ಕಾಗವಾಡ: ಬರ ಪರಿಹಾರಕ್ಕೆ ಆಗ್ರಹಿಸಿ ತಾಲ್ಲೂಕಿನ ಶಿರಗುಪ್ಪಿ ಗ್ರಾಮದ ರೈತರು ಗ್ರಾಮ ಲೆಕ್ಕಾಧಿಕಾರಿ ಕಚೇರಿಗೆ ಬೀಗ ಜಡಿದು ಮಂಗಳವಾರ ಪ್ರತಿಭಟನೆ ನಡೆಸಿದರು.
‘ಗ್ರಾಮದಲ್ಲಿ ಒಂದು ಸಾವಿರಕ್ಕೂ ಅಧಿಕ ರೈತರಿದ್ದೇವೆ. ಕೇವಲ ಶೇ 10% ರಷ್ಟು ರೈತರಿಗೆ ಮಾತ್ರ ಬರ ಪರಿಹಾರ ನೀಡಲಾಗಿದೆ. ಈ ಕುರಿತು ಗ್ರಾಮ ಲೆಕ್ಕಾಧಿಕಾರಿಗಳನ್ನು ವಿಚಾರಿಸಿದರೆ ಹಾರಿಕೆಯ ಉತ್ತರ ನೀಡುತ್ತಿದ್ದಾರೆ’ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
‘ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿ, ಎಲ್ಲರಿಗೂ ಬೆಳೆ ಪರಿಹಾರ ಒದಗಿಸಬೇಕು. ಅಲ್ಲಿಯವರೆಗೆ ಗ್ರಾಮ ಲೆಕ್ಕಾಧಿಕಾರಿ ಕಚೇರಿ ತೆರೆಯಲು ಬಿಡುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.