ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಸೋಂಕು ಹೆಚ್ಚಳ: ಕಂಗ್ರಾಳಿ, ಹಿಂಡಲಗಾ ಸೀಲ್‌ಡೌನ್‌

ಗ್ರಾಮಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಹಿರೇಮಠ ಸೂಚನೆ
Last Updated 12 ಜೂನ್ 2021, 9:26 IST
ಅಕ್ಷರ ಗಾತ್ರ

ಬೆಳಗಾವಿ: ‘ತಾಲ್ಲೂಕಿನ ಕಂಗ್ರಾಳಿ ಬಿ.ಕೆ. ಹಾಗೂ ಹಿಂಡಲಗಾ ಗ್ರಾಮಗಳ ವ್ಯಾಪ್ತಿಯಲ್ಲಿ ಕೋವಿಡ್–19 ಸೋಂಕಿನ‌ ಪ್ರಮಾಣ ಹೆಚ್ಚಳ ಆಗಿರುವುದರಿಂದಾಗಿ ಸರ್ಕಾರದ ಮಾರ್ಗಸೂಚಿ ಪ್ರಕಾರ ಸೀಲ್‌ಡೌನ್ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅಧಿಕಾರಿಗಳಿಗೆ ಸೂಚಿಸಿದರು.

ಆ ಭಾಗದಲ್ಲಿ ಶನಿವಾರ ಸಂಚರಿಸಿದ ಅವರು ಪರಿಸ್ಥಿತಿ ಅವಲೋಕಿಸಿದರು.

ನಗರದ 53 ಹಾಗೂ 54ನೇ ವಾರ್ಡ್‌ಗಳಿಗೆ ಭೇಟಿ ನೀಡಿದ ಅವರು, ಮನೆಯಲ್ಲಿಯೇ ಪ್ರತ್ಯೇಕವಾಗಿರುವ ಕೋವಿಡ್ ಸೋಂಕಿತರನ್ನು ಭೇಟಿಯಾದರು. ಮನೆಯ ಹೊರಗಿನಿಂದಲೇ ಸೋಂಕಿತರೊಂದಿಗೆ ಸಮಾಲೋಚನೆ ನಡೆಸಿ ಧೈರ್ಯ ತುಂಬಿದರು.

‘ಸರ್ಕಾರದ ಮಾರ್ಗಸೂಚಿ ಪ್ರಕಾರ ಔಷಧಿಗಳನ್ನು ಮನೆಗಳಿಗೆ ಕಳುಹಿಸಲಾಗಿದೆ. ವೈದ್ಯರ ನಿರ್ದೇಶನ ಪ್ರಕಾರ ಅವುಗಳನ್ನು ತೆಗೆದುಕೊಳ್ಳಬೇಕು. ಇದರೊಂದಿಗೆ ಉತ್ತಮ ಆಹಾರ ಸೇವಿಸಿದರೆ ಆದಷ್ಟು ಬೇಗನೆ ಗುಣಮುಖರಾಗಬಹುದು. ಆದ್ದರಿಂದ ವೈದ್ಯರು ನೀಡುವ ಸೂಚನೆಗಳನ್ನು ಚಾಚೂತಪ್ಪದೆ ಪಾಲಿಸಬೇಕು’ ಎಂದು ಸಲಹೆ ನೀಡಿದರು.

ಬೀಳ್ಕೊಡುಗೆ:ನಗರದ ಎಚ್‌.ಡಿ. ಕುಮಾರಸ್ವಾಮಿ ಬಡಾವಣೆಯಲ್ಲಿರುವ ಕೋವಿಡ್ ಕೇಂದ್ರದಲ್ಲಿ ಹಲವು ದಿನಗಳಿಂದ ಆರೈಕೆ ಪಡೆಯುತ್ತಿದ್ದ 7 ಮಂದಿಯನ್ನು ಶನಿವಾರ ಬೀಳ್ಕೊಡಲಾಯಿತು. ಅವರಿಗೆ ಜಿಲ್ಲಾಧಿಕಾರಿ ಹೂವುಗಳು ಹಾಗೂ ಸಸಿಗಳನ್ನು ನೀಡಿ ಶುಭಾ ಹಾರೈಸಿ ಬೀಳ್ಕೊಟ್ಟರು.

‘ಸೋಂಕಿತರನ್ನು ಮಾರ್ಗಸೂಚಿ ಪ್ರಕಾರ ಕೋವಿಡ್ ಕೇರ್ ಕೇಂದ್ರಗಳಿಗೆ ದಾಖಲಿಸಿ ಔಷಧೋಪಚಾರ ಹಾಗೂ ಊಟೋಪಹಾರ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಆರೈಕೆ ಪಡೆದು ಅವರು ಸಂಪೂರ್ಣ ಗುಣಮುಖರಾಗಿದ್ದಾರೆ’ ಎಂದು ತಿಳಿಸಿದರು.

‘ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಮತ್ತು ಲಕ್ಷಣರಹಿತ ಸೋಂಕಿತರಿಗೆ ಕೋವಿಡ್ ಕೇರ್ ಕೇಂದ್ರದಲ್ಲಿ ಪ್ರತ್ಯೇಕವಾಗಿರಿಸಿ ಆರೈಕೆ ಮಾಡಲು ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಆಯಾ ತಾಲ್ಲೂಕು ಮತ್ತು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಇರುವ ವಸತಿನಿಲಯಗಳಲ್ಲಿ ಸುಸಜ್ಜಿತ ಕೋವಿಡ್ ಕೇರ್ ಕೇಂದ್ರಗಳನ್ನು ಆರಂಭಿಸಲಾಗಿದೆ. ಲಕ್ಷಣರಹಿತ ಸೋಂಕಿತರು ಈ ಆರೈಕೆ ಕೇಂದ್ರಗಳ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಕಾಳಜಿ ವಹಿಸಿ:‘ಲಕ್ಷಣರಹಿತ ಸೋಂಕಿತರಿಗೆ ಔಷಧಿಗಳ ಜೊತೆಗೆ ಅತ್ಯುತ್ತಮ ಆಹಾರ ನೀಡಲಾಗುತ್ತಿದೆ. ಗುಣಮುಖರಾಗಿ ಮನೆಗೆ ತೆರಳಿದ ನಂತರವೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಪೌಷ್ಟಿಕ ಆಹಾರ ಸೇವಿಸುವ ಮೂಲಕ ಆರೋಗ್ಯ ವೃದ್ಧಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಡಿಸಿಪಿ ವಿಕ್ರಂ ಅಮಟೆ, ಮಹಾನಗರ ಪಾಲಿಕೆಯ ಆಯುಕ್ತ ಕೆ.ಎಚ್. ಜಗದೀಶ್, ಉಪ ವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ. ಮುನ್ಯಾಳ, ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ಡಾ.ಸಂಜಯ ಡುಮ್ಮಗೋಳ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT