7
ಸುವರ್ಣ ವಿಧಾನಸೌಧ ಬಳಿ ಧರಣಿ

ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಬೇಡಿಕೆ

Published:
Updated:
ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಉತ್ತರ ಕರ್ನಾಟಕ ವಿಕಾಸ ವೇದಿಕೆ ಹಾಗೂ ಹೋರಾಟ ಸಮಿತಿಗಳ ಸದಸ್ಯರು ಸುವರ್ಣ ವಿಧಾನಸೌಧದ ಬಳಿ ಮಂಗಳವಾರ ನಡೆಸಿದ ಧರಣಿಯಲ್ಲಿ ಸಂಚಾಲಕ ಅಶೋಕ ಪೂಜಾರಿ ಮಾತನಾಡಿದರು

ಬೆಳಗಾವಿ: ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎನ್ನುವುದೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಉತ್ತರ ಕರ್ನಾಟಕ ವಿಕಾಸ ವೇದಿಕೆ ಮತ್ತು ಹೋರಾಟ ಸಮಿತಿಗಳ ಸದಸ್ಯರು ಸುವರ್ಣ ವಿಧಾನಸೌಧದ ಬಳಿ ಮಳೆಯ ನಡುವೆಯೂ ಮಂಗಳವಾರ ಧರಣಿ ನಡೆಸಿದರು.

ಸುವರ್ಣ ವಿಧಾನಸೌಧ ಉತ್ತರ ಕರ್ನಾಟಕದ ಆಡಳಿತ ಶಕ್ತಿ ಕೇಂದ್ರವಾಗುವಂತೆ ನೋಡಿಕೊಳ್ಳಬೇಕು. ಪ್ರಮುಖ ಸಚಿವಾಲಯಗಳ ಕಚೇರಿಗಳನ್ನು ಇಲ್ಲಿಗೆ ಸ್ಥಳಾಂತರಿಸಬೇಕು. ಬೆಳಗಾವಿಯನ್ನು ರಾಜ್ಯದ 2ನೇ ರಾಜಧಾನಿಯನ್ನಾಗಿ ಘೋಷಿಸಬೇಕು. ಸಚಿವ ಸಂಪುಟ, ವಿವಿಧ ಸಮಿತಿಗಳ ಸಭೆ, ವರ್ಷದಲ್ಲಿ ಅರ್ಧ ಅಧಿವೇಶನವನ್ನು ಇಲ್ಲಿ ನಡೆಸಬೇಕು ಎಂದು ಒತ್ತಾಯಿಸಿದರು.

ಉತ್ತರ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ನಿಲೇಶ ಬನ್ನೂರ ಮಾತನಾಡಿ, ‘ದಕ್ಷಿಣ ಕರ್ನಾಟಕದಲ್ಲಿ ಆಗಿರುವ ಅಭಿವೃದ್ಧಿ ನೋಡಿದರೆ ಹೊಟ್ಟೆ ಉರಿಯುತ್ತದೆ. ಅನುಕೂಲವಾಗುವ ಯೋಜನೆಗಳನ್ನು ಅಲ್ಲಿ ಜಾರಿಗೊಳಿಸಲಾಗುತ್ತದೆ. ಜನರಿಗೆ ಪ್ರತಿಕೂಲ ಉಂಟು ಮಾಡುವ ಥರ್ಮಲ್ ಪ್ಲಾಂಟ್‌ನಂತಹ ಯೋಜನೆಯನ್ನು ಈ ಭಾಗಕ್ಕೆ ಕೊಡಲಾಗುತ್ತದೆ’ ಎಂದು ಕಿಡಿಕಾರಿದರು.‌ ‘ಬಜೆಟ್‌ನಲ್ಲಿ ಸಮಸ್ತ ಕರ್ನಾಟಕದ ‌ಹಿತ ಕಾಯುವ ಪ್ರಯತ್ನ ನಡೆದಿಲ್ಲ. ಮೈಸೂರು ಭಾಗಕ್ಕೆ ಮಾತ್ರ ಆದ್ಯತೆ ನೀಡಲಾಗಿದೆ. ಕುಮಾರಸ್ವಾಮಿ ಯಾವ ಭಾಗದ ಮುಖ್ಯಮಂತ್ರಿ ಎಂದು ಪ್ರಶ್ನಿಸಬೇಕಾಗಿದೆ’ ಎಂದರು.‌

ಬೆಂಕಿ ಹಾಕಿದರೆ:

‘ಉತ್ತರ ಕರ್ನಾಟಕವನ್ನು ಅಭಿವೃದ್ಧಿ ಮಾಡುವುದು ಸಾಧ್ಯ ಆಗುವುದಿಲ್ಲ ಎನ್ನುವುದಾದರೆ, ಪ್ರತ್ಯೇಕ ರಾಜ್ಯ ಮಾಡಿಬಿಡಲಿ. ನಮ್ಮ ಪಾಡನ್ನು ನಾವು ನೋಡಿಕೊಳ್ಳುತ್ತೇವೆ. ಇನ್ಮುಂದೆ ತಾರತಮ್ಯ ಸಹಿಸಲಾಗದು. ನಾಲ್ಕು ಬಸ್ ಗಳಿಗೆ ಬೆಂಕಿ ಹಚ್ಚಿದರೆ ದೊಡ್ಡ ಸುದ್ದಿಯಾಗುತ್ತದೆ. ಆಗಲಾದರೂ ನಮ್ಮ ನೋವು ವಿಧಾನಸೌಧಕ್ಕೆ ತಲುಪುತ್ತದೆ. ನಮ್ಮ ಸಂಪತ್ತು ಹಾಳು ಮಾಡಬಾರದೆಂದು ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದೇವೆ. ಸ್ಪಂದನೆ ದೊರೆಯದಿದ್ದರೆ ಸುವರ್ಣ ವಿಧಾನಸೌಧಕ್ಕೆ ಬೀಗ ಹಾಕಬೇಕಾಗುತ್ತದೆ, ಬೆಂಕಿ ಹಚ್ಚಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಉತ್ತರ ಕರ್ನಾಟಕ ವಿಕಾಸ ವೇದಿಕೆ ಸಂಚಾಲಕ ಅಶೋಕ ಪೂಜಾರಿ ಮಾತನಾಡಿ,‌ ‘ಬಜೆಟ್‌ನಲ್ಲಿ ಉತ್ತರ ಕರ್ನಾಟಕವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಇದು ಖಂಡನೀಯ ಹಾಗೂ ಪ್ರತ್ಯೇಕ ರಾಜ್ಯದ ಹೋರಾಟಕ್ಕೆ ಸರ್ಕಾರವೇ ಪ್ರೇರಣೆ ನೀಡಿದಂತಾಗಿದೆ. ಸಚಿವಾಲಯದ ಕಚೇರಿಗಳನ್ನು ಸುವರ್ಣ ವಿಧಾನಸೌದಕ್ಕೆ ಸ್ಥಳಾಂತರಿಸದಿದ್ದರೆ, ಅರ್ಧ ಅವಧಿಯ ಅಧಿವೇಶನವನ್ನು, ಸಚಿವ ಸಂಪುಟ ಸಭೆಗಳನ್ನು ಇಲ್ಲಿ ನಡೆಸದಿದ್ದರೆ ಹೋರಾಟ ತೀವ್ರ ಸ್ವರೂಪ ಪಡೆಯಲಿದೆ’ ಎಂದು ಎಚ್ಚರಿಸಿದರು.

ಮುಖಂಡ ಬಿ.ಆರ್. ಸಂಗಪ್ಪಗೋಳ ಮಾತನಾಡಿ, ‘ಎಲ್ಲ ಇಲಾಖೆಗಳಲ್ಲೂ ಉತ್ತರ ಹಾಗೂ ದಕ್ಷಿಣ ವಿಭಾಗ ಮಾಡಬೇಕು. ಸಂಬಂಧಿಸಿದ ಇಲಾಖೆಗಳ ಆಯುಕ್ತರು, ವ್ಯವಸ್ಥಾಪಕರು, ಮುಖ್ಯ ಅಧಿಕಾರಿಗಳು ಸುವರ್ಣ ವಿಧಾನಸೌಧದಲ್ಲಿ ಕೆಲಸ ಮಾಡಬೇಕು. ಅವರಿಗಾಗಿ ಬೆಂಗಳೂರಿನ ಎಂಎಸ್ ಬಿಲ್ಡಿಂಗ್ ಮಾದರಿಯಲ್ಲಿ ಇಲ್ಲೊಂದು ಕಟ್ಟಡ ನಿರ್ಮಿಸಲಿ’ ಎಂದು ಸಲಹೆ ನೀಡಿದರು.

‘ಚಿಕ್ಕೋಡಿಯನ್ನು ಜಿಲ್ಲೆ ಮಾಡುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ನಿಮ್ಮಲ್ಲಿನ ಜನಪ್ರತಿನಿಧಿಗಳೇ ಬೇಡ ಎನ್ನುತ್ತಿದ್ದಾರೆ ಎಂದು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಇದನ್ನು ಗಮನಿಸಿದರೆ, ಈ ಭಾಗದ ಅಭಿವೃದ್ಧಿಗೆ ರಾಜಕಾರಣವೇ ಅಡ್ಡಿಯಾಗಿದೆ. ಹೀಗಾಗಿ, ಜನಪ್ರತಿನಿಧಿಗಳನ್ನು ಎಚ್ಚರಿಸಲು ಅವರ ಮನೆಗಳಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಬೇಕು’ ಎಂದು ಹೇಳಿದರು.

ಮುಂಜಾಗ್ರತಾ ಕ್ರಮವಾಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !