ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರ ಅನರ್ಹತೆ; ತಮ್ಮನ ಹಾದಿಯಲ್ಲಿ ಅಣ್ಣ...!

ಸುಪ್ರೀಂ ಕೋರ್ಟ್‌ ಮೊರೆಹೋಗಲು ಚಿಂತನೆ
Last Updated 1 ಡಿಸೆಂಬರ್ 2019, 11:29 IST
ಅಕ್ಷರ ಗಾತ್ರ

ಬೆಳಗಾವಿ: ಇತಿಹಾಸ ಮತ್ತೆ ಮರುಕಳಿಸಿದೆ... ಬೆಳಗಾವಿ ರಾಜಕಾರಣ ಮತ್ತೆ ರಾಜ್ಯ– ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತಿದೆ. 2010ರಲ್ಲಿ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದ ಅರಭಾವಿ ಶಾಸಕ, ಬಿಜೆಪಿಯ ಬಾಲಚಂದ್ರ ಜಾರಕಿಹೊಳಿ, ಸುಪ್ರೀಂ ಕೋರ್ಟ್ ಬಾಗಿಲು ತಟ್ಟುವ ಮೂಲಕ ರಾಷ್ಟ್ರದಾದ್ಯಂತ ಸುದ್ದಿಯಾಗಿದ್ದರು. ಅದೇ ಹಾದಿಯಲ್ಲಿ ಅವರ ಅಣ್ಣ ಗೋಕಾಕ ಶಾಸಕ, ಕಾಂಗ್ರೆಸ್‌ನ ರಮೇಶ ಜಾರಕಿಹೊಳಿ ಹೊರಟಿದ್ದಾರೆ. ತಮ್ಮ ಜೊತೆ ಸ್ನೇಹಿತ ಮಹೇಶ ಕುಮಠಳ್ಳಿ ಅವರನ್ನೂ ಕರೆದುಕೊಂಡು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಲು ಸಿದ್ಧತೆ ನಡೆಸಿದ್ದಾರೆ.

ತಮ್ಮ ಕ್ಷೇತ್ರಕ್ಕೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೆಚ್ಚಿನ ಅನುದಾನ ನೀಡುತ್ತಿಲ್ಲವೆಂದು ಅಸಮಾಧಾನಗೊಂಡಿದ್ದ ಬಾಲಚಂದ್ರ 2010ರಲ್ಲಿ ಸರ್ಕಾರದ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದರು. ತಮ್ಮದೇ ಪಕ್ಷದ ಶಾಸಕರು ಹಾಗೂ ಪಕ್ಷೇತರರು ಸೇರಿದಂತೆ 16 ಜನರ ತಂಡವನ್ನು ಕಟ್ಟಿಕೊಂಡಿದ್ದರು.

ವಿಶ್ವಾಸಮತಯಾಚನೆ ಸಂದರ್ಭದಲ್ಲಿ 16 ಶಾಸಕರನ್ನು ಅಂದಿನ ಸ್ಪೀಕರ್‌ ಕೆ.ಜಿ. ಬೋಪಯ್ಯ ಅನರ್ಹಗೊಳಿಸಿದ್ದರು. ಇದರ ವಿರುದ್ಧ ಬಾಲಚಂದ್ರ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದರು. ಉತ್ತಮ ವಕೀಲರ ತಂಡವನ್ನು ಇಟ್ಟುಕೊಂಡು, ವಾದ ಮಂಡಿಸಿದ್ದರು. ಇವರ ವಾದವನ್ನು ಆಲಿಸಿದ ಸುಪ್ರೀಂ ಕೋರ್ಟ್‌, ಅನರ್ಹತೆ ಆದೇಶವನ್ನು ರದ್ದುಪಡಿಸಿತು. ಶಾಸಕತ್ವವನ್ನು ಮುಂದುವರಿಸಿತ್ತು.

ತಮ್ಮನೇ ಮಾದರಿ:ಜೆಡಿಎಸ್‌– ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ವಿರುದ್ಧ ತೊಡೆತಟ್ಟಿದ್ದ ರಮೇಶ ಹಾಗೂ ಕುಮಠಳ್ಳಿ ಅವರನ್ನು ಸ್ಪೀಕರ್‌ ರಮೇಶಕುಮಾರ್‌ ಅವರು ಅನರ್ಹಗೊಳಿಸಿದ್ದಾರೆ. ಇದಲ್ಲದೇ, ಪ್ರಸ್ತುತ 15ನೇ ವಿಧಾನಸಭೆಗೆ ಮರು ಆಯ್ಕೆಯಾಗುವಂತಿಲ್ಲ, ಉಪ–ಚುನಾವಣೆಯಲ್ಲೂ ಸ್ಪರ್ಧಿಸುವಂತಿಲ್ಲ ಎಂದು ಆದೇಶ ನೀಡಿದ್ದಾರೆ. ಸಮ್ಮಿಶ್ರ ಸರ್ಕಾರ ಉರುಳಿದ ನಂತರ ರಚನೆಯಾಗುವ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ಗಿ‌ಟ್ಟಿಸಿಕೊಳ್ಳುವ ಕನಸು ಕಂಡಿದ್ದ ರಮೇಶ ಅವರಿಗೆ ತೀವ್ರ ಹಿನ್ನಡೆ ಉಂಟಾಗಿದೆ.

‘ಸಹೋದರ ಬಾಲಚಂದ್ರ ಎದುರಿಸಿದಂತಹ ‘ಅನರ್ಹತೆ’ಯ ಅಸ್ತ್ರ ರಮೇಶ ಅವರ ಮೇಲೂ ಪ್ರಯೋಗವಾಗಿದೆ. ಇದರಿಂದ ತಪ್ಪಿಸಿಕೊಳ್ಳಲು, ಸುಪ್ರೀಂ ಕೋರ್ಟ್‌ಗೆ ಹೋಗಲು ನಿರ್ಧರಿಸಿದ್ದಾರೆ. ಅದಕ್ಕಾಗಿ ಬಾಲಚಂದ್ರ ಅವರ ಸಲಹೆಯನ್ನು ಪಡೆದುಕೊಂಡಿದ್ದಾರೆ. ಬಹುಶಃ ಸೋಮವಾರ ಸಲ್ಲಿಕೆಯಾಗಬಹುದು’ ಎಂದು ಮೂಲಗಳು ಹೇಳಿವೆ.

‘ಸುಪ್ರೀಂ ಕೋರ್ಟ್‌ನ ಕೆಲವು ವಕೀಲರು ಈಗಾಗಲೇ ರಮೇಶ ಅವರನ್ನು ಮುಂಬೈನಲ್ಲಿ ಭೇಟಿಯಾಗಿ, ಒಂದು ಸುತ್ತಿನ ಮಾತುಕತೆ ಪೂರ್ಣಗೊಳಿಸಿದ್ದಾರೆ. ಸ್ಪೀಕರ್‌ ಅವರ ಆದೇಶವನ್ನು ವಜಾಗೊಳಿಸುವಂತೆ ಕೋರಿ ಕೋರ್ಟ್‌ಗೆ ಮನವಿ ಮಾಡಲಿದ್ದಾರೆ’ ಎಂದು ಅವು ತಿಳಿಸಿವೆ.

ಆಗಲೂ ಇಬ್ಬರು– ಈಗಲೂ ಇಬ್ಬರು:2010ರಲ್ಲಿಯೂ ಜಿಲ್ಲೆಯ ಇಬ್ಬರು ಶಾಸಕರು ಅನರ್ಹಗೊಂಡಿದ್ದರು. ಬಾಲಚಂದ್ರ ಜಾರಕಿಹೊಳಿ ಹಾಗೂ ರಾಜು ಕಾಗೆ. ಅದೇ ರೀತಿ ಈ ಸಲವೂ ಇಬ್ಬರು ಶಾಸಕರು ಅನರ್ಹಗೊಂಡಿದ್ದಾರೆ. ರಮೇಶ ಜಾರಕಿಹೊಳಿ ಹಾಗೂ ಮಹೇಶ ಕುಮಠಳ್ಳಿ. ಇದುವರೆಗೆ ಅನರ್ಹತೆ ಅಸ್ತ್ರಕ್ಕೆ ಇದುವರೆಗೆ ಜಿಲ್ಲೆಯ ನಾಲ್ಕು ಜನ ಶಾಸಕರು ‘ಬಲಿ’ಯಾಗಿದ್ದಾರೆ.

ರಮೇಶ ಪುತ್ರ ಅಮರನಾಥ ಅಭ್ಯರ್ಥಿ;ರಮೇಶ ಜಾರಕಿಹೊಳಿ ಅನರ್ಹಗೊಂಡಿರುವುದರಿಂದ ಆರು ತಿಂಗಳೊಳಗೆ ಗೋಕಾಕ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಬೇಕಾಗಿದೆ. ರಮೇಶ ಅವರ ಅನರ್ಹತೆ ರದ್ದುಗೊಂಡು, ರಾಜೀನಾಮೆ ಸ್ವೀಕೃತಿಯಾದರೆ ಬಿಜೆಪಿಯಿಂದ ಸ್ಪರ್ಧಿಸುತ್ತಾರೆ. ಹಾಗೊಂದು ವೇಳೆ, ಅವರಿಗೆ ಸ್ಪರ್ಧಿಸಲು ಸಾಧ್ಯವಾಗದಿದ್ದರೆ ತಮ್ಮ ಪುತ್ರ ಅಮರನಾಥ ಅವರನ್ನು ಬಿಜೆಪಿಯಿಂದ ಕಣಕ್ಕಿಳಿಸುವ ಸಾಧ್ಯತೆ ಇದೆ. ಕಾಂಗ್ರೆಸ್‌ನಿಂದ ಅವರ ಕಿರಿಯ ಸಹೋದರ ಲಖನ್‌ ಜಾರಕಿಹೊಳಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT