ಶನಿವಾರ, ಮಾರ್ಚ್ 25, 2023
22 °C
ಲಕ್ಷ್ಮಿ ಪೂಜೆ, ಆಕರ್ಷಿಸುತ್ತಿರುವ ಆಕಾಶಬುಟ್ಟಿಗಳು

ಬೆಳಗಾವಿ ಜಿಲ್ಲೆಯಾದ್ಯಂತ ದೀಪಾವಳಿ ಸಡಗರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ದೀಪಾವಳಿ ಹಬ್ಬವನ್ನು ಜನರು ಸಂಭ್ರಮ–ಸಡಗರದಿಂದ ಗುರುವಾರ ಆಚರಿಸಿದರು.

ಮಹಿಳೆಯರು, ಯುವತಿಯರು ಹಾಗೂ ಬಾಲಕಿಯರು ಮನೆಗಳ ಮುಂದೆ ಬಣ್ಣ ಬಣ್ಣದ ರಂಗೋಲಿಗಳನ್ನು ಬಿಡಿಸಿದ್ದು ಆಕರ್ಷಿಸಿತು. ರಂಗೋಲಿಯಿಂದಲೇ ದೀಪಾವಳಿಯ ಶುಭಾಶಯ ಕೋರಿದ್ದು ಕೂಡ ಅಲ್ಲಲ್ಲಿ ಕಂಡುಬಂತು.

ಕೋವಿಡ್ ಭೀತಿ ಮರೆತು ಜನರು ಉತ್ಸಾಹದಿಂದ ಧಾರ್ಮಿಕ ಆಚರಣೆಗಳನ್ನು ಸಂಭ್ರಮದಿಂದ ನಡೆಸಿದರು. ಅಮಾವಾಸ್ಯೆಯೂ ಆಗಿದ್ದರಿಂದ ಜನರು ತಮ್ಮ ವಾಹನಗಳನ್ನು ತೊಳೆದು ಪೂಜೆ ಸಲ್ಲಿಸುವ ದೃಶ್ಯವೂ ಕಂಡುಬಂತು.

ಹಬ್ಬದ ಅಂಗವಾಗಿ ದೇಗುಲಗಳನ್ನು ತಳಿರು-ತೋರಣಗಳಿಂದ ಅಲಂಕರಿಸಲಾಗಿತ್ತು. ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದರು. ದಕ್ಷಿಣ ಕಾಶಿ ಖ್ಯಾತಿಯ ಕಪಿಲೇಶ್ವರ ಮಂದಿರ ಭಕ್ತರಿಂದ ತುಂಬಿ ಹೋಗಿತ್ತು.

ಅಮವಾಸ್ಯೆ ಪ್ರಯುಕ್ತ ಅಂಗಡಿ-ಮುಂಗಟ್ಟುಗಳು ಹಾಗೂ ಕಚೇರಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ದೀಪಾವಳಿ ಅಂಗವಾಗಿ ಮನೆಗಳು, ಅಂಗಡಿಗಳು, ವಾಣಿಜ್ಯ ಕೇಂದ್ರಗಳು ಹಾಗೂ ಕಾರ್ಖಾನೆಗಳು, ಕಾರ್ಯಾಗಾರಗಳು ಮೊದಲಾದ ಕೆಲಸದ ಸ್ಥಳಗಳಲ್ಲಿ ಲಕ್ಷ್ಮಿ ಪೂಜೆಯನ್ನು ನೆರವೇರಿಸಲಾಯಿತು.

ಬಹುತೇಕ ಮನೆಗಳಲ್ಲಿ ಅಕಾಶಬುಟ್ಟಿಗಳನ್ನು ಹಾಕಲಾಗಿದೆ. ಸಂಜೆಯಾಗುತ್ತಿದ್ದಂತೆಯೇ ಕುಟುಂಬದವರೆಲ್ಲರೂ ಸೇರಿ ಹಣತೆಗಳನ್ನು ಬೆಳಗಿಸಿ ಸಂಭ್ರಮಿಸಿದರು. ಮಹಿಳೆಯರು ಲಕ್ಷ್ಮಿ ಪೂಜೆ ನೆರವೇರಿಸಿದರು. ಮಕ್ಕಳು, ಯುವಕ-ಯುವತಿಯರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಕೆಲ ಮಕ್ಕಳು ತಮ್ಮ ಗಲ್ಲಿಯಲ್ಲಿ ನಿರ್ಮಿಸಿದ ಶಿವಾಜಿ ಮಹಾರಾಜರ ಇತಿಹಾಸ ಸಾರುವ ‘ಕೋಟೆ ಮಾದರಿ’ಗಳಿಗೆ ಅಂತಿಮ ಸ್ಪರ್ಶ ನೀಡುವ ಕಾರ್ಯದಲ್ಲಿ ತೊಡಗಿದ್ದರು.

ಬಲಿಪಾಢ್ಯಮಿ ಮುನ್ನಾದಿನವಾದ ಗುರುವಾರ, ಮಾರುಕಟ್ಟೆಯಲ್ಲಿ ಜನಜಂಗುಳಿ ಕಂಡುಬಂತು. ಗಣಪತಿ ಗಲ್ಲಿ, ಮಾರುತಿ ಗಲ್ಲಿ, ಖಡೇಬಜಾರ್, ರವಿವಾರ ಪೇಟೆ, ಶನಿವಾರ ಖೂಟ್, ಪಾಂಗುಳ ಗಲ್ಲಿ ಮೊದಲಾದ ಕಡೆಗಳಲ್ಲಿ ಖರೀದಿ ಭರಾಟೆ ಕಂಡುಬಂತು. ಪೂಜಾ ಸಾಮಗ್ರಿಗಳು, ಗೃಹೋಪಯೋಗಿ ವಸ್ತುಗಳು, ಅಲಂಕಾರಿಕ ವಸ್ತುಗಳು ಮತ್ತು ಬಟ್ಟೆಗಳ ಖರೀದಿ ಭರಾಟೆ ಜೋರಾಗಿತ್ತು.

ಕಾಕತಿವೇಸ್ ರಸ್ತೆ, ಹಳೇ ಪಿ.ಬಿ. ರಸ್ತೆ ಮೊದಲಾದ ಕಡೆಗಳಲ್ಲಿ ರಸ್ತೆಬದಿಯಲ್ಲಿ ಕಬ್ಬು, ಬಾಳೆ ಎಲೆ, ಹೂವು-ಹಣ್ಣು ವ್ಯಾಪಾರ ಜೋರಾಗಿತ್ತಯ. ದರ ಏರಿಕೆ ನಡುವೆಯೂ ಹಣತೆಗಳು, ಆಕಾಶಬುಟ್ಟಿಗಳು, ರಂಗೋಲಿ ಹಾಗೂ ಪೂಜಾ ಸಾಮಗ್ರಿಗಳನ್ನು ಜನರು ಖರೀದಿಸಿದರು.

ತೆಲಸಂಗ ವರದಿ

ಗ್ರಾಮದಲ್ಲಿ ಗುರುವಾರ ದೀಪಾವಳಿ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು.

ಅಂಗಡಿಕಾರರೆಲ್ಲ ಅಂಗಡಿಗಳ ಮುಂಭಾಗದಲ್ಲಿ ಬಾಳೆ ಕಂದು, ತೆಂಗಿನ ಗರಿ, ಕಬ್ಬು ಮತ್ತು ಅಲಂಕಾರಿಕ ವಸ್ತುಗಳನ್ನು ಕಟ್ಟಿ ಸಿಂಗರಿಸಿದ್ದರು. ಮುಖ್ಯ ಬಜಾರದಲ್ಲಿನ ಎರಡೂ ಬದಿಯ ಅಂಗಡಿಗಳು ಸಿಂಗಾರಗೊಂಡಿದ್ದವು. ಅಲ್ಲಿ ಮಾಲೀಕರು ಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ನೆರವೇರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.