್ಲಲ್ಲಿ ಫಸಲನ್ನು ಜಮೀನಿನಲ್ಲೇ ಬಿಡಲಾಗಿದ್ದು, ಅವು ಕೊಳೆಯುತ್ತಿವೆ. ಜಾನುವಾರು ಪಾಲಾಗುತ್ತಿವೆ.

4ಸಾವಿರ ಹೆಕ್ಟೇರ್‌ಗೂ ಮಿಕ್ಕಿ ಬಾಳೆ ಬೆಳೆ ಇದ್ದು, ವಿವಿಧ ಹಂತದಲ್ಲಿದೆ. ಈಗ ಕಟಾವಿಗೆ ಬಂದಿರುವ ಉತ್ಪನ್ನಕ್ಕೆ ಬೇಡಿಕೆ ಇಲ್ಲದಂತಾಗಿದೆ. 3,500 ಹೆಕ್ಟೇರ್ ಮಾವು ಬೆಳೆ ಇದೆ. ಅಕಾಲಿಕ ಮಳೆಯಿಂದಾಗಿ ಶೇ 40ರಷ್ಟು ಕಾಯಿಗಳು ಉದುರಿವೆ. ಹೊಡೆತದ ಮೇಲೆ ಹೊಡೆತ ಬೀಳುತ್ತಿರುವುದು ಬೆಳೆಗಾರರನ್ನು ಕಂಗಾಲಾಗಿಸಿದೆ. ಪರಿಹಾರ ಕಲ್ಪಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎನ್ನುವುದು ಅವರ ಒಕ್ಕೊರಲ ಆಗ್ರಹವಾಗಿದೆ.

ಕಣ್ಣೀರ ಕಥೆಗಳು

ಮೂಡಲಗಿ: ಕೊರೊನಾ ಸಂಕಷ್ಟವು ರೈತರನ್ನು ಹೈರಾಣಾಗಿದೆ. ತರಕಾರಿ, ಕಲ್ಲಂಗಡಿ, ಸ್ವೀಟ್‌ಕಾರ್ನ್‌ಗೆ ಬೆಲೆ ಸಿಗುತ್ತಿಲ್ಲ. ತಾಲ್ಲೂಕಿನ ಹಳ್ಳೂರದ ಧನೇಂದ್ರ ಸಪ್ತಸಾಗರ 2 ಎಕರೆ ಮಣಸಿಕಾಯಿ ಬೆಳೆದಿದ್ದು, ಅದಕ್ಕೆ ಬೆಲೆ ಇಲ್ಲದೆ ಕಂಗಾಲಾಗಿದ್ದಾರೆ. ಕೆ.ಜಿ.ಗೆ ₹25ರಿಂದ ₹30 ಬೆಲೆ ಇರುತ್ತಿದ್ದ ಮೆಣಸಿನಕಾಯಿಯನ್ನು ಈಗ ₹ 6–₹7ಕ್ಕೆ ಕೇಳುತ್ತಿದ್ದಾರೆ! ‘ಈಗಿನ ಪರಿಸ್ಥಿತಿಯಲ್ಲಿ ಮೆಣಸಿನಕಾಯಿ ಕಟಾವು ಮಾಡುವ ಕೂಲಿ ಖರ್ಚು ಮೈಮೇಲೆ ಬೀಳುತ್ತೈದರೀ’ ಎಂದು ಧನೇಂದ್ರ ಅಳಲು ತೋಡಿಕೊಂಡರು.

ಕೋವಿಡ್2ನೇ ಅಲೆಯಿಂದಾಗಿ ಮೆಣಸಿನಕಾಯಿಗೆಬೇಡಿಕೆ ಇಲ್ಲದೆ ಮೂಡಲಗಿ ತಾಲ್ಲೂಕಿನ ಹಳ್ಳೂರಿನ ಸಣ್ಣ ರೈತ ಧನೇಂದ್ರ ಸಪ್ತಸಾಗರ ಹಾನಿ ಅನುಭವಿಸಿದ್ದಾರೆ

ಕೋವಿಡ್2ನೇ ಅಲೆಯಿಂದಾಗಿ ಮೆಣಸಿನಕಾಯಿಗೆಬೇಡಿಕೆ ಇಲ್ಲದೆ ಮೂಡಲಗಿ ತಾಲ್ಲೂಕಿನ ಹಳ್ಳೂರಿನ ಸಣ್ಣ ರೈತ ಧನೇಂದ್ರ ಸಪ್ತಸಾಗರ ಹಾನಿ ಅನುಭವಿಸಿದ್ದಾರೆ

‘ಮೂರು ತಿಂಗಳ ಬೆಳೆಯಾಗಿದ ಮೆಣಸಿನಕಾಯಿಗೆ ಎಕರೆಗೆ ₹ 70ರಿಂದ ₹80 ಸಾವಿರ ಆದಾಯ ಸಿಗತಿತ್ರೀ. ಹೋದ ವರ್ಷವೂ ಕೊರೊನಾ ಹಾವಳಿಯಿಂದ ನಷ್ಟ ಆಗಿತ್ತು. ಈ ವರ್ಷವೂ ಕೊರೊನಾ ಲುಕ್ಸಾನ್ ಮಾಡೈತ್ರೀ. ಎಕರೆ ಕಲ್ಲಂಗಡಿ ಬೆಳೆದಿದ್ದು ಅದಕ್ಕೂ ಮಾರುಕಟ್ಟೆ ಇಲ್ಲದೆ ನಷ್ಟ ಉಂಟಾಗಿದೆ’ ಎಂದು ತಿಳಿಸಿದರು.

ಮೂಡಲಗಿ, ಖಾನಟ್ಟಿ, ಹಳ್ಳೂರ ಮೊದಲಾದ ಗ್ರಾಮಗಳಲ್ಲಿ ಬೆಳೆದಿರುವ ಸ್ವೀಟ್‌ಕಾರ್ನ್‌ಗೂ ಬೆಲೆ ಸಿಕ್ಕಿಲ್ಲ. ಕತ್ತರಿಸಿ ದನಗಳಿಗೆ ಹಾಕುವುದು ಕಂಡುಬಂದಿದೆ. ಖಾನಟ್ಟಿಯ ಬಸವರಾಜ ನಿಂಗನೂರು 2 ಎಕರೆ ಸ್ವೀಟ್‌ಕಾರ್ನ್‌ ಹಾಕಿದ್ದರು. ಬೆಲೆ ಸಿಗದೆ ₹70ರಿಂದ ₹1 ಲಕ್ಷ ನಷ್ಟ ಅನುಭವಿಸಿದ್ದಾರೆ. ಎರಡು ಎಕರೆ ಕೊತ್ತಂಬರಿ ಬೆಳೆದಿರುವ ತುಕ್ಕಾನಟ್ಟಿಯ ಅಶೋಕ ಗದಾಡಿ, ಕುಂಬಳಕಾಯಿ ಬೆಳೆದಿರುವ ಬಾಳಪ್ಪ ಉಪ್ಪಾರ ಅವರೂ ನಷ್ಟಕ್ಕೆ ಒಳಗಾಗಿದ್ದಾರೆ.

ಮೂಡಲಗಿ ತಾಲ್ಲೂಕಿನ ಹಳ್ಳೂರ ಗ್ರಾಮದಲ್ಲಿ ಜಮೀನಿನಲ್ಲೇ ಉಳಿದಿರುವ ಮೆಣಸಿನಕಾಯಿ

ಮೂಡಲಗಿ ತಾಲ್ಲೂಕಿನ ಹಳ್ಳೂರ ಗ್ರಾಮದಲ್ಲಿ ಜಮೀನಿನಲ್ಲೇ ಉಳಿದಿರುವ ಮೆಣಸಿನಕಾಯಿ

ಬೆಳೆಗಾರರಿಗೆ ಸಂಕಷ್ಟ

ಸವದತ್ತಿ: ಕರ್ಫ್ಯೂನಿಂದಾಗಿ ಬೆಳೆಗಾರರು ಕಂಗಾಲಾಗಿದ್ದಾರೆ. ಹೊಟ್ಟೆ ಪಾಡು ನಡೆಸುವುದು ಹೇಗೆ ಎಂಬ ಚಿಂತೆ ಅವರದಾಗಿದೆ. ಹಳ್ಳಿಯಿಂದ ಪಟ್ಟಣಕ್ಕೆ ಬಂದು ಸಂತೆ ನಡೆಸುವಷ್ಟರಲ್ಲಿ ಎಲ್ಲವೂ ಬಂದ್ ಆಗಿರುತ್ತದೆ. ಕೆಲವರು ರಸ್ತೆಯಲ್ಲಿ ಚೆಲ್ಲಿ ಹೋದ ಘಟನೆಗಳು ನಡೆದಿವೆ. ‘ಸಹಜ ಸ್ಥಿತಿಯತ್ತ ಜೀವನ ಮರಳುತ್ತಿಲ್ಲ. ಹೀಗಾಗಿ, ತರಕಾರಿಗೆ ಬೆಲೆ ಇಲ್ಲದಂತಾಗಿದೆ’ ಎಂದು ರೈತ ಹುಸೇನಿ ನದಾಫ ನೊಂದು ಹೇಳಿದರು.

ಹಲವು ತೊಡಕು

ಎಂ.ಕೆ.ಹುಬ್ಬಳ್ಳಿ: ಸುತ್ತಲಿನ ಗ್ರಾಮಗಳಲ್ಲಿ ನಡೆಯುತ್ತಿದ್ದ ವಾರದ ಸಂತೆಗಳನ್ನು ರದ್ದುಗೊಳಿಸಲಾಗಿದೆ. ಸ್ವತಃ ಬಂದು ಅಥವಾ ವ್ಯಾಪಾರಿಗಳಿಗೆ ತರಕಾರಿಗಳನ್ನು ಮಾರಿ ಜೀವನ ದೂಡುತ್ತಿದ್ದ ರೈತರ ಸ್ಥಿತಿ ಸಂಕಷ್ಟಕ್ಕೆ ಸಿಲುಕಿದೆ. ಅಗತ್ಯ ಸಾರಿಗೆ ವ್ಯವಸ್ಥೆ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳತ್ತ ಸಾಗಿಸಲು ತೊಡಕು ಇರುವುದರಿಂದಾಗಿ, ತರಕಾರಿ ಹೊಲದಲ್ಲೇ ಕೊಳೆಯುತ್ತಿವೆ.

ರೈತರ ಬದುಕು ಮೂರಾಬಟ್ಟೆ

ಖಾನಾಪುರ: ತರಕಾರಿ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ.

ಇಟಗಿ, ಹಿರೇಮುನವಳ್ಳಿ, ಅವರೊಳ್ಳಿ, ಪಾರಿಶ್ವಾಡ, ಗಂದಿಗವಾಡ ಹಾಗೂ ಸುತ್ತಲಿನ ಗ್ರಾಮಗಳ ಸಾವಿರಾರು ರೈತರು ತಮ್ಮ ಜಮೀನುಗಳಲ್ಲಿ ದೊಡ್ಡಮೆಣಸಿನಕಾಯಿ, ಹಸಿಮೆಣಸಿನಕಾಯಿ, ಹಾಗಲಕಾಯಿ, ಸೌತೆಕಾಯಿ, ಟೊಮೆಟೊ, ಕ್ಯಾಬೇಜ್, ಹೂ ಕೋಸು ಬೀನ್ಸ್ ಮೊದಲಾದವುಗಳನ್ನು ಬೆಳೆದಿದ್ದಾರೆ. ಕೂಲಿ ಕಾರ್ಮಿಕರ ಕೊರತೆಯ ನಡುವೆಯೇ ಕಷ್ಟಪಟ್ಟು ಬೆಳೆದಿದ್ದು, ಈಗ ಮಾರುವುದೇ ಸವಾಲಾಗಿ ಪರಿಣಮಿಸಿದೆ. ನಷ್ಟದ ಸುಳಿಗೆ ಸಿಲುಕಿದ್ದಾರೆ.

ಮದುವೆ ಕಾಲ ಶುರುವಾಗಿದ್ದರಿಂದ ತರಕಾರಿ ಬೆಲೆಗಳು ಏರಲಿವೆ ಎಂದುಕೊಳ್ಳುವಷ್ಟರಲ್ಲೇ ಕೊರೊನಾ ಉಲ್ಬಣಿಸಿದ್ದು, ರೈತರ ಕನಸಿಗೆ ಕೊಳ್ಳಿ ಇಟ್ಟಿದೆ. ತಾಲ್ಲೂಕಿನ ಪಶ್ಚಿಮ ಭಾಗದ ರೈತರು ಗೋಡಂಬಿ ಮತ್ತು ಗಿಡ್ಡ ಮೆಣಸಿನಕಾಯಿ ಬೆಳೆಯುತ್ತಿದ್ದು, ಅವರ ಉತ್ಪನ್ನಗಳನ್ನು ಪ್ರತಿ ವರ್ಷ ಗೋವಾಕ್ಕೆ ಸಾಗಿಸಿ ಆದಾಯ ಕಾಣುತ್ತಿದ್ದರು. ಆದರೆ, ಈ ವರ್ಷ ಉತ್ತಮ ಫಸಲು ಇದ್ದರೂ ಖರೀದಿಸುವವರು ಇಲ್ಲದೆ ಮಾಡಿದ ಖರ್ಚು ಕೂಡ ಬಾರದ ಸ್ಥಿತಿಗೆ ತಲುಪಿದ್ದಾರೆ.

ಸಾಗಣೆ–ಮಾರುಕಟ್ಟೆ ಇಲ್ಲ

ಚಿಕ್ಕೋಡಿ: ಕೊರೊನಾ ಕಂಟಕದಿಂದಾಗಿ ಕೃಷಿ ಉತ್ಪನ್ನಗಳ ಸಾಗಣೆ ಮತ್ತು ಮಾರುಕಟ್ಟೆ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗುತ್ತಿರುವುದರಿಂದ ತರಕಾರಿ ಬೆಳೆಗಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮಾರಲಾಗದೆ ನಷ್ಟ ಅನುಭವಿಸುತ್ತಿದ್ದಾರೆ. ಹಿರೇಕೋಡಿ, ಕೇರೂರ, ನಣದಿ, ಯಕ್ಸಂಬಾ, ಬೆಳಕೂಡ, ನಾಗರಮುನ್ನೋಳಿ, ನಾಗರಾಳ, ನೇಜ, ಮಲಿಕವಾಡ, ಸಿದ್ದಾಪುರವಾಡಿ, ಉಮರಾಣಿ ಭಾಗದಲ್ಲಿ ವಿರಾರು ಎಕರೆ ಪ್ರದೇಶದಲ್ಲಿ ತರಕಾರಿ ಬೆಳೆ ಇದೆ. ಆದರೆ, ಬೇಡಿಕೆ ಇಲ್ಲವಾಗಿದೆ. ಜನರು ಹೆಚ್ಚಾಗಿ ತರಕಾರಿ ಖರೀದಿಗಾಗಿ ಮಾರುಕಟ್ಟೆಗೆ ಬರುತ್ತಿಲ್ಲ. ಪರಿಣಾಮ, ಬೇಡಿಕೆ ಕುಸಿದಿದೆ.

ದರ ಕುಸಿತದ ಕಾರಣ ಖಾನಾಪುರ ತಾಲ್ಲೂಕು ಪಾರಿಶ್ವಾಡ ಗ್ರಾಮದ ರೈತರೊಬ್ಬರು ಹೂ ಕೋಸನ್ನು ಕಟಾವು ಮಾಡದೆ ಜಮೀನಿನಲ್ಲೇ ಬಿಟ್ಟಿದ್ದಾರೆ

ದರ ಕುಸಿತದ ಕಾರಣ ಖಾನಾಪುರ ತಾಲ್ಲೂಕು ಪಾರಿಶ್ವಾಡ ಗ್ರಾಮದ ರೈತರೊಬ್ಬರು ಹೂ ಕೋಸನ್ನು ಕಟಾವು ಮಾಡದೆ ಜಮೀನಿನಲ್ಲೇ ಬಿಟ್ಟಿದ್ದಾರೆ

ಕ್ವಿಂಟಲ್‍ಗಟ್ಟಲೆ ಬೆಳೆದಿರುವ ರೈತರು ಪ್ರತ್ಯೇಕ ವಾಹನದ ಮೂಲಕ ತರಕಾರಿಯನ್ನು ಮಾರುಕಟ್ಟೆಗೆ ಸಾಗಿಸುತ್ತಾರೆ. ಆದರೆ, ಸಣ್ಣ ಹಿಡುವಳಿದಾರರು ಅಲ್ಪಸ್ವಲ್ಪ ತರಕಾರಿಯನ್ನು ಮಾರುಕಟ್ಟೆಗೆ ಒಯ್ಯಲು ಸಾರಿಗೆ ವ್ಯವಸ್ಥೆ ಮಾಡಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಆಯಾ ಗ್ರಾಮಗಳಲ್ಲೇ ಮನೆ ಮನೆಗೆ ಸಂಚರಿಸಿ ಬಂದಷ್ಟು ಬೆಲೆಗೆ ಮಾರುವ ಅನಿವಾರ್ಯ ಎದುರಾಗಿದೆ.

ಅಧಿಕಾರಿಗಳು ಕ್ರಮ ವಹಿಸಿಲ್ಲ

ಗೋಕಾಕ: ಇಲ್ಲಿನ ಕೃಷಿಕರು ಬೆಳೆಯನ್ನು ಮಾರುಕಟ್ಟೆಗೆ ತಂದು ಮಾರಾಟ ಮಾಡಲೂ ಆಗದ ಸ್ಥಿತಿಯಲ್ಲಿದ್ದಾರೆ. ಮಧ್ಯವರ್ತಿಗಳು ಲಾಭ ಪಡೆಯುತ್ತಿದ್ದಾರೆ. ಗ್ರಾಹಕರ ಮೇಲೆ ಹೊರೆ ಬೀಳುತ್ತಿದೆ.

ದುರದುಂಡಿಯ ಕೃಷಿಕ ರಾಮಪ್ಪ ಸಿದ್ದಪ್ಪ ರಾಜಾಪೂರ ಐದು ಎಕರೆ ಜಮೀನಲ್ಲಿ ಬೆಳೆದಿದ್ದ ಚೆಂಡೂ ಹೂವು ಮತ್ತು ಕೋಸಿಗೆ ಮದುವೆ ಸೀಸನ್‌ನಲ್ಲೂ ಬೆಲೆ ಸಿಗದೆ ನಷ್ಟ ಅನುಭವಿಸಿದ್ದಾರೆ. ಫಸಲನ್ನು ತಹಶೀಲ್ದಾರ್ ಕಚೇರಿ ಬಾಗಿಲಿಗೆ ತಂದು ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಭರವಸೆ ನೀಡಿ ಕೈತೊಳೆದುಕೊಂಡರೆ ಹೊರತು ಸಾಗಣೆಗೆ ವ್ಯವಸ್ಥೆ ಮಾಡಿಕೊಟ್ಟಿಲ್ಲ!

ಮಾರುವವರಿಗೆ ಲಾಭ: ಬೆಳೆಗಾರನಿಗೆ ನಷ್ಟ

ಚನ್ನಮ್ಮನ ಕಿತ್ತೂರು: ಹಸಿ ಮೆಣಸಿನಕಾಯಿ, ಬದನೆಕಾಯಿ, ಟೊಮೆಟೊ ಇತ್ಯಾದಿ ತೋಟಗಾರಿಕೆ ಬೆಳೆಗಳ ಬೆಲೆ ಏರಿಳಿತದ ‘ಜೂಜಾಟ’ದಲ್ಲಿ ಬೆಳೆಗಾರ ಹೆಚ್ಚು ನಷ್ಟ ಅನುಭವಿಸಿದ್ದೇ ಕಂಡು ಬರುತ್ತದೆ. ಯಾವಾಗಲಾದರೊಮ್ಮೆ ಒಳ್ಳೆಯ ದರ ಸಿಗುತ್ತದೆ. ಅನೇಕ ಬಾರಿ ಹಾಕಿದ್ದೂ ಮರಳಿ ಬರುವುದಿಲ್ಲ. ಸರಿಯಾದ ಬೆಲೆ ಸಿಗದಿರುವುದೇ ಇದಕ್ಕೆ ಎನ್ನುತ್ತಾರೆ ರೈತರು.

‘ಮೆಣಸಿನಕಾಯಿ, ಬದನೆಕಾಯಿಯನ್ನು ಧಾರವಾಡ ಮಾರುಕಟ್ಟೆಯಲ್ಲಿ ದಲ್ಲಾಳಿ ಬೇಡಿದ ದರಕ್ಕೆ ಕೊಟ್ಟು ಬಂದಿದ್ದೇನೆ. ಈಗ ಇವುಗಳನ್ನು ಕೊಯ್ಯುವುದನ್ನು ಬಿಟ್ಟಿದ್ದೇನೆ’ ಎನ್ನುತ್ತಾರೆ ನಿಚ್ಚಣಕಿ ರೈತ ಶಿವಾನಂದ ಹಿತ್ತಲಮನಿ.

ರಾಮದುರ್ಗ ತಾಲ್ಲೂಕಿನಲ್ಲೂ ರೈತರು ಹಾಗೂ ಗ್ರಾಹಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಮಾರಾಟಕ್ಕೆ ಸಮಯ ಸಾಲುತ್ತಿಲ್ಲ. ಹೀಗಾಗಿ ಬೇಡಿಕೆ ಕುಸಿದು ಕೃಷಿಕರು ಕೈಸುಟ್ಟುಕೊಳ್ಳುತ್ತಿದ್ದಾರೆ.

***

ಎರಡು ಎಕರೆ ಸ್ವೀಟ್‌ಕಾರ್ನ್ ಬೆಳೆದಿದ್ದು ಕೊರೊನಾದಿಂದ ಬೇಡಿಕೆ ಇಲ್ಲದೆ ₹ 70ರಿಂದ ₹ 80ಸಾವಿರ ನಷ್ಟ ಸಂಭವಿಸಿದೆ


-ಬಸವರಾಜ ನಿಂಗನೂರ, ಪ್ರಗತಿಪರ ರೈತ, ಖಾನಟ್ಟಿ, ಮೂಡಲಗಿ ತಾಲ್ಲೂಕು

***

ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ ಎಪಿಎಂಸಿಗಳ ಮೂಲಕ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಆಯಾ ಹೋಬಳಿ ಮತ್ತು ತಾಲ್ಲೂಕುಮಟ್ಟದಲ್ಲಿ ಅನುಕೂಲ ಕಲ್ಪಿಸಬೇಕು. ರೈತರಿಗೆ ನೆರವಾಗಬೇಕು


-ಶರದ ಕೇಶಕಾಮತ, ಸಾಮಾಜಿಕ ಕಾರ್ಯಕರ್ತ, ಮಾಡಿಗುಂಜಿ, ಖಾನಾಪುರ ತಾಲ್ಲೂಕು

***

ರೈತರ ಬೆಳೆಗೆ ಸರಿಯಾದ ಬೆಲೆ ದೊರೆಯುವಂತೆ ಸರ್ಕಾರ ಕ್ರಮ ವಹಿಸಬೇಕು. ಸಂಕಷ್ಟಗಳ ಪರಿಹಾರಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವರು ರೈತ ಮುಖಂಡರ ಸಭೆ ನಡೆಸಬೇಕು


-ಸಿದಗೌಡ ಮೋದಗಿ, ಅಧ್ಯಕ್ಷ, ಭಾರತೀಯ ಕೃಷಿಕ ಸಮಾಜ (ಸಂಯುಕ್ತ)

***

ರೈತರ ವ್ಯಾಪಾರಕ್ಕೆ ಸರ್ಕಾರ ಸಮಯ ನಿಗದಿಪಡಿಸಬಾರದು. ಮಾರ್ಗಸೂಚಿ ಪಾಲಿಸಿಕೊಂಡು ವ್ಯಾಪಾರಕ್ಕೆ ಅನುಕೂಲ ಕಲ್ಪಿಸಬೇಕು


-ಜಗದೀಶ ದೇವರಡ್ಡಿ, ಅಧ್ಯಕ್ಷ, ತಾಲ್ಲೂಕು ಘಟಕ, ಕರ್ನಾಟಕ ರೈತ ಸೇನೆ, ರಾಮದುರ್ಗ

***

(ಪ್ರಜಾವಾಣಿ ತಂಡ: ಎಂ. ಮಹೇಶ, ಬಾಲಶೇಖರ ಬಂದಿ, ಬಸವರಾಜ ಶಿರಸಂಗಿ, ಪ್ರಸನ್ನ ಕುಲಕರ್ಣಿ, ಬಾಲಶೇಖರ ಬಂದಿ, ರಾಮೇಶ್ವರ ಕಲ್ಯಾಣಶೆಟ್ಟಿ, ಚನ್ನಪ್ಪ ಮಾದರ, ಪ್ರದೀಪ ಮೇಲಿನಮನಿ, ಎಸ್. ವಿಭೂತಿಮಠ, ಸುಧಾಕರ ತಳವಾರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT