ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಜಿಲ್ಲೆಯಾದ್ಯಂತ ನಾಳೆ, ನಾಡಿದ್ದು ಸಂ‍ಪೂರ್ಣ ಲಾಕ್‌ಡೌನ್‌

Last Updated 21 ಮೇ 2021, 13:25 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯಲ್ಲಿ ಕೊರೊನಾ ವೈರಾಣು ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಹಾಗೂ ಸಾರ್ವಜನಿಕರ ಆರೋಗ್ಯ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮೇ 22ರ ಬೆಳಿಗ್ಗೆ 6ರಿಂದ ಮೇ 24ರ ಬೆಳಿಗ್ಗೆ 6ರವರೆಗೆ ಸಂಪೂರ್ಣ ಲಾಕ್‌ಡೌನ್‌ ಘೋಷಿಸಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಆದೇಶಿಸಿದ್ದಾರೆ.

‘ಈ ಅವಧಿಯಲ್ಲಿ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಸಂಚರಿಸಲು, ಅಗತ್ಯ ವಸ್ತುಗಳಾದ ಹಾಲು, ಔಷಧಿ ಪೂರೈಕೆ ಮತ್ತು ಖರೀದಿಗೆ ಹೋಗುವುದಕ್ಕೆ ತೊಂದರೆ ಇಲ್ಲ. ಅಂತರರಾಜ್ಯ ಮತ್ತು ಅಂತರಜಿಲ್ಲೆಗಳಿಗೆ ಸಂಚರಿಸುವ ಸರಕು ಹಾಗೂ ಸಾಗಣೆ ವಾಹನಗಳಿಗೆ, ಆ ದಿನಗಳಿಗೆ ಈಗಾಗಲೇ ಪೂರ್ವಾನುನುಮತಿ ಪಡೆದುಕೊಂಡು ನಿಗದಿಪಡಿಸಿರುವಂತಹ ಮದುವೆ ಸಮಾರಂಭಗಳಿಗೆ ಅವಕಾಶವಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.

‘ಆದೇಶ ಉಲ್ಲಂಘಿಸಿದವರ ವಿರುದ್ಧ ಭಾರತೀಯ ದಂಡ ಸಹಿಂತೆ 188ರ ಪ್ರಕಾರ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

ಲಾಕ್‌ಡೌನ್‌ ಮುನ್ನಾದಿನವಾದ ಶುಕ್ರವಾರ ಬೆಳಿಗ್ಗೆ 6ರಿಂದ 10ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು. ಲಾಕ್‌ಡೌನ್‌ ಆತಂಕದಲ್ಲಿ, ನೂರಾರು ಮಂದಿ ಮಾರುಕಟ್ಟೆಗೆ ಬಂದಿದ್ದರು. ಅಂತರ ಕಾಯ್ದುಕೊಳ್ಳುವಂತೆ ಮಾಡುವಲ್ಲಿ ಪೊಲೀಸರು ಹಾಗೂ ಪಾಲಿಕೆ ಮಾರ್ಷಲ್‌ಗಳು ಹರಸಾಹಸಪಟ್ಟರು. ಅನಗತ್ಯವಾಗಿ ಸಂಚರಿಸುತ್ತಿದ್ದವರಿಂದ ದ್ವಿಚಕ್ರವಾನಗಳನ್ನು ವಶಪಡಿಸಿಕೊಂಡ ಪೊಲೀಸರು, ಮಾಸ್ಕ್‌ ಧರಿಸಿದವರ ವಿರುದ್ಧ ಪ್ರಕರಣ ದಾಖಲಿಸುವ ಕಾರ್ಯಾಚರಣೆ ನಡೆಸಿದರು.

ಸಂಪೂರ್ಣ ಲಾಕ್‌ಡೌನ್ ಹಿನ್ನೆಲೆಯಲ್ಲಿ ಪೊಲೀಸರು ನಗರದಾದ್ಯಂತ ‘ಬ್ಯಾರಿಕೇಡ್‌ ಕೋಟೆ’ ನಿರ್ಮಿಸಿದ್ದಾರೆ. ಈ ಮುಂಚೆಯೇ ಘೋಷಿಸಿದಂತೆ, ಮೇ 24ರಂದು ಲಾಕ್‌ಡೌನ್‌ ಅನ್ವಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT