ಸೋಮವಾರ, ಜುಲೈ 4, 2022
24 °C
2017ರಲ್ಲಿ ಮಾಡಿದ್ದ ಪೋಸ್ಟ್‌ ಸಂಬಂಧಿಸಿ ಪ್ರಕರಣ ದಾಖಲಾಗಿತ್ತು

ದಲಿತ ಹೋರಾಟಗಾರ ರವೀಂದ್ರ ಹಾರೋಹಳ್ಳಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕೋಡಿ/ ಬೆಳಗಾವಿ: ದಲಿತ ಹೋರಾಟಗಾರ ಹಾಗೂ ಬರಹಗಾರ ರವೀಂದ್ರ ಹಾರೋಹಳ್ಳಿ ಅವರನ್ನು ಜಿಲ್ಲೆಯ ಚಿಕ್ಕೋಡಿ ಠಾಣೆಯ ಪೊಲೀಸರು ಮೈಸೂರಿನ ಹಾರೋಹಳ್ಳಿಯಲ್ಲಿ ಶುಕ್ರವಾರ ಬಂಧಿಸಿದ್ದಾರೆ.

‘ಅವರನ್ನು, 2017ರ ಡಿಸೆಂಬರ್‌ನಲ್ಲಿ ವಾಟ್ಸ್‌ಆ್ಯಪ್‌ ಮತ್ತು ಫೇಸ್‌ಬುಕ್‌ನಲ್ಲಿ ಹಾಕಿದ್ದ ಪೋಸ್ಟ್‌ಗೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ. ಅವರು 2019ರಿಂದಲೂ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ನ್ಯಾಯಾಲಯದಿಂದ ಜಾಮೀನುರಹಿತ ವಾರೆಂಟ್ ಹೊರಡಿಸಲಾಗಿತ್ತು. ಅದನ್ನು ಆಧರಿಸಿ ಕ್ರಮ ಜರುಗಿಸಲಾಗಿದೆ’ ಎಂದು ಪಿಎಸ್‌ಐ ಯಮನಪ್ಪ ಮಾಂಗ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರಕರಣ ದಾಖಲಾದಾಗಿನಿಂದ ಅವರು ತಲೆಮರೆಸಿಕೊಂಡಿದ್ದರು. ನಾಲ್ಕೈದು ಬಾರಿ ನಮ್ಮ ಪೊಲೀಸರು ಅಲ್ಲಿಗೆ ತಂಡ ಅಲ್ಲಿಗೆ ಹೋಗಿದ್ದರೂ ಪತ್ತೆಯಾಗಿರಲಿಲ್ಲ. ನ್ಯಾಯಾಲಯಕ್ಕೂ ಹಾಜರಾಗಿರಲಿಲ್ಲ. ಶುಕ್ರವಾರ ಸಿಕ್ಕಿದ್ದಾರೆ. ಆರೋಪಿಯು ಇಲ್ಲಿಗೆ ತಲುಪಿದ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಅವರ ವಕೀಲರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ’ ಎಂದು ಹೇಳಿದರು.

ಚಿಕ್ಕೋಡಿ ಪಟ್ಟಣದ ಪ್ರಭುವಾಡಿ ನಿವಾಸಿ ಚಂದ್ರಶೇಖರ ಮುಂಡೆ ಎನ್ನುವವರು ಚಿಕ್ಕೋಡಿ ಠಾಣೆಯಲ್ಲಿ ನೀಡಿದ್ದ ದೂರು ಆಧರಿಸಿ ರವೀಂದ್ರ ವಿರುದ್ಧ ಪ್ರಕರಣ ದಾಖಲಾಗಿತ್ತು.

‘ಹಿಂದೂ ಧರ್ಮ ಹಾಗೂ ಹಿಂದೂ ದೇವರಾದ ಶ್ರೀಕೃಷ್ಣನ ಬಗ್ಗೆ ಉದ್ದೇಶಪೂರ್ವಕವಾಗಿ ಅತ್ಯಂತ ಹೀನಾಯವಾದ ಕೀಳು, ಅಸಹ್ಯ, ವಿಕೃತಿ ಹಾಗೂ ಅಸಂಬದ್ಧ ಪದಗಳನ್ನು ಬಳಸಿ ಮತೀಯ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ಪೋಸ್ಟ್‌ ಹಾಕಿದ್ದಾರೆ. ಎಲ್ಲರಿಗೂ ಹರಿಬಿಟ್ಟಿದ್ದಾರೆ. ಹಿಂದೂ ಧರ್ಮದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಲ್ಲದೆ, ಇಷ್ಟು ಮೀರಿಯೂ ನೀವು ಜಗಳ ಮಾಡುವುದಾದರೆ ಬನ್ನಿರಿ ನಾವು ಎಲ್ಲದಕ್ಕೂ ಸಿದ್ಧವಿದ್ದೇವೆ’ ಎಂದು ಪೋಸ್ಟ್‌ ಹಾಕಿ ಹಿಂದೂಗಳಿಗೆ ಅವಮಾನ ಮಾಡಿದ್ದಾರೆ’ ಎಂದು ಚಂದ್ರಶೇಖರ ಆರೋಪಿಸಿದ್ದರು.

ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ಚಿಕ್ಕೋಡಿ ತಾಲ್ಲೂಕು ಕರೋಶಿಯ ಚೇತನ ಹೊನ್ನಗೋಳ ಅವರನ್ನು ಈ ಹಿಂದೆಯೇ ಬಂಧಿಸಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದರು.

ರವೀಂದ್ರ ಬಂಧನದ ಬಗ್ಗೆ ಟ್ವೀಟ್ ಮಾಡಿರುವ ವಿಧಾನಪರಿಷತ್ ವಿರೋಧಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಸರ್ಕಾರದ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಮೊನ್ನೆ ಜಿಗ್ನೇಶ್, ಇಂದು ಹಾರೋಹಳ್ಳಿ ರವೀಂದ್ರ..!, ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್‌ ಮಾಡಿದ ಕಾರಣಕ್ಕೆ ದಲಿತಪರ ಹೋರಾಟಗಾರ, ಬರಹಗಾರರನ್ನು ಗುರಿಯಾಗಿಸಿಕೊಂಡು ಬಂಧಿಸುತ್ತಿರುವ ಬಿಜೆಪಿ ಸರ್ಕಾರದ ಫ್ಯಾಸಿಸ್ಟ್ ನಡೆಯನ್ನು ಖಂಡಿಸುತ್ತೇನೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯ ಮೇಲೆ ನಡೆಸುತ್ತಿರುವ ದಾಳಿ. ಕೂಡಲೇ ರವೀಂದ್ರ ಅವರನ್ನು ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು