ಸೋಮವಾರ, ಜನವರಿ 17, 2022
18 °C
ಮೈಮರೆಯುವುದು ಬೇಡ; ಬಿಜೆಪಿ ನಾಯಕರಿಂದ ಕೇಳಿಬಂದ ಮಾತುಗಳು

ಅತಿಯಾದ ಆತ್ಮವಿಶ್ವಾಸ ಸಲ್ಲದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಅತಿಯಾದ ಆತ್ಮವಿಶ್ವಾಸದಿಂದ ಮೈಮರೆಯಬಾರದು. ಒಗ್ಟಟ್ಟಿನಿಂದ ಕೆಲಸ ಮಾಡಿಸಿದರಷ್ಟೆ ಈ ಚುನಾವಣೆಯಲ್ಲಿ ಗೆಲ್ಲಬಹುದು’.

ವಿಧಾನಪರಿಷತ್‌ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಪ್ರಚಾರಾರ್ಥ ತಾಲ್ಲೂಕಿನ ರಿಜೆಂಟ ರೆಸಾರ್ಟ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲೆಯ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ನಾಯಕರೆಲ್ಲರೂ ಮೇಲಿನಂತೆ ಎಚ್ಚರಿಕೆ ನೀಡಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಅಭಿಪ್ರಾಯ ಹಂಚಿಕೊಂಡರು.

ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ, ‘ಅತಿಯಾದ ಆತ್ಮವಿಶ್ವಾಸ ಬೇಡ. ಬಹಳ ಕೆಲಸ ಮಾಡಬೇಕಿದೆ. ನೀಡಿದ ಜವಾಬ್ದಾರಿಯನ್ನು ಪದಾಧಿಕಾರಿಗಳು ಸಮರ್ಪಕವಾಗಿ ‌ನಿರ್ವಹಿಸಬೇಕು. ವಾತಾವರಣ ‌ನಮ್ಮ ಪರವಾಗಿದೆ. ಆದರೆ, ಮೈಮರೆಯಬಾರದು’ ಎಂದು ಕಿವಿಮಾತು ಹೇಳಿದರು.

ಕೇಳಲು ಬಂದಿದ್ದಾರೆ:

ವಿಧಾನಪರಿಷತ್ ಸದಸ್ಯ ಲಕ್ಷ್ಮಣ ಸವದಿ ಮಾತನಾಡಿ, ‘ಇಡೀ ರಾಜ್ಯದ ಶಾಸಕರು ಡಿ.13ರಿಂದ ನಡೆಯಲಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನಕ್ಕೆ  ಬಂದಿರುತ್ತಾರೆ. ಅವರೆಲ್ಲರೂ ಇಲ್ಲಿನ ಫಲಿತಾಂಶವನ್ನು ಗಮನಿಸುತ್ತಿರುತ್ತಾರೆ. ಹೀಗಾಗಿ, ಎಚ್ಚರಿಕೆ ವಹಿಸಬೇಕು’ ಎಂದು ತಿಳಿಸಿದರು.

‘ಹೋದ ಚುನಾವಣೆಯಲ್ಲಿ ಮಹಾಂತೇಶ ಕವಟಗಿಮಠ ಅವರು ಹೆಚ್ಚುವರಿಯಾಗಿ 16 ಮತ ಬಾರದೆ ಇದ್ದಿದ್ದರೆ ಸೋಲುತ್ತಿದ್ದರು. ಹೀಗಾಗಿ, ಈ ಚುನಾವಣೆಯಲ್ಲಿ ಎಲ್ಲರೂ ಕೂಡಿ ಗೆಲ್ಲಿಸಲು ಆಗುತ್ತದೆಯೋ, ಇಲ್ಲವೋ ಎಂದು ಕೇಳಲು ಮುಖ್ಯಮಂತ್ರಿಯೇ ಬಂದಿದ್ದಾರೆ. ಅಭ್ಯರ್ಥಿ ಗೆಲ್ಲಿಸುವ ಕೆಲಸವನ್ನು ನಾವೆಲ್ಲರೂ ಮಾಡೋಣ’ ಎಂದರು.

ವಿಜಯದ ಪರಂಪರೆ:

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಬೆಳಗಾವಿ ‌ಜಿಲ್ಲೆ ಎಂದರೆ ವಿಶೇಷ ಹಾಗೂ ಮುಖ್ಯ. ಇಲ್ಲಿಗೆ ಬರುವುದೆಂದರೆ‌ ಬಹಳ ಸಂತೋಷ. ಈ ಜಿಲ್ಲೆಯು ಪಕ್ಷಕ್ಕೆ ಬಹಳ ಶಕ್ತಿ ತುಂಬುತ್ತಲೇ‌ ಬಂದಿದೆ. ವಿಜಯದ ಪರಂಪರೆ ಇಲ್ಲಿ ಹಿಂದಿನಿಂದಲೂ ಇದೆ’ ಎಂದರು.

‘ಸಿದ್ದರಾಮಯ್ಯ ಅವರು ಚುನಾವಣೆ ಹತ್ತಿರ ಇದ್ದಾಗ ಮನೆ ಘೋಷಿಸಿ ಅದಕ್ಕೆ ಹಣ ಇಟ್ಟಿಲ್ಲ. ಇದಕ್ಕೆ ದಾಖಲೆಗಳಿವೆ. ಅದ್ಯಾವ ಪುರುಷಾರ್ಥ? ನಾವು ಬಹಳ ಮನೆಗಳನ್ನು ಕೊಟ್ಟಿದ್ದೇನೆ. ಒಂದೂವರೆ ವರ್ಷದಲ್ಲಿ 4 ಲಕ್ಷ ಮನೆಗಳು ಪೂರ್ಣವಾಗಬೇಕು ಎಂದು ಸ್ಪಷ್ಟ ಸೂಚನೆಯನ್ನು ಅಧಿಕಾರಿಗಳಿಗೆ ಕೊಟ್ಟಿದ್ದೇನೆ. ಮನೆ ಮನೆಗ ಶುದ್ಧ ನೀರು ಪೂರೈಸುವ ಜಲ‌ಜೀವನ ಮಿಷನ್‌ಗೆ ಈ ವರ್ಷ ₹ 5ಸಾವಿರ ಕೋಟಿ ಖರ್ಚು ಮಾಡುವ ಉದ್ದೇಶವಿದೆ’ ಎಂದು ತಿಳಿಸಿದರು.

ಪಕ್ಷೇತರ ಅಭ್ಯರ್ಥಿ ಶಂಕರ ಕುಡುಸೋಮಣ್ಣವರ ಕಣದಿಂದ ಹಿಂದೆ ಸರಿದಿರುವುದಾಗಿ ಘೋಷಿಸಿದರು. ಬಿಜೆಪಿಗೆ ಬೆಂಬಲ ನೀಡುವುದಾಗಿ ತಿಳಿಸಿದರು.

ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ, ಶಾಸಕರಾದ ಮಹಾದೇವಪ್ಪ ಯಾದವಾಡ, ಅನಿಲ ಬೆನಕೆ, ಮಹಾಂತೇಶ ದೊಡ್ಡಗೌಡರ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಸಂಸದೆ ಮಂಲಗಾ ಅಂಗಡಿ ಮಾತನಾಡಿದರು.

ಸಂಸದ ಅಣ್ಣಾಸಾಹೇಬ ಜೊಲ್ಲೆ, ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ಶಾಸಕರಾದ ಶ್ರೀಮಂತ ಪಾಟೀಲ, ಮಹೇಶ ಕುಮಠಳ್ಳಿ, ಪಕ್ಷದ ನಗರ ಘಟಕದ ಅಧ್ಯಕ್ಷ ಶಶಿಕಾಂತ ಪಾಟೀಲ, ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ, ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ರಾಜೇಶ ನೇರ್ಲಿ ಇದ್ದರು.

ಪಕ್ಷದ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಸ್ವಾಗತಿಸಿದರು. ರಾಜ್ಯ ಘಟಕದ ವಕ್ತಾರ ಎಂ.ಬಿ. ಝಿರಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಎಚ್ಚರ ವಹಿಸಬೇಕು: ಜೊಲ್ಲೆ

ಮುಜರಾಯಿ ಸಚಿವೆ ಶಶಿಕಲಾ‌ ಜೊಲ್ಲೆ, ‘ಅತಿಯಾದ ಆತ್ಮವಿಶ್ವಾಸ ಬೇಡ. ನಾವು ನಿಧಾನ ಮಾಡಿದರೆ, ಅದನ್ನು ಬೇರೆಯವರು ದುರುಪಯೋಗ ಮಾಡಿಕೊಳ್ಳುತ್ತಾರೆ. ಹೀಗಾಗಿ ಎಚ್ಚರ ವಹಿಸಬೇಕು’ ಎಂದು ತಿಳಿಸಿದರು.

ಅರಣ್ಯ ಸಚಿವ ಉಮೇಶ ಕತ್ತಿ ಮಾತನಾಡಿ, ‘ಇಲ್ಲಿನ‌ ಚುನಾವಣೆ ಫಲಿತಾಂಶ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ತರುವ ಸಂದೇಶವನ್ನು ನೀಡಲಿದೆ. ಹೀಗಾಗಿ ಇಲ್ಲಿ ಗೆಲ್ಲಬೇಕು. ಇದಕ್ಕಾಗಿ ಬೂಸ್ಟರ್ ಡೋಸ್ ಕೊಡಲು ಮುಖ್ಯಮಂತ್ರಿಯೇ ಬಂದಿದ್ದಾರೆ. ಬಸವರಾಜ ಬೊಮ್ಮಾಯಿ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗಲು ನಾವೆಲ್ಲರೂ ಕೆಲಸ ಮಾಡೋಣ’ ಎಂದು ಹೇಳಿದರು.

ವಿಕೇಂದ್ರೀಕರಣದಲ್ಲಿ ನಂಬಿಕೆ

ಜನರ ಸುತ್ತ ಅಧಿಕಾರ ಇರಬೇಕು. ಅವರು ಸೇವೆಗಳನ್ನು ಹುಡುಕಿಕೊಂಡು ಬರಬಾರದು ಎನ್ನುವುದು ನಮ್ಮ‌ ಧ್ಯೇಯ. ಇದಕ್ಕಾಗಿ ಜನಸೇವಕ ಯೋಜನೆ ಮಾಡಿದ್ದೇವೆ. ಅಧಿಕಾರ ವಿಕೇಂದ್ರೀಕರಣದಲ್ಲಿ ನಂಬಿಕೆ ಇಟ್ಟಿದ್ದೇವೆ.

– ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು