ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮನ್ನೆಲ್ಲ ಒಗ್ಗೂಡಿಸಲು ಯೋಗೇಶ್ವರ್ ಸಾಲ ಮಾಡಿದರು: ಸಚಿವ ರಮೇಶ ಜಾರಕಿಹೊಳಿ

Last Updated 14 ಜನವರಿ 2021, 13:07 IST
ಅಕ್ಷರ ಗಾತ್ರ

ಬೆಳಗಾವಿ: ‘ಬಿಜೆಪಿ ಸರ್ಕಾರ ರಚನೆಯಲ್ಲಿ ಸಿ.ಪಿ. ಯೋಗೇಶ್ವರ್ ಪಾತ್ರ ಬಹಳ ದೊಡ್ಡದಿದೆ. ನಮ್ಮನ್ನೆಲ್ಲ ಒಗ್ಗೂಡಿಸಲು ಅವರು ಮನೆ ಮೇಲೆ ₹ 9 ಕೋಟಿ ಸಾಲ ಮಾಡಿದರು. ಎಂ.ಟಿ.ಬಿ. ನಾಗರಾಜ್‌ ಕಡೆಯಿಂದಲೂ ಹಣ ತಂದಿದ್ದರು’ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ತಿಳಿಸಿದರು.

ಇಲ್ಲಿ ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಸೋತವರಿಗೆ ಕೊಟ್ಟರು ಎನ್ನುವುದು ಮುಖ್ಯವಲ್ಲ. ಯೋಗೇಶ್ವರ್‌ಗೆ ಅಂದು ನಮ್ಮನ್ನು ಒಗ್ಗೂಡಿಸುವುದು, ಆರೋಗ್ಯ ಕಡಿಸಿಕೊಳ್ಳುವುದು ಮತ್ತು ಸಾಲ ತಂದು ಮಾಡುವುದು ಯಾಕೆ ಬೇಕಿತ್ತು? ಈಗ ಮಾತನಾಡುವವರು ಆಗ ಎಲ್ಲಿದ್ದರು?’ ಎಂದು ಕೇಳಿದರು.

‘ಯೋಗೇಶ್ವರ್‌ಗೆ ಸಚಿವ ಸ್ಥಾನ ಸಿಕ್ಕಿರುವುದು ಸರಿಯಾಗಿದೆ ಮತ್ತು ಒಳ್ಳೆಯದಾಗಿದೆ. ಅವರು 14ರಿಂದ 15 ತಿಂಗಳು ಕುಟುಂಬ ಬಿಟ್ಟು ನಮ್ಮೊಂದಿಗೆ ಇದ್ದರು. ನನ್ನಷ್ಟೇ ಅವರೂ ಕಷ್ಟಪಟ್ಟಿದ್ದಾರೆ’ ಎಂದು ಸಮರ್ಥಿಸಿಕೊಂಡರು.

‘ಭ್ರಷ್ಟರಿಗೆ ರಮೇಶ ಸಾಥ್ ಕೊಡುತ್ತಿದ್ದಾರೆ’ ಎಂಬ ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ‘ಅವರು ಮಾತು ನಮಗೆ ಆಶೀರ್ವಾದವಿದ್ದಂತೆ. ಆ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ’ ಎಂದರು.

‘2023ರ ಚುನಾವಣೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಗೆದ್ದು ಹಕ್ಕು ಪಡೆದು ಸಚಿವರಾಗುವುದು ಒಳ್ಳೆಯದು. ಈಗಿನ ಸಂದರ್ಭವನ್ನು ತಿಳಿದುಕೊಳ್ಳಬೇಕು’ ಎಂದು ಅಸಮಾಧಾನಗೊಂಡಿರುವ ಶಾಸಕರಿಗೆ ಟಾಂಗ್ ನೀಡಿದರು.

‘ಮಿತ್ರ ಮಂಡಳಿ ಸದಸ್ಯರ ಪರವಾಗಿ ಬೀದಿಯ ಬದಲಿಗೆ, ಎಲ್ಲಿ ಮಾತನಾಡಬೇಕೋ ಅಲ್ಲಿ ಮಾತನಾಡುತ್ತೇನೆ. ಮುಂದಿನ ದಿನಗಳಲ್ಲಿ ಹೈಕಮಾಂಡ್ ಜೊತೆ ಮಾತನಾಡಿ ಮುನಿರತ್ನಗೆ ಮಂತ್ರಿ ಸ್ಥಾನ ಕೊಡಿಸುತ್ತೇವೆ. ನಾನು ಬಾಂಬೆ ತಂಡದ ನಾಯಕನಲ್ಲ. ನಾನು 17ನೇಯವನು. ಮುನಿರತ್ನಗೆ ಅವಕಾಶ ಸಿಗುವುದಿಲ್ಲ ಮತ್ತು ಎಚ್. ನಾಗೇಶ್ ಕೈಬಿಡಲಾಗುತ್ತದೆ ಎಂಬ ಕಲ್ಪನೆಯೇ ನನಗಿರಲಿಲ್ಲ. ದೊಡ್ಡ ಪಕ್ಷದಲ್ಲಿ ಅಸಮಾಧಾನ ಸಹಜ. ಅದನ್ನು ವರಿಷ್ಠರು ಸರಿಪಡಿಸುತ್ತಾರೆ’ ’ ಎಂದು ಪ್ರತಿಕ್ರಿಯಿಸಿದರು.

ಯತ್ನಾಳ್ ಸಿ.ಡಿ. ಬಗ್ಗೆ ಮಾತನಾಡಿದ್ದಾರಲ್ಲಾ ಎಂಬ ಪ್ರಶ್ನೆಗೆ, ‘ಸಿ.ಡಿ. ಇದೆಯೋ, ಇಲ್ಲವೋ ಗೊತ್ತಿಲ್ಲ. ಅಂತಹ ಸಿ.ಡಿ.ಗಳು ಬರುತ್ತವೆ, ಹೋಗುತ್ತವೆ. ರಾಜಕಾರಣದಲ್ಲಿ, ವೈಯಕ್ತಿಕ ಜೀವನದಲ್ಲಿ ಕಹಿ ಘಟನೆಗಳು ಇರುತ್ತವೆ. ಆ ಬಗ್ಗೆ ಮಾತಾಡಬಾರದು. ಕಷ್ಟದಲ್ಲಿದ್ದ ಯಾವುದೇ ಪಕ್ಷದ ರಾಜಕಾರಣಿಗಳಿಗೆ ನೈತಿಕ ಬೆಂಬಲ ನೀಡಬೇಕು. ಹಾನಿ ಮಾಡಬಾರದು. ರಾಜಕಾರಣ ಮಾಡಬಾರದು. ಯಡಿಯೂರಪ್ಪ ಬ್ಲ್ಯಾಕ್‌ಮೇಲ್‌ಗೆ ಹೆದರುವವರಲ್ಲ. ಜೀವನದುದ್ದಕ್ಕೂ ಹೋರಾಡಿಕೊಂಡೇ ಬಂದಿದ್ದಾರೆ. ಅವರ ಬಗ್ಗೆ ಯಾವುದೇ ಸಿ.ಡಿ. ಇಲ್ಲ’ ಎಂದರು.

‘ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ’
‘ಶಾಸಕ ಎಂ.ಪಿ. ರೇಣುಕಾಚಾರ್ಯ ಏನಾದರೂ ದಾಖಲೆಗಳಿದ್ದರೆ ಇಟ್ಟುಕೊಂಡು ಕೂರುವ ಬದಲಿಗೆ, ಬಿಡುಗಡೆ ಮಾಡುವುದು ಒಳ್ಳೆಯದು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೊಟ್ಟ ಮಾತಿನಂತೆ ನಡೆಯುತ್ತಾರೆ‌. ಅವರ ಬೆನ್ನಿಗೆ ನಾವು ನಿಲ್ಲುತ್ತೇವೆ’ ಎಂದರು.

‘ಮುರುಗೇಶ ನಿರಾಣಿ ಅವರು ಬಿ.ವೈ. ವಿಜಯೇಂದ್ರಗೆ ದುಡ್ಡು ಕೊಟ್ಟು ಸಚಿವರಾಗಿದ್ದಾರೆ’ ಎಂಬ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಅದು ಅವರ ವೈಯಕ್ತಿಕ ಹೇಳಿಕೆ. ಹಿರಿಯರಾದ ಅವರೂ ಮಂತ್ರಿ ಆಗಲೆಂಬ ಆಸೆ ನಮಗೂ ಇದೆ. ಮುಂದಿನ ದಿನಗಳಲ್ಲಿ ಅವರಿಗೆ ಒಳ್ಳೆಯದಾಗಲಿಲೆಂದು ಬಯಸುತ್ತೇನೆ’ ಎಂದು ಹೇಳಿದರು.

ನಾಯಕತ್ವ ಬದಲಾದರೆ ನಿಮ್ಮ ನಿಲುವೇನು ಎಂಬ ಪ್ರಶ್ನೆಗೆ, ‘ಯಡಿಯೂರಪ್ಪ ಪರ ಇರುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT