ಗುರುವಾರ , ಜುಲೈ 29, 2021
26 °C
ಅಧಿಕಾರಿಗಳಿಗೆ ಸಚಿವ ಸೂಚನೆ

ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಿ: ಸಚಿವ ರಮೇಶ ಜಾರಕಿಹೊಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ರಸಗೊಬ್ಬರದ ಕೊರತೆ ಆಗದಂತೆ ಎಚ್ಚರಿಕೆ ವಹಿಸಬೇಕು. ಅಗತ್ಯಬಿದ್ದರೆ ಹೆಚ್ಚುವರಿಯಾಗಿ ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ತಿಳಿಸಿದರು.

ಗೊಬ್ಬರ ಕೊರತೆಯಾಗಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಸೋಮವಾರ ಇಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ದಾಸ್ತಾನು ಇರುವುದನ್ನು ರೈತರಿಗೆ ಸಮರ್ಪಕವಾಗಿ ವಿತರಿಸಬೇಕು. ಯಾವುದೇ ಸಮಸ್ಯೆಗಳಿದ್ದರೆ ಗಮನಕ್ಕೆ ತಂದರೆ ತಕ್ಷಣವೇ ಪರಿಹರಿಸಲಾಗುವುದು. ಹನಿ ನೀರಾವರಿ ಸೌಲಭ್ಯಗಳ ಕುರಿತು ಹೆಚ್ಚಿನ ಪ್ರಚಾರ ಕೈಗೊಳ್ಳುವ ಮೂಲಕ ರೈತರನ್ನು ಪಾಲುದಾರರಾಗಿಸಬೇಕು’ ಎಂದು ಸಚಿವರು ನಿರ್ದೇಶನ ನೀಡಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಲಾನಿ ಮೊಖಾಶಿ, ‘ಜಿಲ್ಲೆಗೆ ಈ ವರ್ಷ 63ಸಾವಿರ ಟನ್ ರಸಗೊಬ್ಬರ ಬಂದಿದೆ. ಕಳೆದ ವರ್ಷದ ದಾಸ್ತಾನು 20ಸಾವಿರ ಟನ್ ಇತ್ತು. ಒಟ್ಟು 86ಸಾವಿರ ಟನ್‌ಗಳಲ್ಲಿ ಈಗಾಗಲೇ 76ಸಾವಿರ ಟನ್ ವಿತರಿಸಲಾಗಿದೆ. 10 ದಿನಗಳಲ್ಲಿ ಮತ್ತೆ 10ಸಾವಿರ ಟನ್ ಬರಲಿದೆ. ಗೋಕಾಕ, ಅಥಣಿ ಸೇರಿದಂತೆ ಕೊರತೆ ಇರುವ ತಾಲ್ಲೂಕುಗಳಿಗೆ ಹೊಸ ದಾಸ್ತಾನು ಬಂದ ಬಳಿಕ ಕಳುಹಿಸಲಾಗುತ್ತಿದೆ’ ಎಂದು ತಿಳಿಸಿದರು.

‘ಈ ವರ್ಷ ಇದುವರೆಗೆ ವಾಡಿಕೆಗಿಂತಲೂ ಉತ್ತಮ ಮಳೆಯಾಗಿದೆ. ರೈತರು ಹೆಚ್ಚುವರಿಯಾಗಿ ರಸಗೊಬ್ಬರ ಸಂಗ್ರಹಿಸುತ್ತಿರುವುದರಿಂದ ಕೆಲವು ಕಡೆ ದಾಸ್ತಾನು ಕಡಿಮೆಯಾಗಿದೆ. ಆದರೆ ಜಿಲ್ಲೆಗೆ ಅಗತ್ಯ ಇರುವಷ್ಟು ಲಭ್ಯವಿದೆ’ ಎಂದರು.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ‌ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ವಿ. ರಾಜೇಂದ್ರ, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಕೃಷಿ ಇಲಾಖೆ ಉಪ ನಿರ್ದೇಶಕ ಡಾ.ಎಚ್.ಡಿ. ಕೋಳೇಕರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು