ಗುರುವಾರ , ಮಾರ್ಚ್ 30, 2023
32 °C
ಬೆಲೆ ಏರಿಕೆ ಬಿಸಿ ನಡುವೆಯೂ ಹಬ್ಬಕ್ಕೆ ತಯಾರಿ

ಬೆಳಗಾವಿ: ದೀಪಾವಳಿಗೆ ಖರೀದಿ ಭರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಜನರು ಮುಗಿಬಿದ್ದಿದ್ದರಿಂದ ನಗರದ ಮಾರುಕಟ್ಟೆ ಪ್ರದೇಶಗಳಲ್ಲಿ ಜನಜಂಗುಳಿ ಕಂಡುಬಂತು.

ಇಲ್ಲಿನ ಖಡೇಬಜಾರ್, ಮಾರುತಿ ಗಲ್ಲಿ, ಗಣಪತಿ ಗಲ್ಲಿ, ಪಾಂಗುಳ ಗಲ್ಲಿ, ರವಿವಾರ ಪೇಟೆ, ಗುರುವಾರ ಪೇಟೆ, ಕಿರ್ಲೋಸ್ಕರ್‌ ರಸ್ತೆ ಮೊದಲಾದ ಕಡೆಗಳಲ್ಲಿ ಜನರು ಬಟ್ಟೆಗಳು, ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಯಲ್ಲಿ ತೊಡಗಿದ್ದು ಬುಧವಾರ ಕಂಡುಬಂತು. ಕಾರು ಮೊದಲಾದ ವಾಹನಗಳನ್ನು ಪೊಲೀಸರು ನಿರ್ಬಂಧಿಸಿದ್ದರಿಂದಾಗಿ ಮಾರುಕಟ್ಟೆ ಪ್ರದೇಶಕ್ಕೆ ಹೆಚ್ಚಿನ ಟ್ರಾಫಿಕ್ ಜಾಮ್ ಕಂಡುಬರಲಿಲ್ಲ. ಹಲವು ವಿನ್ಯಾಸದ ಹಣತೆಗಳು ಮತ್ತು ಆಕಾಶಬುಟ್ಟಿಗಳು ಗಮನಸೆಳೆದವು. ಅವುಗಳ ಖರೀದಿಯಲ್ಲಿ ಜನರು ತೊಡಗಿದ್ದರು.

ಹಬ್ಬದ ಹಿನ್ನೆಲೆಯಲ್ಲಿ ತರಕಾರಿ, ಹೂವು ಮತ್ತು ಹಣ್ಣುಗಳ ಬೆಲೆ ಗಗನಕ್ಕೇರಿತ್ತು. ಚಿಲ್ಲರೆ ಮಾರುಕಟ್ಟೆಯಲ್ಲಿ ಗುಲಾಬಿ ಕೆ.ಜಿ.ಗೆ ₹ 800 ಇತ್ತು. ಸೇವಂತಿಗೆ ಕೆ.ಜಿ.ಗೆ ₹ 600, ಹೂಮಾಲೆಗಳಿಗೆ ಸರಾಸರಿ ₹ 60ರಿಂದ ₹ 70 ಇತ್ತು. ಸೇಬು ಕೆ.ಜಿ.ಗೆ ಸರಾಸರಿ ₹ 120, ದಾಳಿಂಬೆ ಕೆ.ಜಿ.ಗೆ ₹ 120ರಿಂದ ₹ 150, ಚಿಕ್ಕು ಡಜನ್‌ಗೆ ₹ 100ರಿಂದ ₹ 120, ಮೋಸಂಬಿ ಕೆ.ಜಿ.ಗೆ ₹ 120 ಇತ್ತು. ಟೊಮೆಟೊ ಕೆ.ಜಿಗೆ ₹ 25ರಿಂದ ₹ 30, ಈರುಳ್ಳಿ ₹ 30 ಹಾಗೂ ಕ್ಯಾರೆಟ್ ₹60 ಇತ್ತು. ಪೂಜೆಗೆ ಇಡಲಾಗುವ ವಿವಿಧ ರೀತಿಯ ಐದು ಹಣ್ಣುಗಳ ಬೆಲೆ ಕೆ.ಜಿಗೆ ₹ 60ರಿಂದ ₹ 70 ಇತ್ತು. ಬೆಲೆ ಏರಿಕೆ ಬಿಸಿಯ ನಡುವೆಯೂ ಅಗತ್ಯ ವಸ್ತುಗಳನ್ನು ಖರೀದಿಸಿದ ಜನರು ಹಬ್ಬಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ.

ಪುಣೆ–ಬೆಂಗಳೂರು ರಸ್ತೆ ಸಮೀಪದ ಅಶೋಕನಗರದಲ್ಲಿರುವ ಪುಷ್ಪ ಹರಾಜು ಕೇಂದ್ರದಲ್ಲಿ ಭಾರಿ ಜನಜಂಗುಳಿ ಕಂಡುಬಂತು. ರೈತರು, ವ್ಯಾಪಾರಿಗಳು ಹಾಗೂ ಗ್ರಾಹಕರು ನೂರಾರು ಸಂಖ್ಯೆಯಲ್ಲಿ ಬಂದಿದ್ದರು. ಕೇಂದ್ರದ ಹೊರಗಿನ ರಸ್ತೆಗಳಲ್ಲೂ ವ್ಯಾಪಾರಿಗಳು ವಿವಿಧ ರೀತಿಯ ಹೂವುಗಳು ಮತ್ತು ಮಾಲೆಗಳನ್ನು ಇಟ್ಟುಕೊಂಡು ಮಾರುತ್ತಿದ್ದ ದೃಶ್ಯ ಕಂಡುಬಂತು. ಖರೀದಿ ಹಾಗೂ ವ್ಯಾಪಾರದ ಭರಾಟೆಯಲ್ಲಿದ್ದ ಗ್ರಾಹಕರು ಮತ್ತು ವ್ಯಾಪಾರಿಗಳು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸದಿರುವುದು ಸಾಮಾನ್ಯವಾಗಿತ್ತು.

‘ಹಿಂದಿನ ಎರಡು ವರ್ಷ ಕೋವಿಡ್ ಕಾರಣದಿಂದ ದೀಪಾವಳಿ ಹಬ್ಬ ಮಂಕಾಗಿತ್ತು. ಈ ಬಾರಿ ರೈತರು ಖುಷಿಯಾಗಿದ್ದಾರೆ. ಹೂವು ಚೆನ್ನಾಗಿದೆ. ರೈತರು ಹಾಗೂ ವ್ಯಾಪಾರಿಗಳೂ ಖುಷಿಯಾಗಿದ್ದಾರೆ. ಒಳ್ಳೆಯ ದರವೂ ಅವರಿಗೆ ಸಿಕ್ಕಿದೆ. ಈ ವರ್ಷ ಒಳ್ಳೆಯ ವಾತಾವರಣ ಇದೆ. ಹಲವು ರೀತಿಯ ಹೂವುಗಳು ಬಂದಿವೆ. ಗ್ರಾಹಕರಿಂದಲೂ ಉತ್ತಮ ಪ್ರತಿಕ್ರಿಯೆ ಬರುತ್ತಿದೆ’ ಎಂದು ಹುಕ್ಕೇರಿಯ ರೈತ ಸಂಜಯ ದೇಸಾಯಿ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು