ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಯ ಈಡಿಗ ಸಮಾಜಕ್ಕೆ ನಿಗಮ ಸ್ಥಾಪಿಸಿ

ಸರ್ಕಾರಕ್ಕೆ ಪ್ರಣವಾನಂದ ರಾಮಸ್ವಾಮೀಜಿ ಆಗ್ರಹ
Last Updated 11 ಜುಲೈ 2021, 12:47 IST
ಅಕ್ಷರ ಗಾತ್ರ

ಬೆಳಗಾವಿ: ‘ಆರ್ಯ ಈಡಿಗ ಸಮಾಜದ ಸಂಘಟನೆ ಮತ್ತು ಸರ್ಕಾರದಿಂದ ಪಡೆಯಬೇಕಿರುವ ಸೌಲಭ್ಯಗಳ ಬಗ್ಗೆ ಚರ್ಚಿಸಲು ಜುಲೈ 25ರಂದು ಬೆಳಿಗ್ಗೆ 10ಕ್ಕೆ ಕೊಪ್ಪಳ ಜಿಲ್ಲೆ ಗಂಗಾವತಿಯ ಹೇಮಕೂಟದಲ್ಲಿ ಚಿಂತನ–ಮಂಥನ ಸಭೆ ಆಯೋಜಿಸಲಾಗಿದೆ’ ಎಂದು ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಆರೇಮಲ್ಲಾಪುರ ಶರಣಬಸವೇಶ್ವರ ಮಠದ ಪೀಠಾಧಿಪತಿ ಪ್ರಣವಾನಂದ ರಾಮಸ್ವಾಮೀಜಿ ತಿಳಿಸಿದರು.

‘ಸಮಾಜದ ಮುಖಂಡರು, ಹಾಲಿ, ಮಾಜಿ ಶಾಸಕರು, ಹಿರಿಯರು ಸೇರಿ 500 ಮಂದಿ ಪಾಲ್ಗೊಳ್ಳುವರು. ವಿವಿಧ ಬೇಡಿಕೆಗಳ ಬಗ್ಗೆ ಚರ್ಚಿಸಿ, ಅವುಗಳ ಈಡೇರಿಕೆಗಾಗಿ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು’ ಎಂದು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಭಾನುವಾರ ಹೇಳಿದರು.

‘ಸಮಾಜದ ಅಭಿವೃದ್ಧಿಗಾಗಿ ನಾರಾಯಣಗುರು ಹೆಸರಿನಲ್ಲಿ ಪ್ರತ್ಯೇಕ ನಿಗಮ ಸ್ಥಾಪಿಸಬೇಕು ಎನ್ನುವುದು ಪ್ರಮುಖ ಬೇಡಿಕೆಯಾಗಿದೆ. ಮಸ್ಕಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಸಂದರ್ಭದಲ್ಲಿ ತಮ್ಮೊಂದಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಪುತ್ರ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷರೂ ಆಗಿರುವ ಬಿ.ವೈ. ವಿಜಯೇಂದ್ರ ಮಾತುಕತೆ ನಡೆಸಿದ್ದರು. ಫಲಿತಾಂಶ ಪ್ರಕಟವಾದ ಮರು ದಿನವೇ ನಿಗಮ ಘೋಷಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಈವರೆಗೂ ಈಡೇರಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಾಠ ಕಲಿಸಬೇಕಾಗುತ್ತದೆ

‘ನಿಗಮ ಸ್ಥಾಪನೆ ಬೇಡಿಕೆ ತ್ವರಿತವಾಗಿ ಈಡೇರಿಸಬೇಕು. ಶಾಸಕ ಮಾಲೀಕಯ್ಯ ಗುತ್ತೇದಾರ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ರಾಜಕೀಯವಾಗಿ ನಮ್ಮ ಸಮಾಜಕ್ಕೆ ಆಗಿರುವ ಅನ್ಯಾಯ ಸರಿಪಡಿಸಬೇಕು. ಇವೆಲ್ಲ ಬೇಡಿಕೆ ಈಡೇರಿಸದಿದ್ದರೆ ಮುಂಬರುವ ಎಲ್ಲ ಚುನಾವಣೆಗಳಲ್ಲೂ ತಕ್ಕ ಪಾಠ ಕಲಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ನಮ್ಮ ಜೀವನಾಧಾರವಾಗಿದ್ದ ಈಚಲು ವನವನ್ನು ಕಿತ್ತುಕೊಂಡು ಆ ಪ್ರದೇಶವನ್ನು ಕೈಗಾರಿಕೆಗಳಿಗೆ ಕೊಡಲಾಗಿದೆ. ಉತಾರದಲ್ಲಿ ಈಚಲುವನ ಎಂದು ನಮೂದಾಗಿರುವುದನ್ನು ನಮ್ಮ ಸಮಾಜದವರಿಗೆ ವಾಪಸ್ ಕೊಡಬೇಕು. ಕೃಷಿ ಮಾಡಿ ಬದುಕಬೇಕಾದ ಪರಿಸ್ಥಿತಿ ನಮಗೆ ಬಂದಿದ್ದು, ಇದಕ್ಕಾಗಿ ನೆರವಾಗಬೇಕು. ಕೆಪಿಎಸ್‌ಸಿಯಲ್ಲಿ ಸಮಾಜದವರಿಗೆ ಸ್ಥಾನ ನೀಡಬೇಕು’ ಎಂದು ಒತ್ತಾಯಿಸಿದರು.

‘ಈಚಲು ಮರ ನಾಶವಾದಂತೆ ಇಡೀ ಸಮಾಜವನ್ನೇ ನಾಶ ಮಾಡುವುದಕ್ಕೆ ರಾಜಕೀಯ ಷಡ್ಯಂತ್ರ ನಡೆದಿರುವುದು ಗೊತ್ತಾಗಿದೆ. ಹೀಗಾಗಿ, ಸಮಾಜದವರ ಮಕ್ಕಳ ಭವಿಷ್ಯ ಕಾಪಾಡುವುದಕ್ಕಾಗಿ ಸಂಘಟಿತರಾಗುತ್ತಿದ್ದೇವೆ. ಸರ್ವ ಪಕ್ಷದಲ್ಲೂ ನಮ್ಮ ಸಮಾಜದ ಮುಖಂಡರಿದ್ದಾರೆ. ಸಮಾಜಕ್ಕೆ ನ್ಯಾಯ ಸಿಗದಿದ್ದರೆ ಮುಂಬರುವ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸಲಾಗುವುದು. ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುತ್ತೇವೆ’ ಎಂದು ತಿಳಿಸಿದರು.

ಪೂರ್ವಭಾವಿ ಸಭೆ

ಚಿಂತನ–ಮಂಥನ ಸಭೆ ಪೂರ್ವಭಾವಿಯಾಗಿ ನಗರದ ಹೆರಿಟೇಜ್ ರೆಸಾರ್ಟ್‌ನಲ್ಲಿ ಸಮಾಜದವರ ಸಭೆ ಭಾನುವಾರ ನಡೆಯಿತು. ಹೇಮಕೂಟದಲ್ಲಿ ಆಯೋಜಿಸಿರುವ ಸಭೆಗೆ ಜಿಲ್ಲೆಯಿಂದ 30 ಮುಖಂಡರು ತೆರಳಲು ನಿರ್ಧರಿಸಲಾಯಿತು.

ಮುಖಂಡರಾದ ಜಗದೀಶ್ ಐ.ಎಚ್., ಬಸವರಾಜ ಈಳಿಗಾರ, ಕುಮಾರ ಈಳಿಗಾರ, ರವಿ ಗುತ್ತೇದಾರ, ರಾಮಣ್ಣ ಈಳಿಗಾರ, ಬಾಬು ಮುಳಗುಂದ, ಉದಯ ಸೋಮನಹಟ್ಟಿ, ಡಾ.ಅಜಯ ಈಳಿಗಾರ, ವೆಂಕಟೇಶ ಈಳಿಗಾರ, ಪ್ರಕಾಶ ಮರಕುಂಬಿ, ಪ್ರವೀಣ ಈಳಿಗಾರ ಪಾಲ್ಗೊಂಡಿದ್ದರು.

ಸಮಸ್ಯೆಗಳಿವೆ

ಸಮಾಜದ ಬಹಳಷ್ಟು ಮಂದಿಗೆ ವಾಸ ಯೋಗ್ಯ ಮನೆಗಳಿಲ್ಲ. ಮನೆಗಳಿದ್ದರೂ ಶೌಚಾಲಯ ವ್ಯವಸ್ಥೆ ಇಲ್ಲ. ಬಹಳ ಹಿಂದುಳಿದಿದ್ದೇವೆ. ಸಾಕಷ್ಟು ಸಮಸ್ಯೆಗಳಿವೆ. ಇವುಗಳನ್ನು ಪರಿಹರಿಸಲು ಸರ್ಕಾರ ಕ್ರಮ ವಹಿಸಬೇಕು.

– ಪ್ರಣವಾನಂದ ರಾಮಸ್ವಾಮೀಜಿ

ಮುಖ್ಯಾಂಶಗಳು

ಜುಲೈ 25ರಂದು ಸಮಾಜದ ಸಭೆ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

ಈಚಲು ವನ ಪ್ರದೇಶ ನೀಡಲು ಒತ್ತಾಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT