ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ| ಒಗ್ಗಟ್ಟಿನ ಮಂತ್ರ; ಅಭಿವೃದ್ಧಿಯಾದ ದಾಸ್ತಿಕೊಪ್ಪ ಗ್ರಾಮ

Published 3 ಆಗಸ್ಟ್ 2023, 3:31 IST
Last Updated 3 ಆಗಸ್ಟ್ 2023, 3:31 IST
ಅಕ್ಷರ ಗಾತ್ರ

ಎಸ್.ಬಿ.ವಿಭೂತಿಮಠ

ಎಂ.ಕೆ.ಹುಬ್ಬಳ್ಳಿ (ಬೆಳಗಾವಿ ಜಿಲ್ಲೆ): ಚನ್ನಮ್ಮನ ಕಿತ್ತೂರು ತಾಲ್ಲೂಕಿನ ದಾಸ್ತಿಕೊಪ್ಪ ಗ್ರಾಮ‌ಕ್ಕೆ ಹಿಂದಿನ ಸರ್ಕಾರದ ಅವಧಿಯಲ್ಲಿ ‘ಅಮೃತ ಗ್ರಾಮ’ ಯೋಜನೆಯಡಿ ದೊರೆತ ₹25 ಲಕ್ಷ ಪ್ರೋತ್ಸಾಹ ಧನ ಕಾಯಕಲ್ಪಕ್ಕೆ ಕಾರಣವಾಗಿದೆ.

ಆ ಹಣದಲ್ಲಿ ಗ್ರಾಮ ಪಂಚಾಯಿತಿ ಕಟ್ಟಡ ನವೀಕರಣದ ಜೊತೆಗೆ, ಉಪಕರಣಗಳು ಮತ್ತು ಸ್ವಚ್ಛತಾ ಸಾಮಗ್ರಿಗಳ ಖರೀದಿ ಆಗಿದೆ.

‌ಏನೇನು ಅಭಿವೃದ್ಧಿ?

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೈಟೆಕ್‌ ಸ್ಪರ್ಶ ನೀಡಲಾಗಿದೆ. ಗಟ್ಟಿಮುಟ್ಟಾದ ಚಾವಣಿ, ವರ್ಣಮಯ ಗೋಡೆಗಳು, ಮೈದಾನಕ್ಕೆ ಪೇವರ್ಸ್‌ ಅಳವಡಿಕೆ, ಆರ್‌ಒ ಪ್ಲ್ಯಾಂಟ್‌, ರಂಗಮಂಟಪ, ವ್ಯಾಯಾಮ ಸಾಮಗ್ರಿ, ಸುಸಜ್ಜಿತ ಶೌಚಾಲಯ, ಕಬಡ್ಡಿ ಮೈದಾನಕ್ಕೆ ಮ್ಯಾಟ್ ಅಳವಡಿಕೆ, ಸ್ಮಾರ್ಟ್‌ಬೋರ್ಡ್‌, ವಿದ್ಯುತ್‌ ವ್ಯವಸ್ಥೆ ಮಾಡಲಾಗಿದೆ.

ದಾಸ್ತಿಕೊಪ್ಪದಲ್ಲಿ ಜನರಿಗೆ ಮೂಲಸೌಕರ್ಯ ಒದಗಿಸಲು ಮೊದಲ ಆದ್ಯತೆ ನೀಡಲಾಗಿದೆ. ವಿವಿಧ ಮೂಲಗಳಿಂದ ಬಂದ ಅನುದಾನ ಸಮರ್ಪಕ ಬಳಕೆಯಿಂದಲೇ ಇದು ಸಾಧ್ಯವಾಗಿದೆ.
ಜಯರಾಮ್ ಕಾದ್ರೋಳ್ಳಿ, ಪಿಡಿಒ ದಾಸ್ತಿಕೊಪ್ಪ

ಅಂಗನವಾಡಿ ಪುಟಾಣಿಗಳಿಗೆ ಚಿಕ್ಕ ಕುರ್ಚಿಗಳು ಹಾಗೂ ಆಟಿಕೆ ಸಾಮಗ್ರಿಗಳನ್ನು ನೀಡಲಾಗಿದೆ. ಪ್ರತಿ ಮನೆಗೂ ಶೌಚಾಲಯವಿದ್ದು, ಕಳೆದ ವರ್ಷ ‘ಬಹಿರ್ದೆಸೆ ಮುಕ್ತ ಗ್ರಾಮ’ ಘೋಷಣೆ ಮಾಡಲಾಗಿದೆ.

ಚರಂಡಿಗಳ ವ್ಯವಸ್ಥೆ, ಕಾಂಕ್ರೀಟ್ ರಸ್ತೆಗಳ ನಿರ್ಮಾಣ, ಹೊಲದ ರಸ್ತೆಗಳ ದುರಸ್ತಿ, 11 ಸ್ಥಳಗಳಲ್ಲಿ ಹೈಮಾಸ್ಟ್‌ ಕಂಬ– ಬಲ್ಬ್‌ ಅಳವಡಿಕೆ, ಬೀದಿಗಳಲ್ಲಿ ಸೌರ ವಿದ್ಯುತ್‌ ವ್ಯವಸ್ಥೆ, ನೀರು ಶುದ್ಧೀಕರಣ ಘಟಕ, ಜಲ ಜೀವನ ಮಿಷನ್‌ ಅಡಿ ಪ್ರತಿ ಮನೆಗೆ ನಲ್ಲಿ ಸಂಪರ್ಕ, ಎರಡು ಸಮುದಾಯ ಭವನ, ಪ್ರತಿದಿನ ಮನೆಗೆ ತೆರಳಿ ಕಸ ಸಂಗ್ರಹಿಸಲು ವಾಹನ ವ್ಯವಸ್ಥೆ, ಸ್ವಚ್ಛತೆಗೆ ಪ್ರತ್ಯೇಕ ಸಿಬ್ಬಂದಿ ನಿಯೋಜನೆ; ಎಲ್ಲ ಆಯಾಮಗಳಲ್ಲೂ ಈ ಊರು ಸುಧಾರಣೆಯತ್ತ ಸಾಗಿದೆ. ಸ್ವಚ್ಛತೆ– ಅಭಿವೃದ್ಧಿ ಎಂಬ ಎರಡು ಗುರಿಗಳನ್ನು ಇಟ್ಟುಕೊಂಡು ಸದಸ್ಯರು ಮುಂದೆ ಸಾಗಿದ್ದಾರೆ.

ಮೊದಲ ಅವಧಿಯಲ್ಲಿ ನಾನು ಗ್ರಾಮ ಪಂಚಾಯಿತಿ ಅಧ್ಯಕ್ಷನಾಗಿದ್ದೆ. ಹಿಂದಿ‌ನ ಶಾಸಕ ವಿಧಾನ ಪರಿಷತ್‌ ಸದಸ್ಯರು ಅನುದಾನ ನೀಡಿದರು. ಇನ್ನೂ ಸಾಕಷ್ಟು ಕೆಲಸ ಮಾಡುವ ಕನಸಿದೆ.
ಉಮೇಶ ಶಿದ್ರಾಮನಿ, ಗ್ರಾ.ಪಂ ಉಪಾಧ್ಯಕ್ಷ ದಾಸ್ತಿಕೊಪ್ಪ

ಅನುದಾನ ವಿವರ

15ನೇ ಹಣಕಾಸು ಯೋಜನೆ ಅಡಿ ₹50 ಲಕ್ಷ, ನರೇಗಾದ ₹1 ಕೋಟಿ, ಜಿಲ್ಲಾ ಪಂಚಾಯಿತಿ ವಿಶೇಷ ಅನುದಾನ ₹10 ಲಕ್ಷ, ತಾಲ್ಲೂಕು ಪಂಚಾಯಿತಿಯಿಂದ ₹ 61 ಲಕ್ಷ, ಹಿಂದಿನ ಶಾಸಕರ ನಿಧಿ ₹97 ಲಕ್ಷ, ಇಬ್ಬರು ವಿಧಾನ ಪರಿಷತ್‌ ಸದಸ್ಯರ ನಿಧಿ ₹15 ಲಕ್ಷ, ರಾಜ್ಯಸಭೆ ಸದಸ್ಯರ ನಿಧಿ ₹5 ಲಕ್ಷ; ಹೀಗೆ ವಿವಿಧ ಮೂಲಗಳಿಂದ ಹಣ ತರುವಲ್ಲಿ ಸದಸ್ಯರು ಯಶಸ್ವಿಯಾಗಿದ್ದಾರೆ.

ದಾಸ್ತಿಕೊಪ್ಪದಲ್ಲಿ ಒಗ್ಗಟ್ಟಿನ ಕಾರಣ ಅಭಿವೃದ್ಧಿ ಸಾಧ್ಯವಾಗಿದೆ. ಅಧಿಕಾರಿಗಳು ಸಿಬ್ಬಂದಿ ಕೆಲಸವೂ ತೃಪ್ತಿ ತಂದಿದೆ. ತಾಲ್ಲೂಕಿನ ಇತರ ಗ್ರಾಮಗಳಿಗೂ ಈ ಮಾದರಿ ಅನುಸರಿಸಲಾಗುವುದು.
ಸುಭಾಷ ಸಂಪಗಾವಿ, ಕಾರ್ಯನಿರ್ವಹಣಾಧಿಕಾರಿ, ಕಿತ್ತೂರು ತಾ.ಪಂ

ಮೂರು ವರ್ಷಗಳ ಅವಧಿಯಲ್ಲಿ ಬಳಸಿಕೊಂಡ ಅನುದಾನ ₹4.50 ಕೋಟಿ. ಇದರಲ್ಲಿ ಜೆಜೆಎಂ ಹಾಗೂ ಶಾಲೆಯ ವಿಜ್ಞಾನ ಪ್ರಯೋಗಾಲಯದ ಕೆಲಸಗಳು ಪ್ರಗತಿಯಲ್ಲಿವೆ.

3,226ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಈ ಊರಿನಲ್ಲಿ ಎಂಟು ಮಂದಿ ಪಂಚಾಯಿತಿ ಸದಸ್ಯರಿದ್ದಾರೆ. ಎಲ್ಲರೂ ಪಕ್ಷಭೇದ ಮರೆತು ಬೆರೆತಿದ್ದರಿಂದ ಊರಿನಲ್ಲಿ ಸುಧಾರಣಾ ಕಾರ್ಯಗಳು ಆಗುತ್ತಿವೆ ಎನ್ನುವುದು ಜನರ ಅಭಿಪ್ರಾಯ.

ಚನ್ನಮ್ಮನ ಕಿತ್ತೂರು ತಾಲ್ಲೂಕಿನ ದಾಸ್ತಿಕೊಪ್ಪದ ಸುಸಜ್ಜಿತ ಗ್ರಂಥಾಲಯ / ಪ್ರಜಾವಾಣಿ ಚಿತ್ರ
ಚನ್ನಮ್ಮನ ಕಿತ್ತೂರು ತಾಲ್ಲೂಕಿನ ದಾಸ್ತಿಕೊಪ್ಪದ ಸುಸಜ್ಜಿತ ಗ್ರಂಥಾಲಯ / ಪ್ರಜಾವಾಣಿ ಚಿತ್ರ
ಚನ್ನಮ್ಮನ ಕಿತ್ತೂರು ತಾಲ್ಲೂಕಿನ ದಾಸ್ತಿಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನಕ್ಕೆ ಪೇವರ್ಸ್‌ ಅಳವಡಿಸಲಾಗಿದೆ / ಪ್ರಜಾವಾಣಿ ಚಿತ್ರ
ಚನ್ನಮ್ಮನ ಕಿತ್ತೂರು ತಾಲ್ಲೂಕಿನ ದಾಸ್ತಿಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನಕ್ಕೆ ಪೇವರ್ಸ್‌ ಅಳವಡಿಸಲಾಗಿದೆ / ಪ್ರಜಾವಾಣಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT