ಶುಕ್ರವಾರ, ಅಕ್ಟೋಬರ್ 23, 2020
21 °C

ಆರ್‌ಆರ್ ನಗರ ಉಪಚುನಾವಣೆಗೆ ಡಿ.ಕೆ. ರವಿ ಪತ್ನಿ ಹೆಸರು ಶಿಫಾರಸು: ಡಿಕೆಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಐಎಎಸ್ ಅಧಿಕಾರಿ ದಿವಂಗತ ಡಿ.ಕೆ. ರವಿ ಪತ್ನಿ ಕುಸುಮಾ ಅವರಿಗೆ ಪಕ್ಷದ ಟಿಕೆಟ್ ನೀಡುವಂತೆ ಶಾಸಕರು, ಮಾಜಿ ಸಂಸದರು ಸೇರಿ ಹಲವರು ಶಿಫಾರಸು ಮಾಡಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಇಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಕುಸುಮಾ ಅವರ ತಂದೆ ಮೊದಲು ನಮ್ಮ ಪಕ್ಷದಲ್ಲೇ ಇದ್ದರು. ಯಾವುದೋ ಕಾರಣಕ್ಕೆ ಬಿಟ್ಟು ಹೋಗಿದ್ದರು. ಪಾಪ, ನೊಂದ ಆ ಹೆಣ್ಮಗಳಿಗೆ ಟಿಕೆಟ್ ಕೊಡಲು ಪರಿಗಣಿಸಿ ಎಂದು ಕೆಲವರು ಸಲಹೆ ನೀಡುತ್ತಿದ್ದಾರೆ. ಈ ಬಗ್ಗೆ ನಾವಿನ್ನೂ ಚರ್ಚಿಸಿಲ್ಲ. ಆ ಕ್ಷೇತ್ರದಲ್ಲಿ ಏಳೆಂಟು ಮಂದಿ ಟಿಕೆಟ್‌ ಆಕಾಂಕ್ಷಿಗಳಿದ್ದಾರೆ’ ಎಂದು ಹೇಳಿದರು.

ಆರ್. ಮುನಿರತ್ನ ಅವರಿಗೆ ಬಿಜೆಪಿ ಟಿಕೆಟ್‌ ಸಿಗದಿದ್ದಲ್ಲಿ ಪಕ್ಷಕ್ಷೆ ಸೇರಿಸಿಕೊಳ್ಳುವಿರಾ ಎಂಬ ಪ್ರಶ್ನೆಗೆ, ‘ಪಕ್ಷ ಸೇರಲು ಯಾರು ಬೇಕಾದರೂ ಅರ್ಜಿ ಹಾಕಬಹುದು. ಅರ್ಜಿಗಳೆಲ್ಲವೂ ಬರಲಿ, ನಂತರ ತೀರ್ಮಾನಿಸುತ್ತೇವೆ’ ಎಂದು ಪ್ರತಿಕ್ರಿಯಿಸಿದರು.

‘ರಾಜರಾಜೇಶ್ವರಿ ನಗರ ಕ್ಷೇತ್ರಗಳ ಉಪ ಚುನಾವಣೆ ಟಿಕೆಟ್‌ ವಿಷಯದಲ್ಲಿ ಚರ್ಚಿಸಲು ಹಿರಿಯರಾದ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಸಮಿತಿ ರಚಿಸಿದ್ದೇನೆ. ಅವರು ಮುಖಂಡರ ಅಭಿಪ್ರಾಯ ಸಂಗ್ರಹಿಸಿ ಶಿಫಾರಸು ಮಾಡುತ್ತಾರೆ. ಅಭ್ಯರ್ಥಿ ಆಯ್ಕೆಗೆ ಸಿದ್ದರಾಮಯ್ಯ ಸೇರಿ ಮುಖಂಡೆರೆಲ್ಲರೂ ಚರ್ಚಿಸುತ್ತೇವೆ’ ಎಂದು ಹೇಳಿದರು.

‘ಶಿರಾ ಕ್ಷೇತ್ರದಲ್ಲಿ ಎಲ್ಲರೂ ಸೇರಿ ಒಂದು ಅಭಿಪ್ರಾಯಕ್ಕೆ ಬಂದಿದ್ದಾರೆ. ಅವರು ಸೂಚಿಸಿದ ಅಭ್ಯರ್ಥಿಯನ್ನು 2–3 ದಿನಗಳಲ್ಲಿ ಹೈಕಮಾಂಡ್‌ಗೆ ಶಿಫಾರಸು  ಮಾಡುತ್ತೇನೆ’ ಎಂದರು.

‘ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಬಗ್ಗೆ ಇನ್ನೂ ಚರ್ಚಿಸಿಲ್ಲ. ಪಕ್ಷ ಸಂಘಟನೆಗೆ ಮೊದಲ ಆದ್ಯತೆ ನೀಡುತ್ತಿದ್ದೇನೆ’ ಎಂದು ಹೇಳಿದರು.

ಬೇರಾರೂ ಡ್ರಗ್ಸ್ ತಗೊಂಡಿಲ್ವಾ?

ಡ್ರಗ್ಸ್‌ ಪ್ರಕರಣದಲ್ಲಿ ವಿಚಾರಣೆ ಎದುರಿಸಿರುವ ನಿರೂಪಕಿ ಅನುಶ್ರೀ ಸೇರಿ ಹಲವರೊಂದಿಗೆ ಕೆಲವು ಪ್ರಭಾವಿಗಳ ನಂಟಿದೆ ಎನ್ನಲಾಗುತ್ತಿದೆಯಲ್ಲಾ ಎಂಬ ಪ್ರಶ್ನೆಗೆ, ‘ನನಗೆ ಆ ಬಗ್ಗೆ ಗೊತ್ತಿಲ್ಲ. ನಶೆ, ಪಶೆ ಎನ್ನುವುದು ಅರ್ಥವಾಗುವುದೂ ಇಲ್ಲ. ಚಲನಚಿತ್ರ ನಟಿಯರನ್ನು ಬಿಟ್ಟು ಬೇರೆ ಯಾರೂ ಡ್ರಗ್ಸ್ ತಗೊಂಡಿಲ್ವಾ? ಟಿವಿಗಳಲ್ಲಿ ಕೇವಲ ಮನರಂಜನಾ ಉದ್ಯಮದಲ್ಲಿ ಇರುವವರನ್ನು ಮಾತ್ರವೇ ಹೈಲೈಟ್ ಮಾಡುತ್ತಿರುವುದನ್ನು ನೋಡಿ ಅಚ್ಚರಿಯಾಗುತ್ತಿದೆ’ ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು