ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂದೆ, ತಾಯಿ ಸೇವೆಗಿಂತ ಪುಣ್ಯವಿಲ್ಲ

ಹಿರಿಯ ನಾಗರಿಕರ ಸಮ್ಮೇಳನದಲ್ಲಿ ಸಚಿವೆ ಶಶಿಕಲಾ ಜೊಲ್ಲೆ
Last Updated 23 ಫೆಬ್ರುವರಿ 2020, 12:06 IST
ಅಕ್ಷರ ಗಾತ್ರ

ಬೆಳಗಾವಿ: ‘ತಂದೆ, ತಾಯಿಯನ್ನು ಗೌರವದಿಂದ ನೋಡಿಕೊಳ್ಳುವುದಕ್ಕಿಂತ ದೊಡ್ಡ ಪುಣ್ಯವಿಲ್ಲ’ ಎಂದು ಮಹಿಳಾ ಮತ್ತು ಕಲ್ಯಾಣ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ರಾಜ್ಯ ಹಿರಿಯ ನಾಗರಿಕರ ಸಂಘ ಹಾಗೂ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ಜಿಲ್ಲಾ ಘಟಕದಿಂದ ಇಲ್ಲಿನ ಗಾಂಧಿ ಭವನದಲ್ಲಿ ಭಾನುವಾರ ಆಯೋಜಿಸಿದ್ದ 5ನೇ ವಾರ್ಷಿಕೋತ್ಸವ ಮತ್ತು ರಾಜ್ಯಮಟ್ಟದ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

‘ನಾವು ಚಿಕ್ಕವರಿದ್ದಾಗ ಅವಿಭಕ್ತ ಕುಟುಂಬಗಳು ಇರುತ್ತಿದ್ದವು. ಅಲ್ಲಿ ಪ್ರೀತಿ ತುಂಬಿರುತ್ತಿತ್ತು. ಮಕ್ಕಳಿಗೆ ಹಿರಿಯರು ನೀತಿ ಕತೆಗಳನ್ನು ಹೇಳಿಕೊಡುತ್ತಿದ್ದರು. ತುತ್ತು ನೀಡುವ ಬಾಂಧವ್ಯ ಇರುತ್ತಿತ್ತು. ಹಳೆ ಬೇರು, ಹೊಸ ಚಿಗುರು ಬೆರೆತಿರುತ್ತಿದ್ದವು. ಆದರೆ ಈಗ ವಿಭಕ್ತ ಕುಟುಂಬಗಳು ಹೆಚ್ಚಾಗುತ್ತಿವೆ. ಹೆಣ್ಣು ಕೊಡುವಾಗ, ಅತ್ತೆ ಇಲ್ಲದ ಮನೆ ಇದ್ದರೆ ನೋಡಿ ಎಂದು ಕೇಳುವಂತಹ ಸ್ಥಿತಿ‌ ಬಂದಿದೆ. ವರ ಬೆಂಗಳೂರು ಅಥವಾ ವಿದೇಶದಲ್ಲಿ ಇರಬೇಕು ಎಂದು ಬಯಸುತ್ತಿದ್ದಾರೆ’ ಎಂದು ವಿಷಾದ ವ್ಯಕ್ತ‍ಪಡಿಸಿದರು.

ಸಂಘ ಮಾಡಿಕೊಳ್ಳುವ ಸ್ಥಿತಿ

‘ನಾವಿಬ್ಬರು ನಮಗಿಬ್ಬರು ಅಥವಾ ನಾವಿಬ್ಬರು ನಮಗೊಬ್ಬರು ಎನ್ನುವಂತಾಗಿ ಹೋಗಿದೆ. ಮಕ್ಕಳು ದೂರ ಇರುವುದರಿಂದಾಗಿ, ಹಿರಿಯ ನಾಗರಿಕರು ತೊಂದರೆಗಳ ನಿವಾರಣೆಗಾಗಿ ಸಂಘ ಮಾಡಿಕೊಳ್ಳುವ ಸ್ಥಿತಿ ಬಂದಿದೆ. ಮಕ್ಕಳಿಂದ ಹಿರಿಯ ನಾಗರಿಕರು ದೌರ್ಜನ್ಯ ಅನುಭವಿಸುತ್ತಿರುವುದೂ ಕಂಡುಬರುತ್ತಿದೆ. ಇದು ದೂರಾಗಲು ಅವಿಭಕ್ತ ಕುಟುಂಬಗಳು ಇರಬೇಕಾಗಿದೆ’ ಎಂದರು.

ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲ, ‘ಹಿರಿಯರು ಸಮಾಜದ ಸಂಪತ್ತು. ಅವರ ಅನುಭವ ದೊಡ್ಡದು. ಇಂದಿನ ಪೀಳಿಗೆಗೆ ಮತ್ತು ಮಕ್ಕಳಿಗೆ ಸಂಸ್ಕೃತಿ ಕಲಿಸುವ ಅವರಿಗೆ ಪೂಜ್ಯನೀಯ ಸ್ಥಾನವಿದೆ. ಅವರು ಸರ್ಕಾರಕ್ಕೂ ಸಲಹೆ ನೀಡಬೇಕು’ ಎಂದು ಕೋರಿದರು.

ಹಳ್ಳಿಗಳಲ್ಲಿ ಹೆಚ್ಚು

ಡಾ.ಗುರುದೇವಿ ಹುಲೆಪ್ಪನವರಮಠ ಪ್ರಧಾನ ಸಂಪಾದಕತ್ವದ ‘ಮರಳಿ ಅರಳು’ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಮುಖಂಡ ಎ.ಬಿ. ಪಾಟೀಲ ಮಾತನಾಡಿ, ‘ಹಳ್ಳಿಗಳಲ್ಲಿ ಇರುವ ಹಿರಿಯ ನಾಗರಿಕರ ಪರಿಸ್ಥಿತಿ ಸರಿ ಇಲ್ಲ. ಸರ್ಕಾರ ಇತ್ತ ಹೆಚ್ಚಿನ ಗಮನ ಕೊಡಬೇಕಾಗಿದೆ’ ಎಂದು ಒತ್ತಾಯಿಸಿದರು.

ಸಾನ್ನಿಧ್ಯ ವಹಿಸಿದ್ದ ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಹಾಗೂ ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಮಾತನಾಡಿದರು. ಸಂಘದ ಅಧ್ಯಕ್ಷ ಅಡಿವೆಪ್ಪ ಯ.ಬೆಂಡಿಗೇರಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಗದೀಶ ಪಾಟೀಲ, ಹಿರಿಯ ನಾಗರಿಕರ ಸಂಘದ ಕಾರ್ಯದರ್ಶಿ ಪ್ರಸಾದ ಹಿರೇಮಠ, ಸಂಸ್ಥಾಪಕ ಅಧ್ಯಕ್ಷ ಪ್ರಭಾಕರ ಕುಲಕರ್ಣಿ ಇದ್ದರು.

ಜಯಜಗದೀಶ್ವರಿ ಮಹಿಳಾ ಮಂಡಳದವರು ಪ್ರಾರ್ಥಿಸಿದರು. ಮಾಹೇಶ್ವರಿ ಅಂಧ ಮಕ್ಕಳ ಶಾಲೆ ವಿದ್ಯಾರ್ಥಿಗಳು ನಾಡಗೀತೆ, ಸುಮಿತ್ರಾ ಹಿರೇಮಠ ಸ್ವಾಗತಗೀತೆ ಮತ್ತುಬಸಲಿಂಗಯ್ಯ ಹಿರೇಮಠ ಜನಪದ ಗೀತೆಗಳನ್ನು ಹಾಡಿದರು. ಡಾ.ಗುರುದೇವಿ ಹುಲ್ಲೆಪ್ಪನವಮಠ ಸ್ವಾಗತಿಸಿದರು. ಅಶೋಕ ಮಳಗಲಿ, ಶ್ರೀಕಾಂತ ಶಾನವಾಡ ನಿರೂಪಿಸಿದರು. ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಗೋಮಾಡಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT