ಬೆಳಗಾವಿ: ತಾಲ್ಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ ಮಳೆಯಿಂದಾಗಿ ಮನೆಯ ಗೋಡೆ ಕುಸಿದು ಮೃತರಾದ ಏಳು ಮಂದಿಯ ಕುಟುಂಬದವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಗುರುವಾರ ಸಾಂತ್ವನ ಹೇಳಿದರು. ರಾಜ್ಯ ಸರ್ಕಾರದಿಂದ ತಲಾ ₹ 5 ಲಕ್ಷ ಮೊತ್ತದ ಪರಿಹಾರ ಚೆಕ್‌ಗಳನ್ನು ವಿತರಿಸಿದರು.
ಘಟನೆಯಲ್ಲಿ ಒಂದೇ ಕುಟುಂಬದ ಇಬ್ಬರು ಬಾಲಕಿಯರು ಸೇರಿದಂತೆ 6 ಮಂದಿ ಹಾಗೂ ಎದುರು ಮನೆಯ ಬಾಲಕಿ ಬುಧವಾರ ಸಾವಿಗೀಡಾಗಿದ್ದರು. ಅವರಿಗೆ ತಲಾ ₹ 5 ಲಕ್ಷದಂತೆ ಒಟ್ಟು ₹ 35 ಲಕ್ಷ ಪರಿಹಾರವನ್ನು ಸರ್ಕಾರ ನೀಡಿದೆ.
ಈ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವರು, ‘ಮಹಾನವಮಿ ಅಮಾವಾಸ್ಯೆ ದಿನ ಬಡಾಲ ಅಂಕಲಗಿಯಲ್ಲಿ ಬಡವರ ಮನೆ ಬಿದ್ದು ಏಳು ಮಂದಿ ಸಾವಿಗೀಡಾಗಿರುವುದು ನೋವಿನ ಸಂಗತಿ. ಆ ನೋವು ತುಂಬಿಕೊಡಲು ಯಾರಿಂದಲೂ ಸಾಧ್ಯವಿಲ್ಲ. ನಾವು ಪರಿಹಾರ ಕೊಡಬಹುದಷ್ಟೆ. ತಲಾ ₹ 5 ಲಕ್ಷದಂತೆ ಸರ್ಕಾರಿಂದ ಚೆಕ್ ನೀಡಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅವರೂ ವಿಷಯ ತಿಳಿದ ಕೂಡಲೇ ತಲಾ ₹ 2 ಲಕ್ಷದಂತೆ ಪರಿಹಾರ ಕೊಡಲು ಮಂಜೂರಾತಿ ನೀಡಿದ್ದಾರೆ. ಆ ಬಡ ಕುಟುಂಬದ ಹಾಗೂ ಸರ್ಕಾರದ ಪರವಾಗಿ ಪ್ರಧಾನಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ತಿಳಿಸಿದರು.
‘ಮೂವರು ಮಕ್ಕಳಿಗೆ ತಲಾ ₹ 1 ಲಕ್ಷವನ್ನು ಮಕ್ಕಳ ಕಲ್ಯಾಣ ನಿಧಿಯಿಂದ ಕೊಡಲಾಗುವುದು. ಆ ಕುಟುಂಬದವರ ನೋವಿನೊಂದಿಗೆ ಇರುತ್ತೇವೆ. ಬಿದ್ದಿರುವ ಮನೆ ಕಟ್ಟಿಕೊಳ್ಳುವುಕ್ಕೆ ₹ 5 ಲಕ್ಷ ಧನಸಹಾಯ ಮಾಡಲಾಗುವುದು’ ಎಂದರು.
‘ಯಾವ್ಯಾವ ಗ್ರಾಮಗಳಲ್ಲಿ ಮಳೆ ಜಾಸ್ತಿ ಆಗುತ್ತದೆಯೋ ಅಲ್ಲಿ ದುಃಸ್ಥಿತಿಯಲ್ಲಿರುವ ಅಥವಾ ಶಿಥಿಲಾವಸ್ಥೆಯಲ್ಲಿರುವ ಮನೆಗಳ ಸಮೀಕ್ಷೆ ನಡೆಸಬೇಕು. ಆ ಮನೆಗಳವರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲು ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅಪಾಯದ ಪರಿಸ್ಥಿತಿಯಲ್ಲಿರುವ ಮನೆಗಳನ್ನು ದುರಸ್ತಿ ಮಾಡಿಸಿಕೊಡಬೇಕಾಗುತ್ತದೆ. ಸತ್ತ ಮೇಲೆ ಪರಿಹಾರ ಕೊಡುವುದು ಸಾಧುವಲ್ಲ. ಪ್ರಾಣ ಉಳಿಸಿಕೊಳ್ಳಲು ಆದ್ಯತೆ ನೀಡಬೇಕಾಗಿದೆ’ ಎಂದು ಹೇಳಿದರು.
‘ಚಿತ್ರದುರ್ಗ ದಾಟಿದ ನಂತರ ಬೀದರ್‌ವರೆಗೆ ಕಲ್ಲು–ಮಣ್ಣಿನ ಮನೆಗಳನ್ನೆ ಕಾಣುತ್ತೇವೆ. ಮುಂದಿನ ದಿನಗಳಲ್ಲಿ ಸಿಮೆಂಟ್‌ನಿಂದ ನಿರ್ಮಿಸಲು ಸರ್ಕಾರದಿಂದ ಸಹಾಯ–ಸಹಕಾರ ನೀಡಲಾಗುವುದು. ಶಿಥಿಲಾವಸ್ಥೆಯಲ್ಲಿರುವ ಶಾಲಾ–ಕಾಲೇಜುಗಳ ದುರಸ್ತಿಗೆ ಅನುದಾನ ನೀಡಲಾಗಿದೆ. ದುರಸ್ತಿ ಪ್ರಗತಿಯಲ್ಲಿದೆ’ ಎಂದು ಪ್ರತಿಕ್ರಿಯಿಸಿದರು.
ದುರ್ಘಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕಚೇರಿ ಟ್ವೀಟ್ ಮಾಡಿದೆ. ಪಿಎಂಎನ್‌ಆರ್‌ಎಫ್‌ನಲ್ಲಿ ತಲಾ ₹ 2 ಲಕ್ಷ ಪರಿಹಾರ ಒದಗಿಸಲಾಗುವುದು’ ಎಂದು ಎಂದು ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.