ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಸ್ಥಾನಗಳಲ್ಲಿ ಗೋಶಾಲೆ ಸ್ಥಾಪನೆ: ಸಚಿವೆ ಶಶಿಕಲಾ ಜೊಲ್ಲೆ

ಬಲಿಪಾಡ್ಯಮಿ ಅಂಗವಾಗಿ ಗೋವಿಗೆ ಪೂಜೆ
Last Updated 5 ನವೆಂಬರ್ 2021, 14:21 IST
ಅಕ್ಷರ ಗಾತ್ರ

ಬೆಳಗಾವಿ: ದೇವಸ್ಥಾನಗಳಲ್ಲಿ ಗೋಶಾಲೆ ಸ್ಥಾಪನೆಗೆ ಉದ್ದೇಶಿಸಲಾಗಿದೆ ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಶುಕ್ರವಾರ ತಿಳಿಸಿದರು.

ಮುಜರಾಯಿ ಇಲಾಖೆಯ ವತಿಯಿಂದ ನಗರದ ಕಪಿಲೇಶ್ವರ ಮಂದಿರದ ಆವರಣದಲ್ಲಿ ಅರಿಸಿನ, ಕುಂಕುಮ, ಹೂವುಗಳಿಂದ ಅಲಂಕರಿಸಿದ ಹಸು ಹಾಗೂ ಕರುವಿಗೆ ಗೋಧೂಳಿ ಲಗ್ನದಲ್ಲಿ ಪೂಜೆ ನೆರವೇರಿಸುವ ಮೂಲಕ ರಾಜ್ಯದಾದ್ಯಂತ ದೀಪಾವಳಿ (ಬಲಿಪಾಡ್ಯಮಿ) ಅಂಗವಾಗಿ ಅಧಿಸೂಚಿತ ದೇವಸ್ಥಾನಗಳಲ್ಲಿ ಹಮ್ಮಿಕೊಂಡಿರುವ ಗೋ ಪೂಜಾ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿದರು. ಇದೇ ವೇಳೆ ಇತರ ಗಣ್ಯರೂ ಗೋಪೂಜೆ ನೆರವೇರಿಸಿದರು.

ಜೊಲ್ಲೆ ಅವರು ಗೋವಿಗೆ ಅಕ್ಕಿ, ಬೆಲ್ಲ, ಬಾಳೆಹಣ್ಣು, ಸಿಹಿ ತಿನ್ನಿಸಿ ಗೋಗ್ರಾಸವನ್ನು ನೀಡಿದರು. ಧೂಪ-ದೀಪಗಳಿಂದ ಪೂಜಿಸಿ ಬಲಿಪಾಡ್ಯಮಿಯನ್ನು ವಿಶೇಷವಾಗಿ ಆಚರಿಸಿದರು.

ಇದಕ್ಕೂ ಮುಂಚೆ ಜೊಲ್ಲೆ ಅವರು ಕಪಿಲೇಶ್ವರ ದೇವಸ್ಥಾನದಲ್ಲಿ ಪೂಜೆಯನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವರು, ಶಶಿಕಲಾ ರಾಜ್ಯದ 35 ಸಾವಿರಕ್ಕೂ ಅಧಿಕ ಅಧಿಸೂಚಿತ ದೇವಸ್ಥಾನಗಳಲ್ಲಿ ಗೋಪೂಜೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಗೋ ತಳಿಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸಬೇಕಿದೆ. ಭಾರತ ಕೃಷಿ ಪ್ರಧಾನವಾದ ದೇಶವಾಗಿರುವುದರಿಂದ ಗೋರಕ್ಷಣೆ ಮಹತ್ವದ್ದಾಗಿದೆ. ತಾಯಿ ಹಾಲಿನಷ್ಟೇ ಹಸುವಿನ ಹಾಲು ಪ್ರಾಮುಖ್ಯತೆ ಹೊಂದಿದೆ ಎಂದು ಜೊಲ್ಲೆ ಹೇಳಿದರು.

ಹುಲ್ಲು ತಿಂದು ಹಾಲು ನೀಡುವ ಗೋಮಾತೆಯನ್ನು ಇಳಿವಯಸ್ಸಿನಲ್ಲಿ ಕಸಾಯಿಖಾನೆಗೆ ಕಳುಹಿಸುವುದನ್ನು ತಪ್ಪಿಸಲು ಮುಜರಾಯಿ ಇಲಾಖೆಯ 'ಎ' ಮತ್ತು 'ಬಿ' ಗ್ರೇಡ್ ದೇವಸ್ಥಾನದಲ್ಲಿ ಮುಜರಾಯಿ ಇಲಾಖೆಯ ವತಿಯಿಂದ ಗೋಶಾಲೆಗಳನ್ನು ಆರಂಭಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.

250ಕ್ಕೂ ಹೆಚ್ಚಿನ ದೇವಸ್ಥಾನಗಳಲ್ಲಿ ಮುಂಬರುವ ದಿನಗಳಲ್ಲಿ ಗೋಶಾಲೆಗೆ ಕ್ರಮ ತೆಗೆದುಕೊಳ್ಳಲಾಗುವುದು. ಜಿಲ್ಲಾವಾರು ಎ ಮತ್ತು ಬಿ ಗ್ರೇಡ್ ದೇವಸ್ಥಾನಗಳ ಪಟ್ಟಿ ಪಡೆದುಕೊಂಡು ಗೋಶಾಲೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುವುದು ಎಂದರು.

ಅರ್ಚಕರ ಕುಟುಂಬಕ್ಕೆ ಆರೋಗ್ಯ ವಿಮೆ ಒದಗಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಶಾಸಕ ಅಭಯ ಪಾಟೀಲ ಮಾತನಾಡಿ, ಸರ್ಕಾರವು ಅಧಿಸೂಚಿತ ದೇವಸ್ಥಾನಗಳಲ್ಲಿ ಗೋಪೂಜೆ ಆರಂಭಿಸುವ ಮೂಲಕ ಗೋಮಾತೆಗೆ ಪ್ರಾಮುಖ್ಯತೆ ನೀಡಿರುವುದು ಸಂತಸ ತಂದಿದೆ ಎಂದರು.

ಸಂಸದರಾದ ಮಂಗಲಾ ಅಂಗಡಿ ಹಾಗೂ ಅಣ್ಣಾಸಾಹೇಬ ಜೊಲ್ಲೆ, ಶಾಸಕ ಅನಿಲ ಬೆನಕೆ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT