ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲಡ್ಡು ವಿವಾದದ ನಂತರ ನಂದಿನಿ ತುಪ್ಪಕ್ಕೆ ಭಾರಿ ಬೇಡಿಕೆ: ಬಾಲಚಂದ್ರ ಜಾರಕಿಹೊಳಿ

Published : 23 ಸೆಪ್ಟೆಂಬರ್ 2024, 12:22 IST
Last Updated : 23 ಸೆಪ್ಟೆಂಬರ್ 2024, 12:22 IST
ಫಾಲೋ ಮಾಡಿ
Comments

ಬೆಳಗಾವಿ: ‘ತಿರುಮಲ ತಿರುಪತಿ ದೇವಸ್ಥಾನದಲ್ಲಿ ‘ಲಡ್ಡು’ ತಯಾರಿಕೆಗೆ ಪ್ರಾಣಿಗಳ ಕೊಬ್ಬು ಬಳಸಲಾಗುತ್ತಿತ್ತು ಎಂದು ಆಂಧ್ರಪ್ರದೇಶ ಸಿ.ಎಂ ಎನ್‌.ಚಂದ್ರಬಾಬು ನಾಯ್ಡು ಆರೋಪಿಸಿದ ನಂತರ, ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್‌) ತಯಾರಿಸಿದ ನಂದಿನಿ ತುಪ್ಪಕ್ಕೆ ದೇಶದಾದ್ಯಂತ ಜನರು ಮತ್ತು ದೇವಾಲಯಗಳಿಂದ ಭಾರಿ ಬೇಡಿಕೆ ಬಂದಿದೆ’ ಎಂದು ಜಿಲ್ಲಾ ಹಾಲು ಒಕ್ಕೂಟದ (ಬೆಮುಲ್‌) ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಕೆಎಂಎಫ್ ಅಧ್ಯಕ್ಷನಿದ್ದಾಗ, ತಿರುಮಲ ತಿರುಪತಿ ದೇವಸ್ಥಾನಕ್ಕೆ ‘ಲಡ್ಡು’ ತಯಾರಿಕೆಗೆ ತುಪ್ಪ ಕಳುಹಿಸುತ್ತಿದ್ದೆವು. ನಾವೇ ತಯಾರಿಸಿದ ತುಪ್ಪವನ್ನು ಪ್ರಸಾದಕ್ಕೆ ಬಳಸಲಾಗುತ್ತಿದೆ ಎಂಬ ಹೆಮ್ಮೆ ನಮಗೂ ಇತ್ತು. ನಾಲ್ಕು ವರ್ಷಗಳ ಹಿಂದೆ ದೇವಸ್ಥಾನದವರು ಟೆಂಡರ್ ವ್ಯವಸ್ಥೆ ಪರಿಚಯಿಸಿದರು. ಆಗ ಕಡಿಮೆ ಮೊತ್ತಕ್ಕೆ ತುಪ್ಪ ಪೂರೈಸುವ ಗುತ್ತಿಗೆಯನ್ನು ಖಾಸಗಿ ಏಜೆನ್ಸಿ ಪಡೆಯಿತು. ಆಗ ರಾಜಕೀಯ ಮುಖಂಡರೊಬ್ಬರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದರು. ಗುಣಮಟ್ಟದ ಕಾರಣಕ್ಕಾಗಿ ಕಡಿಮೆ ದರಕ್ಕೆ ತುಪ್ಪ ಪೂರೈಕೆಗೆ ನಾವು ನಿರಾಕರಿಸಿದೆವು’ ಎಂದರು.

‘ನಾವು ತಯಾರಿಸಿದ ತುಪ್ಪಕ್ಕೆ ಬೇರೆ ರಾಜ್ಯಗಳಿಂದಲೂ ಬೇಡಿಕೆ ಇತ್ತು. ಚಲನಚಿತ್ರ ನಟರಾಗಿದ್ದ ಪುನೀತ್ ರಾಜ್‌ಕುಮಾರ್ ನಮ್ಮ ಬ್ರ್ಯಾಂಡ್‌ ಅಂಬಾಸಿಡರ್ ಆಗಿದ್ದರು’ ಎಂದು ಅವರು ಹೇಳಿದರು.

‘ನಂದಿನಿ ತುಪ್ಪದಿಂದ ಲಡ್ಡು ತಯಾರಿಸಿದಾಗ, ಭಕ್ತರೂ ಸಂತಸ ವ್ಯಕ್ತಪಡಿಸಿದ್ದರು. ನಾಯ್ಡು ಮಾಡಿದ ಆರೋಪಗಳು ಈಗ ದೇಶದಾದ್ಯಂತ ಸಂಚಲನ ಸೃಷ್ಟಿಸಿದ್ದು, ತನಿಖೆ ಪ್ರಗತಿಯಲ್ಲಿದೆ. ಅವರ ಹೇಳಿಕೆಯಿಂದ ನಂದಿನಿ ತುಪ್ಪಕ್ಕೆ ದೇಶದಾದ್ಯಂತ ಬೇಡಿಕೆ ಹೆಚ್ಚಿದ್ದು, ನಾಲ್ಕು ವರ್ಷಗಳ ನಂತರ ತಿರುಮಲ ತಿರುಪತಿ ದೇವಸ್ಥಾನಕ್ಕೆ ಮತ್ತೆ ಪೂರೈಕೆ ಆರಂಭವಾಗಿದೆ. ಎಲ್ಲ ದೇವಾಲಯಗಳಲ್ಲಿ ‌ನಂದಿನ ತುಪ್ಪ ಬಳಸುವಂತೆ ಮನವಿ ಮಾಡುತ್ತೇನೆ’ ಎಂದು ತಿಳಿಸಿದರು.

‘ಕಳೆದ ವರ್ಷ ಬೆಮುಲ್‌ ₹68 ಲಕ್ಷ ಲಾಭ ಗಳಿಸಿದೆ. ಮುಂದಿನ ವರ್ಷ ₹2 ಕೋಟಿ ಲಾಭ ಗಳಿಸುವ ಗುರಿ ಹೊಂದಿದ್ದೇವೆ. ಮೆಗಾ ಡೇರಿ ಸ್ಥಾಪನೆಗೆ ಯೋಜನೆ ಹಾಕಿಕೊಂಡಿದ್ದೇವೆ. ದಿನಕ್ಕೆ 4 ಲಕ್ಷ ಲೀಟರ್‌ ಹಾಲು ಸಂಗ್ರಹವಾದರೆ, ಮೆಗಾ ಡೇರಿ ಸ್ಥಾಪಿಸಲು ಪ್ರಯತ್ನಿಸುತ್ತೇವೆ. ಅದು ಸ್ಥಾಪನೆಯಾದರೆ ಅನೇಕ ಹಾಲಿನ ಉತ್ಪನ್ನಗಳ ತಯಾರಿಕೆಗೆ ಅನುಕೂಲವಾಗಲಿದೆ’ ಎಂದರು.

ತುಪ್ಪದ ಗುಣಮಟ್ಟ ಪರೀಕ್ಷೆಗೆ ಸರ್ಕಾರದ ಆದೇಶಿಸಿರುವ ಕುರಿತು ಪ್ರತಿಕ್ರಿಯಿಸಿದ ಬಾಲಚಂದ್ರ, ‘ಸ್ಥಳೀಯ ಸಂಸ್ಥೆಗಳು ಇದನ್ನು ಮಾಡಬೇಕು. ಆದರೆ, ಅವು ಗಮನಹರಿಸುತ್ತಿಲ್ಲ. ತುಪ್ಪದ ಗುಣಮಟ್ಟದ ಪರೀಕ್ಷೆಗಾಗಿ ಮತ್ತು ಕಲಬೆರಕೆ ತುಪ್ಪ ಪತ್ತೆ ಹಚ್ಚಲು ಕೆಎಂಎಫ್‌ನವರೇ ಒಂದು ತಂಡವನ್ನು ರಚಿಸಬೇಕು’ ಎಂದು ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT