ಗುರುವಾರ , ಆಗಸ್ಟ್ 11, 2022
23 °C
ಬಿಜೆಪಿ ಆಯೋಜಿಸಿದ್ದ ಗ್ರಾಮ ಸ್ವರಾಜ್ಯ ಸಮಾವೇಶದಲ್ಲಿ ರಮೇಶ್

ಜಾತಿ, ಸಂಬಂಧ ಬಿಟ್ಟು ಬೆಂಬಲಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜಾತಿ ಅಥವಾ ಸಂಬಂಧ ಬದಿಗಿಟ್ಟು ಒಳ್ಳೆಯ ವ್ಯಕ್ತಿಯನ್ನು ಕಾರ್ಯಕರ್ತರು ಬೆಂಬಲಿಸಬೇಕು. ಗ್ರಾಮ  ಮಟ್ಟದಲ್ಲಿ ಪಕ್ಷದ ಬೇರು ಗಟ್ಟಿಗೊಳಿಸಿದರೆ ಮುಂದಿನ ಇಪ್ಪತ್ತು ವರ್ಷ ನಮ್ಮ ಸರ್ಕಾರವೇ ಇರುವಂತೆ ನೋಡಿಕೊಳ್ಳಬಹುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು.

ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದಿಂದ ನಗರದ ಧರ್ಮನಾಥ ಭವನದಲ್ಲಿ ಬುಧವಾರ ಆಯೋಜಿಸಿದ್ದ ‘ಗ್ರಾಮ ಸ್ವರಾಜ್ಯ’ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಜಿ.ಪಂ.ನಲ್ಲಿ 90ರ ಪೈಕಿ‌ 85 ಸ್ಥಾನಗಳಲ್ಲಿ ಪಕ್ಷದವರನ್ನು ಗೆಲ್ಲಿಸುವ ಹೊಣೆ ಇದೆ. ಹೀಗಾಗಿ, ಕಾರ್ಯಕರ್ತರು ಗ್ರಾ.ಪಂ. ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿಬೇಕು. ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು. ಇದಕ್ಕಾಗಿ ಸಚಿವ ಜಗದೀಶ ಶೆಟ್ಟರ್ ನೇತೃತ್ವದಲ್ಲಿ ಪ್ರವಾಸ ಮಾಡಲಾಗುತ್ತಿದೆ’ ಎಂದರು.

ನಾವೆಲ್ಲರೂ ಒಂದಾದರೆ:

‘ಇಡೀ ರಾಜ್ಯದ ಕಣ್ಣು ಬೆಳಗಾವಿ ಮೇಲಿದೆ. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಒಂದಾದಂತೆ ಮುಂಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲೂ ಒಂದಾಗಿ ಗೆಲ್ಲೋಣ. ಕೆಳ ಹಂತದ ಕಾರ್ಯಕರ್ತರಲ್ಲಿ ಭಿನ್ನಾಭಿಪ್ರಾಯ ಇರುವುದಿಲ್ಲ. ಅದೇನಿದ್ದರೂ ಇರುವುದು ಮೇಲ್ಮಟ್ಟದ ನಾಯಕರಲ್ಲೇ. ನಾವೆಲ್ಲರೂ ಒಂದಾದರೆ ಪಕ್ಷಕ್ಕೆ ಮತ್ತಷ್ಟು ಶಕ್ತಿ ಬರುತ್ತದೆ’ ಎಂದು ಹೇಳಿದರು.

ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ‘ಬೆಳಗಾವಿ ಗ್ರಾಮೀಣ, ಖಾನಾಪುರ ಹಾಗೂ ಬೈಲಹೊಂಗಲ ವಿಧಾನಸಭಾ ಕ್ಷೇತ್ರಗಳಲ್ಲಿ ನಾವು ಹೆಚ್ಚು ಕಾರ್ಯಕರ್ತರನ್ನು ಗೆಲ್ಲಿಸಿಕೊಂಡರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಆ ಕ್ಷೇತ್ರಗಳನ್ನು ಸುಲಭವಾಗಿ ಗೆಲ್ಲಬಹುದು. ಭಿನ್ನಾಭಿಪ್ರಾಯಗಳು ಇರಬಹುದು. ಅದೆಲ್ಲವನ್ನೂ ಮರೆತು ಕಾರ್ಯಕರ್ತರಿಗಾಗಿ ಶ್ರಮಿಸಬೇಕು’ ಎಂದು ತಿಳಿಸಿದರು.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ:

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ‌ ಜೊಲ್ಲೆ, ‘ದೇಶದಲ್ಲಿ ಕಾಂಗ್ರೆಸ್‌ನಿಂದಾಗಿ ಬಡತನ ನಿವಾರಣೆ ಆಗಿಲ್ಲ’ ಎಂದು ಆರೋಪಿಸಿದರು.

ಅಧ್ಯಕ್ಷತೆ ವಹಿಸಿದ್ದ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್, ‘ಕಾಂಗ್ರೆಸ್ ಅಧೋಗತಿಗೆ ಹೋಗುತ್ತಿದೆ. ಮುಳುಗುತ್ತಿರುವ ಹಡಗಾಗಿದೆ. ಕೆಲವೇ ದಿನಗಳಲ್ಲಿ ‌ಸರ್ವನಾಶವಾಗಲಿದೆ. ಜೆಡಿಎಸ್‌ಗೆ ಅಸ್ತಿತ್ವ ಇಲ್ಲ. ಈ ಅವಕಾಶ ಬಳಸಿಕೊಂಡು ನಾವು ಕಾರ್ಯಕರ್ತರನ್ನು ಗೆಲ್ಲಿಸಿಕೊಳ್ಳಬೇಕು. ಹಳ್ಳಿಗಳಲ್ಲಿ ಪಕ್ಷ ಬಲಗೊಳಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಶಾಸಕ ಮಹಾಂತೇಶ ದೊಡ್ಡಗೌಡರ, ‍‍ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ, ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ, ರಾಜ್ಯ ಕಾರ್ಯಕಾರಿಣಿ ಸದಸ್ಯ ಶಶಿಕಾಂತ ನಾಯಿಕ, ಸಮಾವೇಶದ ರಾಜ್ಯ ಸಂಚಾಲಕ ಸಿ. ಸಿದ್ದರಾಜು ಮಾತನಾಡಿದರು.

ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ರಾಜ್ಯ ಘಟಕದ ಉಪಾಧ್ಯಕ್ಷ ಎಂ. ರಾಜೇಂದ್ರ, ಯುವ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಡಾ.ಸಂದೀಪ್, ‍ಪದಾಧಿಕಾರಿಗಳಾದ ಜಗದೀಶ ಮೆಟಗುಡ್ಡ, ಸುಭಾಷ ಪಾಟೀಲ, ಧನಶ್ರೀ ಸರದೇಸಾಯಿ, ಉಜ್ವಲಾ ಬಡವನಾಚೆ ಇದ್ದರು.

ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಹೇಶ್ ಮೋಹಿತೆ ಸ್ವಾಗತಿಸಿದರು.

**

ಭಾಗ್ಯಲಕ್ಷ್ಮಿ ಯೋಜನೆಯಲ್ಲಿ 2 ಲಕ್ಷ ಬಾಂಡ್‌ಗಳನ್ನು ಕೊಡುವುದು ಬಾಕಿ ಇತ್ತು. ಅವುಗಳನ್ನು ಕೊಡುವ ಕೆಲಸಕ್ಕೆ ನಮ್ಮ ಸರ್ಕಾರ ಬಂದ ಮೇಲೆ ಚಾಲನೆ ನೀಡಿದ್ದೇವೆ
ಶಶಿಕಲಾ ಜೊಲ್ಲೆ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ

**

ಗ್ರಾಮ ಪಂಚಾಯಿತಿಗಳ ಸದಸ್ಯರು ಹಾಗೂ ಅಧ್ಯಕ್ಷರಿಗೆ ಬಹಳಷ್ಟು ಅಧಿಕಾರವಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮದೇ ಸರ್ಕಾರಗಳಿವೆ. ಹೀಗಾಗಿ, ‍ಹೆಚ್ಚಿನ ಅನುದಾನ ಪಡೆದುಕೊಳ್ಳಬಹುದು
ಜಗದೀಶ ಶೆಟ್ಟರ್
ಕೈಗಾರಿಕಾ ಸಚಿವ

***

ಗೋವ ತೊಂದರೆ ಕೊಡಬಾರದು

‘ಮಹದಾಯಿ ವಿಷಯದಲ್ಲಿ ಕಾನೂನು ಹೋರಾಟ ಮುಗಿದಿದೆ. ಆದರೂ ವಿನಾಕಾರಣ ಆರೋಪ ಮಾಡುವುದನ್ನು ಗೋವಾ ಮುಖ್ಯಮಂತ್ರಿ ಬಿಡಬೇಕು. ನಮಗೆ ಸಿಕ್ಕಿರುವ ಪಾಲು ಪಡೆದುಕೊಳ್ಳಲು ಇಂದಲ್ಲ, ನಾಳೆ ಕಾಮಗಾರಿ ಆರಂಭಿಸಲೇಬೇಕು. ಗೋವಾದವರು ತೊಂದರೆ ಕೊಡಬಾರದು’ ಎಂದು ಶೆಟ್ಟರ್‌ ಹೇಳಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು