ಭಾನುವಾರ, ಜುಲೈ 25, 2021
22 °C
ಸಂಕಷ್ಟ

ಎನ್‌ಡಬ್ಲ್ಯುಕೆಎಸ್‌ಆರ್‌ಟಿಸಿ ಬೆಳಗಾವಿ ವಿಭಾಗಕ್ಕೆ ನಿತ್ಯ ಸರಾಸರಿ ₹68ಲಕ್ಷ ನಷ್ಟ!

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲ್ಯುಕೆಎಸ್‌ಆರ್‌ಟಿಸಿ) ಬೆಳಗಾವಿ ವಿಭಾಗಕ್ಕೆ ಪ್ರಸ್ತುತ ನಿತ್ಯ ಸರಾಸರಿ ಬರೋಬ್ಬರಿ ₹ 68 ಲಕ್ಷ ನಷ್ಟ ಉಂಟಾಗುತ್ತಿದೆ.

ನಿರ್ಬಂಧಗಳು ತೆರವುಗೊಳ್ಳದಿರುವುದು ಹಾಗೂ ಅಂತರರಾಜ್ಯ ಕಾರ್ಯಾಚರಣೆಗೆ ಅನುಮತಿ ದೊರೆಯದೆ ಇರುವುದರಿಂದ ಸದ್ಯಕ್ಕೆ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳಿಲ್ಲ.

ಕೊರೊನಾ ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ಜಾರಿಯಾಗಿರುವ ಲಾಕ್‌ಡೌನ್‌ನಿಂದಾಗಿ ಬಸ್‌ಗಳ ಸಂಚಾರ ನಿಲ್ಲಿಸಲಾಗಿತ್ತು. ಮೇ 19ರಿಂದ ಜಿಲ್ಲೆಯೊಳಗೆ ಹಾಗೂ ಅಂತರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಪುನರಾರಂಭ ಮಾಡಲಾಗಿದೆ. ಸಾಮಾನ್ಯ ದಿನಗಳಲ್ಲಿ ವಿಭಾಗಕ್ಕೆ ನಿತ್ಯ ಸರಾಸರಿ ₹ 75 ಲಕ್ಷ ವರಮಾನ ಬರುತ್ತಿತ್ತು. ಪ್ರಸ್ತುತ ₹ 6 ಲಕ್ಷದಿಂದ ₹ 7ಲಕ್ಷವಷ್ಟೇ ಆದಾಯವಿದೆ. ಪುನರಾರಂಭವಾದ ಅಂದರೆ ಮೇ 19ರಂದು ₹ 1 ಲಕ್ಷವಷ್ಟೇ ಆದಾಯ ಬಂದಿತ್ತು!

ಮೇ 19ರಿಂದ: ಸಾಮಾನ್ಯ ದಿನಗಳಲ್ಲಿ ಒಂದು ದಿನದಲ್ಲಿ ಬರುತ್ತಿದ್ದ ಆದಾಯ ಈಗ ಒಟ್ಟು 13 ದಿನಗಳಲ್ಲೂ (ಮೇ 31ರವರೆಗೆ) ಸಂಗ್ರಹವಾಗಿಲ್ಲ! ಇದರಿಂದಾಗಿ ವಿಭಾಗವು ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಪ್ರಸ್ತುತ ಬರುತ್ತಿರುವ ಆದಾಯವು ಡೀಸೆಲ್ ವೆಚ್ಚಕ್ಕೂ ಸಾಲುತ್ತಿಲ್ಲ ಎಂಬ ಮಾತು ಅಧಿಕಾರಿಗಳ ವಲಯದಲ್ಲಿ ಕೇಳಿಬರುತ್ತಿದೆ. ಅಂತರ ಜಿಲ್ಲೆಗಳಿಗೆ ಬಸ್‌ಗಳ ಓಡಾಟ ಆರಂಭವಾಗಿದೆಯಾದರೂ ಪ್ರಯಾಣಿಕರಿಂದ ಹೆಚ್ಚಿನ ಪ್ರತಿಕ್ರಿಯೆ ಕಂಡುಬರುತ್ತಿಲ್ಲ ಎನ್ನುತ್ತಾರೆ ಅವರು.

‘‌‌ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಬಸ್‌ ಒಂದರಲ್ಲಿ 30 ಮಂದಿ ಪ್ರಯಾಣಿಕರಿಗಷ್ಟೇ ಅವಕಾಶ ಕಲ್ಪಿಸಲಾಗಿದೆ. ಇಷ್ಟು ಕಡಿಮೆ ಸಂಖ್ಯೆಯ ಪ್ರಯಾಣಿಕರಿಗೆ ಬಸ್ ಓಡಿಸಿದರೆ, ಸಹಜವಾಗಿಯೇ ನಷ್ಟವಾಗುತ್ತದೆ’ ಎಂದು ಅಧಿಕಾರಿಗಳು ತಿಳಿಸಿದರು.

ಪ್ರತಿಕ್ರಿಯೆ ಇಲ್ಲ: ಲಾಕ್‌ಡೌನ್‌ನಿಂದ ಸಡಿಲಿಕೆ ದೊರೆತು ಬಸ್‌ಗಳ ಕಾರ್ಯಾಚರಣೆ ಆರಂಭವಾಗಿದ್ದರೂ ಪ್ರಯಾಣಿಸಲು ಜನರಿಂದ ಹೆಚ್ಚಿನ ಪ್ರತಿಕ್ರಿಯೆ ಕಂಡುಬರುತ್ತಿಲ್ಲ. ಇದರಿಂದಾಗಿ, ಹಲವು ಮಾರ್ಗಗಳಿಗೆ ಬಸ್‌ಗಳನ್ನು ಓಡಿಸುವ ಪ್ರಮೇಯವೇ ಕಂಡುಬರುತ್ತಿಲ್ಲ. ವಿಶೇಷವೆಂದರೆ ಇಲ್ಲಿಂದ ಬೆಂಗಳೂರು ಹೊರತುಪಡಿಸಿದರೆ ದೂರದ ಜಿಲ್ಲೆಗಳಿಗೆ ಬಸ್‌ಗಳ ಕಾರ್ಯಾಚರಣೆ ಭಾನುವಾರದವರೆಗೂ ನಡೆದಿಲ್ಲ.

ಈ ಕುರಿತು ಪ್ರತಿಕ್ರಿಯಿಸಿದ ವಿಭಾಗೀಯ ನಿಯಂತ್ರಣಾಧಿಕಾರಿ ಮಹಾದೇವಪ್ಪ ಮುಂಜಿ, ‘ವಿಭಾಗಕ್ಕೆ ಸಾಮಾನ್ಯ ದಿನಗಳಲ್ಲಿ ಹೊರ ರಾಜ್ಯಗಳೊಂದಿಗೆ ಎಲ್ಲ ಕಡೆಗೂ ಬಸ್‌ಗಳು ಓಡಾಡುತ್ತಿದ್ದವು. ಆಗ, ₹ 75 ಲಕ್ಷ ವರಮಾನ ಬರುತ್ತಿತ್ತು. ಲಾಕ್‌ಡೌನ್‌ನಿಂದ ಸಡಿಲಿಕೆ ದೊರೆತು ಕಾರ್ಯಾಚರಣೆ ಪುನರಾರಂಭವಾದ ಮೇಲೂ ನಷ್ಟ ಎದುರಾಗಿದೆ. ಕ್ರಮೇಣ ಪರಿಸ್ಥಿತಿ ಸುಧಾರಿಸುತ್ತಿದೆ. ಈಗ ₹ 6ರಿಂದ ₹ 7 ಲಕ್ಷ ಆದಾಯವಷ್ಟೇ ಬರುತ್ತಿದೆ. 692 ಟ್ರಿಪ್‌ಗಳ ಪೈಕಿ ಪ್ರಸ್ತುತ 400 ಟ್ರಿಪ್‌ ಕಾರ್ಯಾಚರಣೆಯಷ್ಟೇ ನಡೆಯುತ್ತಿದೆ. ನಷ್ಟವಾದರೂ ಸರಿ ಸಾರ್ವಜನಿಕರಿಗೆ ಸೇವೆ ನೀಡಬೇಕು ಎನ್ನುವ ಸಂಸ್ಥೆಯ ಸೂಚನೆ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದೇವೆ’ ಎಂದು ತಿಳಿಸಿದರು.

‘ದಿನದಿಂದ ದಿನಕ್ಕೆ ಪ್ರಯಾಣಿಕರಿಂದ ಪ್ರತಿಕ್ರಿಯೆ ದೊರೆಯುತ್ತಿದೆ. ಹೊರ ರಾಜ್ಯಗಳಿಗೆ ಬಸ್‌ಗಳ ಸಂಚಾರಕ್ಕೆ ಅನುಮತಿ ಸಿಕ್ಕಿಲ್ಲ. ಇತ್ತೀಚೆಗೆ  ಬೆಂಗಳೂರಿಗೆ ಗರಿಷ್ಠ 4 ಬಸ್‌ಗಳಷ್ಟೇ ಹೋಗುತ್ತಿವೆ. ಸೋಮವಾರದಿಂದ ಬೀದರ್, ಬಳ್ಳಾರಿ, ಮೈಸೂರಿಗೂ ಕಾರ್ಯಾಚರಣೆ ಆರಂಭಿಸಲಾಗಿದೆ. ನಿಲ್ದಾಣ ಹಾಗೂ ಬಸ್‌ಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪ್ರಯಾಣಿಕರು ಅಂತರ ಕಾಯ್ದುಕೊಳ್ಳುವುದಕ್ಕೂ ವ್ಯವಸ್ಥೆ ಮಾಡಲಾಗಿದೆ’ ಎಂದು ಹೇಳಿದರು.

‘ಕ್ರಮ ಕೈಗೊಳ್ಳಲಾಗುವುದು’
‘ಚಾಲಕರು ಹಾಗೂ ನಿರ್ವಾಹಕರೆಲ್ಲರಿಗೂ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಲಾಗಿದೆ. ಆದರೆ, ಕೆಲವರು ಬರುತ್ತಿಲ್ಲ. ಮೇ 19ರ ನಂತರವೂ ಅನಧಿಕೃತವಾಗಿ ಗೈರುಹಾಜರಾದವರ ವಿರುದ್ಧ ಸಂಸ್ಥೆಯು ಶಿಸ್ತುಕ್ರಮ ಜರುಗಿಸಲಿದೆ’ ಎಂದು ಮುಂಜಿ ತಿಳಿಸಿದರು.

‘ಚಾಲಕರು ಹಾಗೂ ನಿರ್ವಾಹಕರೆಲ್ಲರಿಗೂ ಮುಖಗವಸು, ಸ್ಯಾನಿಟೈಸರ್‌ ನೀಡಿದ್ದೇವೆ. ನೋಟುಗಳನ್ನು ಮುಟ್ಟುವ ಕಾರಣದಿಂದ ನಿರ್ವಾಹಕರಿಗೆ ಕೈಗವಸುಗಳನ್ನು ಒದಗಿಸಿದ್ದೇವೆ. ಪ್ರಯಾಣಿಕರನ್ನು ಥರ್ಮಲ್‌ ಸ್ಕ್ರೀನಿಂಗ್‌ಗೆ ಒಳಪಡಿಸುತ್ತಿದ್ದೇವೆ. ಹ್ಯಾಂಡ್ ಸ್ಯಾನಿಟೈಸರ್ ವ್ಯವಸ್ಥೆ ಮಾಡಿದ್ದೇವೆ’ ಎಂದು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು