ಬೆಳಗಾವಿ: ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಪಂಡಿತ ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠದ ವತಿಯಿಂದ ಬುಧವಾರ ಪಂಡಿತ ದೀನದಯಾಳ ಉಪಾಧ್ಯಾಯ ಅವರ 108ನೇ ಜಯಂತಿ ಆಚರಿಸಲಾಯಿತು.
ಚಲನಚಿತ್ರ ಕಲಾವಿದ ಸುಚೇಂದ್ರಪ್ರಸಾದ, ‘ಪ್ರತಿಯೊಬ್ಬರೂ ನಾಡಿಗೆ ತಮ್ಮದೇಯಾದ ಕೊಡುಗೆ ಸಮರ್ಪಿಸಬೇಕು. ಉತ್ತಮ ನಡೆ–ನುಡಿ ಬೆಳಸಿಕೊಳ್ಳಬೇಕು’ ಎಂದರು.
ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ, ‘ಇಂದು ಯುವಶಕ್ತಿಗೆ ಆರ್ಥಿಕ ಚೈತನ್ಯ ತುಂಬುವ ಕೆಲಸವಾಗಬೇಕಿದೆ. ಶಿಕ್ಷಣವು ಮಾನವತೆಯ ನಿರ್ಮಾಣದೊಂದಿಗೆ, ಬದುಕು ಸೃಷ್ಟಿಸುವ ಶಕ್ತಿಯಾಗಬೇಕು. ಸರ್ವರ ಪಾಲಿನ ಭಾಗ್ಯವಾಗಬೇಕು. ಜತೆಗೆ, ಸರ್ವರಿಗೂ ಭಾಗ್ಯದ ಬಾಗಿಲು ತೆರೆಯಬೇಕು’ ಎಂದರು.
ಕುಲಸಚಿವ ಸಂತೋಷ ಕಾಮಗೌಡ ಮಾತನಾಡಿದರು.
ನಿತೀಶ ಡಂಬಳ ರಚಿಸಿದ ‘ಭಾರತವ ಬೆಳಗಿದ ತೇಜಸ್ಸು’ ಕೃತಿಯನ್ನು ಇದೇವೇಳೆ ಬಿಡುಗಡೆಗೊಳಿಸಲಾಯಿತು. ಕಿರುತೆರೆ ನಟ ಅನಂತ ದೇಶಪಾಂಡೆ ಅವರು, ದ.ರಾ.ಬೇಂದ್ರೆ ದರ್ಶನ ಕುರಿತಾಗಿ ಭಾವಗೀತೆಗಳನ್ನು ಪ್ರಸ್ತುತಪಡಿಸಿದರು. ಪೀಠದ ಸಂಯೋಜಕ ಪ್ರೊ.ಬಿ.ಎಸ್.ನಾವಿ ಸ್ವಾಗತಿಸಿದರು. ಶಿವಲಿಂಗಯ್ಯ ಗೋಠೆ ವಂದಿಸಿದರು. ಗಜಾನನ ನಾಯ್ಕ ನಿರೂಪಿಸಿದರು.