ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆಯಾಗುವಂತೆ ಯುವತಿಗೆ ಜೀವ ಬೆದರಿಕೆ

ಓರ್ವನ ಬಂಧನ: ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು
Published 25 ಮೇ 2024, 14:10 IST
Last Updated 25 ಮೇ 2024, 14:10 IST
ಅಕ್ಷರ ಗಾತ್ರ

ಬೆಳಗಾವಿ: ‘ನನ್ನನ್ನು ಪ್ರೀತಿಸಬೇಕು. ಇಲ್ಲದಿದ್ದರೆ ನೇಹಾ ಹಿರೇಮಠ ಮತ್ತು ಅಂಜಲಿ ಅಂಬಿಗೇರ ರೀತಿಯಲ್ಲೇ ನಿನ್ನ ಹತ್ಯೆ ಮಾಡುತ್ತೇನೆ ಎಂದು ತಾಲ್ಲೂಕಿನ ಕಿಣಯೇ ಗ್ರಾಮದಲ್ಲಿ ಯುವಕನೊಬ್ಬ ನನಗೆ ಜೀವ ಬೆದರಿಕೆ ಹಾಕುತ್ತಿದ್ದಾನೆ’ ಎಂದು ಯುವತಿ ಮಾಡಿದ ಆರೋಪದಡಿ ಒಬ್ಬನನ್ನು ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಿಣಯೇ ಗ್ರಾಮದ ತಿಪ್ಪಣ್ಣ ಡುಕರೆ(27) ಬಂಧಿತ.

‘ಕಳೆದ ಮೂರು ವರ್ಷಗಳಿಂದ ತಿಪ್ಪಣ್ಣ ನನಗೆ ಕಿರುಕುಳ ನೀಡುತ್ತಿದ್ದಾನೆ. ಪ್ರೀತಿಸಿ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಾನೆ. ಪ್ರೀತಿ ನಿರಾಕರಿಸಿದಕ್ಕೆ ಇತ್ತೀಚೆಗೆ ನನ್ನ ಮನೆಯ ಕಿಟಕಿ, ಗಾಜು ಒಡೆದು ಪುಂಡಾಟ ಮೆರೆದಿದ್ದಾನೆ. ಮದುವೆಯಾಗದಿದ್ದರೆ ಹತ್ಯೆ ಮಾಡುತ್ತೇನೆ’ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಯುವತಿ ಆರೋಪಿಸಿದ್ದಾರೆ.

‘ನಾನು ಬಿ.ಕಾಂ ಓದುತ್ತಿದ್ದೆ. ನಿತ್ಯ ಕಾಲೇಜಿಗೆ ಹೋಗುವಾಗ ರೇಗಿಸುತ್ತಿದ್ದ. ನಿಮ್ಮ ಮಗಳನ್ನು ಮದುವೆ ಮಾಡಿಕೊಡುವಂತೆ ನನ್ನ ತಾಯಿಗೂ ಬೆದರಿಕೆ ಹಾಕಿದ್ದ. ಮೂರು ವರ್ಷಗಳ ಹಿಂದೆ ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದೆವು. ಆಗ ಪೊಲೀಸರು ಎಚ್ಚರಿಕೆ ನೀಡಿದ್ದರಿಂದ ಸುಮ್ಮನಾಗಿದ್ದ ತಿಪ್ಪಣ್ಣ, ಇತ್ತೀಚೆಗೆ ಮತ್ತೆ ಕಿರಿಕಿರಿ ನೀಡಲು ಮುಂದಾಗಿದ್ದ’ ಎಂದು ದೂರಿದ್ದಾರೆ.

‘ನನ್ನ ಬೆಂಬಲಕ್ಕೆ ನಿಂತವರಿಗೂ ತಿಪ್ಪಣ್ಣ ಬೆದರಿಕೆ ಹಾಕಿದ್ದ. ಈ ವಿಷಯವನ್ನು ಯುವಕನ ಪಾಲಕರ ಗಮನಕ್ಕೆ ತಂದರೂ, ಅವರೂ ಆತನ ಬೆಂಬಲಕ್ಕೆ ನಿಂತಿದ್ದರು. ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ನನ್ನ ದೂರನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ್ದರು. ನಗರ ಪೊಲೀಸ್ ಕಮಿಷನರ್ ಗಮನಕ್ಕೆ ತಂದ ನಂತರ ದೂರು ಸ್ವೀಕರಿಸಿದರು. ನನಗೆ ನ್ಯಾಯ ಒದಗಿಸಿ’ ಎಂದು ಮನವಿ ಮಾಡಿದ್ದಾರೆ.

‘ಕಿಣಯೇ ಗ್ರಾಮದಲ್ಲಿ ಯುವತಿಗೆ ಜೀವ ಬೆದರಿಕೆ ನೀಡುತ್ತಿದ್ದ ಹಾಕಿದ್ದ ಯುವಕನನ್ನು ಬಂಧಿಸಿದ್ದೇವೆ. ತನಿಖೆ ಮುಂದುವರಿಸಿದ್ದೇವೆ’ ಎಂದು ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT