ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಾತ್ರೆಯಲ್ಲಿ ಪ್ರಾಣಿ ಬಲಿ ನಿಲ್ಲಲಿ: ದಯಾನಂದ ಶ್ರೀ

Published 5 ಜನವರಿ 2024, 15:37 IST
Last Updated 5 ಜನವರಿ 2024, 15:37 IST
ಅಕ್ಷರ ಗಾತ್ರ

ಬೆಳಗಾವಿ: ‘ಜಿಲ್ಲೆಯ ಅಥಣಿ ತಾಲ್ಲೂಕಿನ ಕೊಕಟನೂರು ಯಲ್ಲಮ್ಮ ದೇವಸ್ಥಾನದ ಜಾತ್ರೆ ಅಂಗವಾಗಿ ಪ್ರತಿ ವರ್ಷ ಪ್ರಾಣಿಗಳ ಬಲಿ ನಡೆಯುತ್ತಲೇ ಇದೆ. ಈ ಬಾರಿಯಾದರೂ ಜಿಲ್ಲಾಡಳಿತ ಇದಕ್ಕೆ ತಡೆಯೊಡ್ಡಬೇಕು’ ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ದಯಾನಂದ ಸ್ವಾಮೀಜಿ ಆಗ್ರಹಿಸಿದರು.

‘ಜ.6ರಿಂದ 11ರ ವರೆಗೆ ಜಾತ್ರೆ ನಡೆಯಲಿದೆ. ಕರ್ನಾಟಕ, ಮಹಾರಾಷ್ಟ್ರ, ಗೋವಾ ಭಾಗದಿಂದ ಅಪಾರ ಸಂಖ್ಯೆಯ ಭಕ್ತರು ಬರುತ್ತಾರೆ. ಬಹಳ ಜನ ಪ್ರಾಣಿ ಬಲಿ ನೀಡುವ ಹರಕೆ ತೀರಿಸುವುದು ನೂರಾರು ವರ್ಷಗಳಿಂದ ನಡೆದುಬಂದಿದೆ. ಜಿಲ್ಲಾಡಳಿತ, ತಾಲ್ಲೂಕು ಆಡಳಿತ, ಪೊಲೀಸ್‌ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಇದಕ್ಕೆ ತಡೆಯೊಡ್ಡಬೇಕು’ ಎಂದು ಅವರು ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

‘ಧರ್ಮದ ಹೆಸರಿನಲ್ಲಿ, ದೇವರ ನೆಪದಲ್ಲಿ ಕೋಳಿ, ಕುರಿ, ಆಡು, ಕೋಣ ಬಲಿ ನೀಡುವುದು ಅಪರಾಧ. ಕರ್ನಾಟಕ ಪ್ರಾಣಿ ಬಲಿ ಪ್ರತಿಬಂಧಕ ಅಧಿನಿಯಮ 1959, 1963, ತಿದ್ದುಪಡಿ ಕಾಯ್ದೆ 1975ರ ಪ್ರಕಾರ ಶಿಕ್ಷೆ ಇದೆ. ಇದರ ಅರಿವು ಇಲ್ಲದೇ ಜನರು ಬಲಿ ನೀಡುವುದು ಮುಂದುವರಿದಿದೆ. ಪ್ರಾಣಿ ದಯಾ ಮಂಡಳಿಯಿಂದ ಅರಿವು ಮೂಡಿಸುವುದು ಮತ್ತು ಬಲಿ ತಡೆಯುವ ಕೆಲಸವನ್ನು ನಿರಂತರ ಮಾಡಲಾಗುತ್ತಿದೆ. ಇದನ್ನು ಜಿಲ್ಲಾಡಳಿತ ಕೂಡ ಮಾಡಬೇಕು. ಈ ಬಗ್ಗೆ ಸ್ವತಃ ಸುಪ್ರೀಂಕೋರ್ಟ್‌ ಕೂಡ ಆದೇಶ ನೀಡಿದೆ’ ಎಂದರು.

‘ಪ್ರಾಣಿಗಳನ್ನು ಜಾತ್ರೆಗೆ ಕರೆತಂದ ಮೇಲೆ ತಡೆಯುವ ಬದಲು ದೂರದಲ್ಲೇ ತಡೆಯಬೇಕು. ಭಕ್ತಿಯ ಪರವಶದಲ್ಲಿ ಇದ್ದಾಗ ತಡೆಯಲು ಹೋದರೆ ಜನರು ವಿರೋಧ ವ್ಯಕ್ತಪಡಿಸುತ್ತಾರೆ’ ಎಂದೂ ಹೇಳಿದರು.

‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ–2020’ರ ಪ್ರಕಾರ ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಮಾಡಲಾಗಿದೆ. ಇದರ ಅನ್ವಯ ಯಾವುದೇ ವಯಸ್ಸಿನ ಹಸು, ಹೋರಿ ಅಥವಾ ಕರುವನ್ನು ಹತ್ಯೆ ಮಾಡುವುದು ಶಿಕ್ಷಾರ್ಹ ಅಪರಾಧ. 13 ವರ್ಷ ಮೇಲ್ಪಟ್ಟ ಎಮ್ಮೆ, ಕೋಣಗಳನ್ನೂ ಸಂಬಂಧಪಟ್ಟ ಅಧಿಕಾರಿಗಳ ಅನುಮತಿ ಇಲ್ಲದೇ ಹತ್ಯೆ ಮಾಡುವಂತಿಲ್ಲ. ಕಾನೂನು ಉಲ್ಲಂಘಿಸಿದರೆ 3ರಿಂದ 7 ವರ್ಷಗಳವರೆಗೆ ಶಿಕ್ಷೆ ಹಾಗೂ ₹50 ಸಾವಿರದಿಂದ ₹10 ಲಕ್ಷದವರೆಗೆ ದಂಡ ವಿಧಿಸಲು ಅವಕಾಶವಿದೆ. ಆದ್ದರಿಂದ ಪ್ರಾಣಿ ಬಲಿ ತಡೆಗೆ ಸಾರ್ವಜನಿಕರು ಕೈ ಜೋಡಿಸಬೇಕು’ ಎಂದೂ ಅವರು ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT