ಶುಕ್ರವಾರ, ಜೂನ್ 18, 2021
21 °C
ಜಾರಕಿಹೊಳಿ ಸಹೋದರರ ರಾಜಕಾರಣಕ್ಕೆ ಬ್ರೇಕ್ ಹಾಕುವ ಉದ್ದೇಶ!

ಬೆಳಗಾವಿ ಜಿಲ್ಲೆ ವಿಭಜನೆ: ಮುಖ್ಯಮಂತ್ರಿಯಿಂದ ಘೋಷಣೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ತಮ್ಮ ಸರ್ಕಾರ ಅಲುಗಾಡಿಸಲು ಯತ್ನಿಸುತ್ತಿದ್ದಾರೆ ಎನ್ನಲಾಗುತ್ತಿರುವ ಜಾರಕಿಹೊಳಿ ಸಹೋದರರ ರಾಜಕಾರಣಕ್ಕೆ ಬ್ರೇಕ್ ಹಾಕುವುದಕ್ಕಾಗಿ, ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡುವ ತಂತ್ರಕ್ಕೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮೊರೆ ಹೋಗುವರೇ? ಇಂಥದೊಂದು ಚರ್ಚೆ ಜಿಲ್ಲೆಯಲ್ಲಿ ನಡೆಯುತ್ತಿದೆ.

ಕೆಎಲ್‌ಎಸ್‌ ಅಮೃತ ಮಹೋತ್ಸವ ಸಮಾರಂಭ, ಜನಸಂಪರ್ಕ ಸಭೆ ನಡೆಸುವುದಕ್ಕಾಗಿ ಸೆ. 15ರಂದು ನಗರಕ್ಕೆ ಬರಲಿರುವ ಕುಮಾರಸ್ವಾಮಿ, ಜಿಲ್ಲೆಯನ್ನು ವಿಭಜಿಸಿ ಹೊಸದಾಗಿ ಚಿಕ್ಕೋಡಿ ಹಾಗೂ ಗೋಕಾಕ ಜಿಲ್ಲೆಗಳನ್ನು ರಚಿಸುವುದಾಗಿ ಘೋಷಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

‌18 ವಿಧಾನಸಭಾ ಕ್ಷೇತ್ರಗಳು, 3 ಲೋಕಸಭಾ ಕ್ಷೇತ್ರಗಳ (ಖಾನಾಪುರ ಹಾಗೂ ಕಿತ್ತೂರು ವಿಧಾನಸಭಾ ಕ್ಷೇತ್ರಗಳು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ) ವ್ಯಾಪ್ತಿ ಹೊಂದಿದೆ ಹಾಗೂ 14 ತಾಲ್ಲೂಕುಗಳನ್ನು ಒಳಗೊಂಡಿದೆ. ಭೌಗೋಳಿಕವಾಗಿ ಅತಿ ದೊಡ್ಡ ಜಿಲ್ಲೆಯಾದ ಬೆಳಗಾವಿಯನ್ನು ವಿಭಜನೆ ಮಾಡಬೇಕು. ಪ್ರಸ್ತುತ ಉಪ ವಿಭಾಗಗಳಾಗಿರುವ ಚಿಕ್ಕೋಡಿ, ಗೋಕಾಕ ಹಾಗೂ ಬೈಲಹೊಂಗಲವನ್ನು ಪ್ರತ್ಯೇಕ ಜಿಲ್ಲೆಗಳನ್ನಾಗಿ ರಚಿಸಬೇಕು. ಈ ಮೂಲಕ ಆ ಭಾಗದ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂಬ ಬೇಡಿಕೆ ಬಹಳ ವರ್ಷಗಳಿಂದಲೂ ಇದೆ.

ಸಿದ್ದರಾಮಯ್ಯ ಕೂಡ ಪ್ರಸ್ತಾಪಿಸಿದ್ದರು

ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಈ ವಿಷಯ ಪ್ರಸ್ತಾಪಿಸಿದ್ದರು. ಜಿಲ್ಲೆಯನ್ನು ವಿಭಜಿಸುವ ಅವಶ್ಯಕತೆ ಇದೆ. ಆದರೆ, ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಇಲ್ಲಿ ನಡೆದಿದ್ದ ವಿಧಾನಮಂಡಲ ಅಧಿವೇಶನದಲ್ಲಿಯೇ ಹೇಳಿದ್ದರು.

ಇದಕ್ಕೆ ಕನ್ನಡ ಹೋರಾಟಗಾರರು ಹಿಂದಿನಿಂದಲೂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಗಡಿ ವಿವಾದ ಕುರಿತಂತೆ ಸುಪ್ರೀಂ ಕೋರ್ಟ್‌ನಲ್ಲಿರುವ ಪ್ರಕರಣ ಇತ್ಯರ್ಥವಾಗುವವರೆಗೂ ಜಿಲ್ಲೆ ವಿಭಜನೆಗೆ ಮುಂದಾಗಬಾರದು ಎನ್ನುವುದು ಅವರ ಆಗ್ರಹವಾಗಿದೆ.

ಈ ನಡುವೆ, ಕೇಂದ್ರೀಕೃತ ರಾಜಕಾರಣಕ್ಕೆ ಕಡಿವಾಣ ಹಾಕುವ ಉದ್ದೇಶದಿಂದಾಗಿ ಜಿಲ್ಲೆ ವಿಭಜನೆಯ ಅಸ್ತ್ರ ಪ್ರಯೋಗಿಸಲು ಮುಖ್ಯಮಂತ್ರಿ  ಯೋಚಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಜಿಲ್ಲೆ ವಿಭಜಿಸುವುದಕ್ಕೆ ನಮ್ಮ ಸಮ್ಮತಿ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರು ರಮೇಶ ಜಾರಕಿಹೊಳಿ, ಶಾಸಕ ಸತೀಶ ಜಾರಕಿಹೊಳಿ ಹಿಂದಿನಿಂದಲೂ ಹೇಳುತ್ತಿದ್ದಾರೆ. ಅವರ ಬೇಡಿಕೆ ಪುರಸ್ಕರಿಸುವ ಮೂಲಕ ಆ ಭಾಗದ ಜನರ ಒಲವನ್ನೂ ಗಳಿಸಿಕೊಳ್ಳುವುದು ಮುಖ್ಯಮಂತ್ರಿ ಯೋಚನೆಯಾಗಿದೆ ಎಂದು ಹೇಳಲಾಗುತ್ತಿದೆ.

ತಮ್ಮ ತಾಲ್ಲೂಕಿಗೆ ಜಿಲ್ಲೆಯ ಸ್ಥಾನಮಾನ ನೀಡಬೇಕು ಎಂದು ಚಿಕ್ಕೋಡಿ, ಗೋಕಾಕ ಹಾಗೂ ಬೈಲಹೊಂಗಲದ ಜನರು ಹಿಂದಿನಿಂದಲೂ ಪ್ರತಿಭಟಿಸುತ್ತಲೇ ಬಂದಿದ್ದಾರೆ. ಚಿಕ್ಕೋಡಿ ಜನರು ವಿಧಾನಸಭೆ ಚುನಾವಣೆಗೂ ಮುನ್ನ ಸರದಿ ಉಪವಾಸ ಸತ್ಯಾಗ್ರಹ ನಡೆಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು