ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸಿಸಿ ಬ್ಯಾಂಕ್‌ಗೆ ಶೇ 2ರಷ್ಟು ಸಹಾಯಧನ ಮುಂದುವರಿಯಲಿ; ರಮೇಶ ಕತ್ತಿ ಮನವಿ

Last Updated 10 ಮೇ 2022, 12:43 IST
ಅಕ್ಷರ ಗಾತ್ರ

ಬೆಳಗಾವಿ: ‘ಡಿಸಿಸಿ ಬ್ಯಾಂಕ್‌ಗಳಿಗೆ ಪ್ರಸ್ತುತ ನೀಡಲಾಗುತ್ತಿರುವ ಶೇ 2ರಷ್ಟು ಸಹಾಯಧನವನ್ನು ನಿಲ್ಲಿಸುವುದಾಗಿ ನಬಾರ್ಡ್‌ನಿಂದ ಈಚೆಗೆ ತಿಳಿಸಲಾಗಿದೆ. ಅದು ಅನುಷ್ಠಾನವಾದರೆ ವಾರ್ಷಿಕ ₹ 50 ಕೋಟಿ ಹಾನಿಯಾಗಲಿದ್ದು, ರೈತರಿಗೆ ತೀವ್ರ ತೊಂದರೆಯಾಗಲಿದೆ. ಇದಕ್ಕೆ ಅವಕಾಶ ಕೊಡಬಾರದು’ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ರಮೇಶ ಕತ್ತಿ ಕೋರಿದರು.

ಈ ವಿಷಯವನ್ನು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರ ಗಮನಕ್ಕೆ ತಂದ ಅವರು, ‘ಸಹಾಯಧನ ಮುಂದುವರಿಯುವಂತೆ ನೋಡಿಕೊಳ್ಳಬೇಕು. ಸಂಬಂಧಿಸಿದವರೊಂದಿಗೆ ವ್ಯವಹರಿಸಬೇಕು’ ಎಂದು ಮನವಿ ಮಾಡಿದರು.

ಬ್ಯಾಂಕ್‌ನಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘103 ವರ್ಷಗಳಿಂದ ಬ್ಯಾಂಕ್‌ ಸೇವೆ ಸಲ್ಲಿಸುತ್ತಿದೆ. ಕೋವಿಡ್ ಕಾರಣದಿಂದ ಶತಮಾನೋತ್ಸವ ಆಚರಿಸಲು ಆಗಿಲ್ಲ.‌ ಶತಮಾನೋತ್ಸವ ಭವನವನ್ನು ₹ 25.25 ಕೋಟ ವೆಚ್ಚದಲ್ಲಿ ನಿರ್ಮಿಸಲಾಗಿದೆ.‌ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್‌ ಶಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಹಕಾರ ಸಚಿವರನ್ನು ಆಹ್ವಾನಿಸಿ ಅಧಿಕೃತವಾಗಿ ಉದ್ಘಾಟಿಸಲಾಗುವುದು’ ಎಂದು ತಿಳಿಸಿದರು.

₹ 10ಸಾವಿರ ಕೋಟಿಗೆ ಹೆಚ್ಚಿಸುವ ಗುರಿ:

‘ಬ್ಯಾಂಕ್‌ನಿಂದ ₹ 2 ಕೋಟಿ ವೆಚ್ಚದಲ್ಲಿ ಚಿಕ್ಕಾಲಗುಡ್ಡದಲ್ಲಿ ಆಮ್ಲಜನಕ ಘಟಕ ನಿರ್ಮಿಸಲಾಗಿದೆ. 986 ಪಿಕೆಪಿಎಸ್‌ಗಳು ಸದಸ್ಯರಾಗಿ ಸಾಲ ಪಡೆದಿವೆ. ರೈತರಿಗೆ ವಿತರಿಸುತ್ತಿವೆ. 58 ಜನ ಬ್ಯಾಂಕ್ ಇನ್‌ಸ್ಪೆಕ್ಟರ್‌ಗಳಿದ್ದಾರೆ. ಇನ್ನಷ್ಟು ಮಂದಿಯನ್ನು ನೇಮಿಸಿಕೊಳ್ಳಲಾಗುವುದು. ಮೇಲ್ವಿಚಾರಣೆಗಾಗಿ ಎರಡು ಜಾಗೃತ ದಳಗಳನ್ನು ನೇಮಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಬ್ಯಾಂಕ್‌ನ 104 ಶಾಖೆಗಳಿವೆ. 2022ರ ಮಾರ್ಚ್‌ ಅಂತ್ಯಕ್ಕೆ ಒಟ್ಟು ₹ 5156.88 ಕೋಟಿ ಠೇವಣಿ ಸಂಗ್ರಹಿಸಿದೆ. ₹ 2,554.79 ಕೋಟಿಯನ್ನು ಅಲ್ಪಾವಧಿ ಬೆಳೆಗೆ, ₹ 1221.55 ಕೋಟಿಯನ್ನು ಸಕ್ಕರೆ ಕಾರ್ಖಾನೆಗಳಿಗೆ, ₹ 35,94 ಕೋಟಿಯನ್ನು ಗೃಹ ಸಾಲ, ₹ 59.56 ಕೋಟಿ ಬಂಗಾರ ಆಭರಣ, ₹ 22 ಕೋಟಿ ವಾಹನ, ₹ 28.12 ಕೋಟಿ ಸ್ವಸಹಾಯ ಸಂಘಗಳಿಗೆ ಸಾಲವಾಗಿ ನೀಡಲಾಗಿದೆ. 2021–22ನೇ ಸಾಲಿನಲ್ಲಿ ₹ 28.10 ಕೋಟಿ ಲಾಭ ಗಳಿಸಿದೆ’ ಎಂದು ವಿವರಿಸಿದರು.

‘5 ವರ್ಷಗಳಲ್ಲಿ ಶಾಖೆಗಳನ್ನು 125ಕ್ಕೆ ಹೆಚ್ಚಿಸುವ, ದುಡಿಯುವ ಬಂಡವಾಳವನ್ನು ₹ 10ಸಾವಿರ ಕೋಟಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ’ ಎಂದು ತಿಳಿಸಿದರು.

ಸಚಿವರಿಂದ ಮೆಚ್ಚುಗೆ:

ಪ್ರಗತಿ ಪರಿಶೀಲಿಸಿದ ಬಳಿಕ ಮಾತನಾಡಿದ ಸಚಿವರು ಬ್ಯಾಂಕ್‌ನ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

‘ರಾಜ್ಯದಲ್ಲೇ ಅತಿ ಹೆಚ್ಚು ಕೃಷಿ ಸಾಲ ನೀಡಿರುವುದು ಸಂತಸ ತಂದಿದೆ. ಸಾಲ ವಸೂಲಾತಿಯಲ್ಲೂ ಉತ್ತಮ ಸಾಧನೆಯಾಗಿದೆ. ಚಿನ್ನಾಭರಣ ಹಾಗೂ ಅಡಮಾನ ಸಾಲವನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡುವಂತೆ ಸೂಚಿಸಿದ್ದೇನೆ’ ಎಂದರು.

‘ನಬಾರ್ಡ್‌ನಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ರೈತರಿಗೆ ಸೇರಿದಂತೆ ಸಾಮಾನ್ಯ ವರ್ಗದವರಿಗೂ ವಿವಿಧ ಸಬ್ಸಿಡಿ ಸಾಲ ನೀಡಲಾಗುತ್ತಿದೆ. ಇದರ ಬಗ್ಗೆ ಅರಿವು ಮೂಡಿಸಬೇಕು’ ಎಂದರು.

ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಷ್ ಢವಳೇಶ್ವರ, ಸಹಕಾರ ಇಲಾಖೆಯ ಹೆಚ್ಚುವರಿ ನಿಬಂಧಕ ದಿವಾಕರ್, ಆಡಳಿತ ಮಂಡಳಿಯ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ವಿವಿಧ ಯೋಜನೆಯ ಫಲಾನುಭವಿಗಳಿಗೆ ಸಾಲ ಸೌಲಭ್ಯದ ಚೆಕ್‌ ವಿತರಿಸಿದರು.

4 ಸಕ್ಕರೆ ಕಾರ್ಖಾನೆಗಳಿಂದ ಬಾಕಿ

‘ಇಲ್ಲಿನ ಡಿಸಿಸಿ ಬ್ಯಾಂಕ್‌ಗೆ 4 ಸಕ್ಕರೆ ಕಾರ್ಖಾನೆಗಳು ಸಾಲ ಬಾಕಿ ಉಳಿಸಿಕೊಂಡಿವೆ’ ಎಂದು ಸಚಿವ ಸೋಮಶೇಖರ್ ತಿಳಿಸಿದರು.

‘ಗೋಕಾಕ ತಾಲ್ಲೂಕು ಘಟಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆಯು ₹ 22 ಕೋಟಿ ಅಸಲು, ₹ 39.20 ಕೋಟಿ ಬಡ್ಡಿ, ಖಾನಾಪುರದ ಭಾಗ್ಯಲಕ್ಷ್ಮಿ ಸಹಕಾರಿ ಸಕ್ಕರೆ ಕಾರ್ಖಾನೆಯು ₹ 2.89 ಕೋಟಿ ಸಾಲ, ₹ 3.65 ಕೋಟಿ ಬಡ್ಡಿ, ರಾಮದುರ್ಗ ತಾಲ್ಲೂಕು ಸಾಲಹಳ್ಳಿಯ ಶಿವಸಾಗರ ಶುಗರ್ಸ್‌ ₹ 31.04 ಕೋಟಿ ಸಾಲ, ₹ 28.12 ಕೋಟಿ ಬಡ್ಡಿ ಮತ್ತು ಬಾಗಲಕೋಟೆಯ ತೇರದಾಳದ ಸಾವರಿನ್‌ ಇಂಡಸ್ಟ್ರೀಸ್‌ ₹ 34.04 ಕೋಟಿ ಸಾಲ ಹಾಗೂ ₹ 28 ಕೋಟಿ ಬಡ್ಡಿ ಪಾವತಿಸುವುದು ಬಾಕಿ ಇದೆ. ವಸೂಲಾತಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT