ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಕಾರರಿಗೆ ಶೇ 50 ರಿಯಾಯಿತಿಯಲ್ಲಿ ಕಚ್ಚಾ ಸಾಮಗ್ರಿ ಪೂರೈಸಲು ಒತ್ತಾಯ

Last Updated 7 ಜೂನ್ 2021, 16:50 IST
ಅಕ್ಷರ ಗಾತ್ರ

ಬೆಳಗಾವಿ: ಮಗ್ಗಗಳ ಮಾಲೀಕರಿಗೆ ಶೇ 50ರಷ್ಟು ರಿಯಾಯಿತಿಯಲ್ಲಿ ಕಚ್ಚಾ ಮಾಲು ಪೂರೈಸಬೇಕು ಎನ್ನುವುದು ಸೇರಿದಂತೆ ನೇಕಾರರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸೋಮವಾರ ಪತ್ರ ಬರೆದಿದೆ.

‘ನೆಲಕ್ಕೆ ಬಿದ್ದ ನೇಕಾರನನ್ನು ಮೇಲೆದ್ದು ನಿಲ್ಲುವಂತೆ ಮಾಡಬೇಕೇ ಹೊರತು ಕೇವಲ ₹ 3ಸಾವಿರ ಪರಿಹಾರದಿಂದ ಅವರ ಪರಿಸ್ಥಿತಿ ಸುಧಾರಿಸುವುದಿಲ್ಲ. ಮೂರು ವರ್ಷಗಳಿಂದ ಅವರ ಪರಿಸ್ಥಿತಿ ಹದಗೆಟ್ಟು ಹೋಗಿದೆ’ ಎಂದು ತಿಳಿಸಿದೆ.

‘2019ರಲ್ಲಿ ನೆರೆ ಮತ್ತು ಅತಿವೃಷ್ಟಿಯಿಂದಾಗಿ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಯಾದಗಿರಿ, ರಾಯಚೂರು ಮೊದಲಾದ ಕಡೆಗಳಲ್ಲಿನ ಸಹಸ್ರಾರು ನೇಕಾರರಿಗೆ ಅನ್ಯಾಯವಾಯಿತು. 50ಸಾವಿರ ಮಗ್ಗಗಳು ಪ್ರವಾಹದಲ್ಲಿ ಹಾನಿಗೆ ಒಳಗಾದರೂ ಸೂಕ್ತ ಪರಿಹಾರ ಸಿಗಲಿಲ್ಲ. ಪ್ರತಿ ಮಗ್ಗದ ಬದಲಿಗೆ ಪ್ರತಿ ಕುಟುಂಬಕ್ಕೆ ₹ 25ಸಾವಿರ ಪರಿಹಾರ ನೀಡಲಾಯಿತು. ಮುಖ್ಯಮಂತ್ರಿ ಹೇಳಿದ್ದೊಂದು ಆದೇಶವಾಗಿದ್ದೇ ಒಂದಾಯಿತು. ಸರ್ಕಾರದ ನಿರ್ಲಕ್ಷ್ಯವೇ ನೇಕಾರರಿಗೆ ಉರುಳಾಯಿತು. ಇದಕ್ಕೆ ಯಾರು ಹೊಣೆ’ ಎಂದು ಅಧ್ಯಕ್ಷ ಅಶೋಕ ಚಂದರಗಿ ಕೇಳಿದ್ದಾರೆ.

‘ಹೋದ ವರ್ಷ ಕೊರೊನಾದಿಂದ ನೇಕಾರರ ಬದುಕು ನೆಲಕಚ್ಚಿತು. ಸಿದ್ಧವಾಗಿದ್ದ 50 ಲಕ್ಷ ಸೀರೆಗಳು ಮಾರಾಟವಾಗದೆ ಉಳಿದವು. ಸೀರೆಗಳನ್ನು ಖರೀದಿಸುವುದಾಗಿ ರಾಜ್ಯ ಸರ್ಕಾರ ಆಗಿನಿಂದಲೂ ಹೇಳುತ್ತಲೇ ಬಂದಿತು. ಆದರೆ, ವರ್ಷವಾದರೂ ಭರವಸೆಯು ಭರವಸೆಯಾಗಿಯೇ ಉಳಿದಿದೆ. ಅಂದಾಜು ₹200 ಕೋಟಿ ಮೌಲ್ಯದ ಸೀರೆಗಳು ಮಾರಾಟವಾಗದೆ ಉಳಿದಿವೆ. ಪರಿಣಾಮ ಈ ವರ್ಷ ಮಗ್ಗಗಳು ಸ್ತಬ್ಧಗೊಂಡಿವೆ. ಕಾರ್ಮಿಕರ ಜೊತೆಗೆ ಮಾಲಿಕರೂ ಹೈರಾಣಾಗಿದ್ದಾರೆ. ಅನೇಕ ಕಾರ್ಮಿಕರು ಆತ್ಮಹತ್ಯೆ ದಾರಿ ಹಿಡಿದಿದ್ದಾರೆ’ ಎಂದು ತಿಳಿಸಿದ್ದಾರೆ.

‘ಕಚ್ಚಾ ಮಾಲಿನ ಪೂರೈಕೆಯಾಗದೆ ಮಗ್ಗಗಳು ಪುನರಾರಂಭಗೊಳ್ಳುವುದು ಸಾಧ್ಯವಿಲ್ಲ. ಮಗ್ಗಗಳು ಆರಂಭವಾಗದೆ ಕಾರ್ಮಿಕರ ಕೈಗಳಿಗೆ ಉದ್ಯೋಗ ಸಿಗದು. ಹೀಗಾಗಿ, ಮಗ್ಗಗಳ ಮಾಲೀಕರಿಗೆ ಶೇ 50ರಷ್ಟು ರಿಯಾಯಿತಿ ದರದಲ್ಲಿ ಕಚ್ಚಾ ಸಾಮಗ್ರಿ ಪೂರೈಸಬೇಕು. ನೇಕಾರರಿಂದ ಸೀರೆಗಳ ಖರೀದಿಗೆ ಕ್ರಮ ಕೈಗೊಳ್ಳಬೇಕು. ಮಾರಾಟವಾಗದೆ ಉಳಿದ ಸೀರೆಗಳನ್ನು ಅಡುವಿಟ್ಟುಕೊಂಡು ಶೇ 2ರಷ್ಟು ಬಡ್ಡಿ ಆಧಾರದ ಮೇಲೆ ಸಾಲ ಕೊಡುವ ‘ಸೀರೆ ಬ್ಯಾಂಕ್ ಸ್ಥಾಪನೆ’ ಕ್ರಮ ಕೈಗೊಂಡರೆ ನೇಕಾರರು ಪ್ರಸಕ್ತ ಬಿಕ್ಕಟ್ಟಿನಿಂದ ಪಾರಾಗಬಹುದಾಗಿದೆ. ಈ ನಿಟ್ಟಿನಲ್ಲಿ ಗಮನಹರಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT