ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದಿಂಚೂ ಜಾಗ ಮಹಾರಾಷ್ಟ್ರಕ್ಕೆ ಹೋಗಲ್ಲ: ಕೆ.ಎಲ್‌. ಮಂಜುನಾಥ ವಿಶ್ವಾಸ

ಗಡಿ ಹಾಗೂ ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ಎಲ್‌. ಮಂಜುನಾಥ ವಿಶ್ವಾಸ
Last Updated 3 ಫೆಬ್ರುವರಿ 2020, 13:43 IST
ಅಕ್ಷರ ಗಾತ್ರ

ಬೆಳಗಾವಿ: ‘ಮಹಾರಾಷ್ಟ್ರದ ಜನಪ್ರತಿನಿಧಿಗಳು, ಮುಖಂಡರು ಎಷ್ಟೇ ಕೆಣಕಿದರೂ, ಕನ್ನಡಿಗರು ಪ್ರಚೋದನೆಗೆ ಒಳಗಾಗಬಾರದು. ತಾಳ್ಮೆ, ಸಂಯಮ ಕಾಪಾಡಿಕೊಳ್ಳಬೇಕು. ಗಡಿ ಕುರಿತಾಗಿ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಲು ರಾಜ್ಯದ ವಕೀಲರ ತಂಡ ಸಮರ್ಥವಾಗಿದೆ. ರಾಜ್ಯದ ಒಂದಿಂಚೂ ಜಾಗ ಮಹಾರಾಷ್ಟ್ರಕ್ಕೆ ಹೋಗುವುದಿಲ್ಲ’ ಎಂದು ಗಡಿ ಹಾಗೂ ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ಎಲ್‌. ಮಂಜುನಾಥ ವಿಶ್ವಾಸ ವ್ಯಕ್ತಪಡಿಸಿದರು.

ಇಲ್ಲಿನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಗಡಿ ವಿವಾದ ದಾವೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘1956ರಲ್ಲಿಯೇ ಮುಗಿದುಹೋಗಿರುವ ಗಡಿ ಸಮಸ್ಯೆಯನ್ನು ಪುನಃ ಕೆಣಕುತ್ತಿರುವ ಮಹಾರಾಷ್ಟ್ರ ಸರ್ಕಾರದ ಅರ್ಜಿಯಲ್ಲಿ ಯಾವುದೇ ಹುರುಳಿಲ್ಲ. ವಿಚಾರಣೆಗೆ ಯೋಗ್ಯವಲ್ಲ. ಇದನ್ನು ತಿರಸ್ಕರಿಸಬೇಕೆಂದು ನ್ಯಾಯಾಲಯದಲ್ಲಿ ವಾದ ಮಂಡಿಸಲಿದ್ದೇವೆ’ ಎಂದು ಹೇಳಿದರು.

‘ಬೆಳಗಾವಿ, ಬೀದರ್‌, ಬಾಲ್ಕಿ, ನಿಪ್ಪಾಣಿ, ಕಾರವಾರ ಸೇರಿದಂತೆ ಗಡಿಭಾಗದಲ್ಲಿರುವ 865 ಹಳ್ಳಿಗಳನ್ನು ತನ್ನ ವ್ಯಾಪ್ತಿಗೆ ಸೇರಿಸಬೇಕೆಂದು ಮಹಾರಾಷ್ಟ್ರ ಸರ್ಕಾರವು 2004ರಲ್ಲಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ರಾಜ್ಯಗಳ ಗಡಿ ಗುರುತಿಸುವುದು ಸಂಸತ್ತಿನ ಕೆಲಸ. ಈಗಾಗಲೇ ಆ ಕೆಲಸವನ್ನು 1956ರಲ್ಲಿಯೇ ಸಂಸತ್ತು ಮಾಡಿದೆ. ಇದಲ್ಲದೇ, ಮಹಾರಾಷ್ಟ್ರ ಈಗ ಎತ್ತಿರುವ ವಿಷಯಗಳನ್ನು ಕೂಡ ಅವತ್ತು ಚರ್ಚಿಸಿ, ತಿರಸ್ಕರಿಸಲಾಗಿದೆ. ಹೀಗಾಗಿ ಮಹಾರಾಷ್ಟ್ರದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಬಾರದೆಂದು ರಾಜ್ಯವು ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಲಿದೆ’ ಎಂದರು.

‘ಮಹಾರಾಷ್ಟ್ರದ ಅರ್ಜಿಯು ವಿಚಾರಣೆಗೆ ಯೋಗ್ಯ ಹೌದೋ, ಅಲ್ಲವೋ ಎನ್ನುವುದು ಇನ್ನೂ ತೀರ್ಮಾನವಾಗಿಲ್ಲ. ಈಗಲೇ ಜನರು ಆತಂಕಕ್ಕೆ ಒಳಗಾಗಬಾರದು. ಎಲ್ಲ ದಾಖಲೆಗಳು ರಾಜ್ಯದ ಪರವಾಗಿವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಭಾಷೆಯೊಂದೇ ಆಧಾರದ ಮೇಲೆ ರಾಜ್ಯಗಳ ಪುನರ್‌ವಿಂಗಡಣೆಯಾಗಿಲ್ಲ. ಭಾಷೆಯ ಜೊತೆ ಆರ್ಥಿಕ ಸ್ಥಿತಿ, ಭೌಗೋಳಿಕ ಹಾಗೂ ಆಡಳಿತಾತ್ಮಕ ಅಂಶಗಳನ್ನೂ ಪರಿಗಣಿಸಲಾಗಿತ್ತು. ಹಳ್ಳಿಗಳನ್ನು ಘಟಕಗಳನ್ನಾಗಿ ಪರಿಗಣಿಸಿ, ಎಲ್ಲಿ ಯಾವ ಭಾಷಿಕರು ಹೆಚ್ಚಿರುತ್ತಾರೆಯೋ ಅದನ್ನು ಆ ರಾಜ್ಯಕ್ಕೆ ಸೇರಿಸಬೇಕೆಂದು ಮಹಾರಾಷ್ಟ್ರ ಕೇಳಿದೆ. ಈ ಅಂಶವನ್ನು ಪರಿಗಣಿಸಲು ಸಾಧ್ಯವಿಲ್ಲ. ನೆರೆಯ ಆಂಧ್ರಪ್ರದೇಶ, ತೆಲಂಗಾಣ, ಕೇರಳದಲ್ಲಿ ಹಾಗೂ ಮಹಾರಾಷ್ಟ್ರದ ಕೆಲವು ಪ್ರದೇಶಗಳಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದನ್ನೆಲ್ಲ ಕರ್ನಾಟಕಕ್ಕೆ ಸೇರಿಸಿ ಎಂದು ಕೇಳಕಾಗುತ್ತದೇ? ಹೀಗೇನಾದರೂ ಮಾಡಿದರೆ ಎಲ್ಲ ರಾಜ್ಯಗಳ ಸ್ವರೂಪವೇ ಬದಲಾಗಿ ಹೋಗುತ್ತದೆ. ದೇಶದ ಅಖಂಡತೆಗೂ ಧಕ್ಕೆ ಉಂಟಾಗುತ್ತದೆ’ ಎಂದು ಹೇಳಿದರು.

‘ಗಡಿಭಾಗದಲ್ಲಿ ಕನ್ನಡಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಬೆಳಗಾವಿಯಲ್ಲಿ 2001ರಲ್ಲಿ ಶೇ 39.11ರಷ್ಟು ಕನ್ನಡಿಗರು ಹಾಗೂ ಶೇ 40.99ರಷ್ಟು ಮರಾಠಿಗರು ಇದ್ದರು. 2011ರಲ್ಲಿ ಕನ್ನಡಿಗರ ಸಂಖ್ಯೆ ಶೇ 39.98ಕ್ಕೆ ಏರಿಕೆಯಾಗಿದ್ದರೆ, ಮರಾಠಿಗರ ಸಂಖ್ಯೆಶೇ 38.81ಕ್ಕೆ ಇಳಿದಿದೆ. ಜನಸಂಖ್ಯೆ ಆಧಾರವಾಗಿಟ್ಟುಕೊಂಡರೂ ಮಹಾರಾಷ್ಟ್ರದ ವಾದ ನಿಲ್ಲುವುದಿಲ್ಲ. ಈಗಿರುವಂತೆ ಗಡಿಭಾಗದ ಪ್ರದೇಶಗಳೆಲ್ಲವೂ ಕರ್ನಾಟಕದಲ್ಲಿರುವುದೇ ಸೂಕ್ತವಾಗಿದೆ’ ಎಂದರು.

ಸಭೆಯಲ್ಲಿ ಆಯೋಗದ ಸದಸ್ಯರಾದ ಜಿನದತ್ತ ದೇಸಾಯಿ, ಎಸ್‌.ಎಂ. ಕುಲಕರ್ಣಿ, ಎಂ.ಬಿ. ಝಿರಲಿ, ಜಿಲ್ಲಾಧಿಕಾರಿ ಡಾ.ಎಸ್‌.ಬಿ. ಬೊಮ್ಮನಹಳ್ಳಿ, ನಗರ ಪೊಲೀಸ್‌ ಆಯುಕ್ತ ಬಿ.ಎಸ್‌. ಲೋಕೇಶಕುಮಾರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಉಪಸ್ಥಿತರಿದ್ದರು.

ರಕ್ತದಲ್ಲಿ ಪತ್ರ

ಗಡಿ ಸಮಸ್ಯೆಯನ್ನು ಅನಾವಶ್ಯಕವಾಗಿ ಕೆಣಕುತ್ತಿರುವ ಶಿವಸೇನೆ ಹಾಗೂ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಸಂಘಟನೆಗಳನ್ನು ನಿಷೇಧಿಸಬೇಕೆಂದು ಒತ್ತಾಯಿಸಿ ಕರ್ನಾಟಕ ನವನಿರ್ಮಾಣ ಸೇನೆಯ ಸದಸ್ಯರು ರಕ್ತದಲ್ಲಿ ಬರೆದ ಭಿತ್ತಿಪತ್ರವನ್ನು ಪ್ರದರ್ಶಿಸಿದರು.

ಗಡಿ ಅಭಿವೃದ್ಧಿ ಪ್ರಾಧಿಕಾರದ ಕಚೇರಿಯನ್ನು ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಬೇಕು. ಗಡಿ ಹಾಗೂ ನದಿಗಳ ಸಂರಕ್ಷಣಾ ಆಯೋಗವನ್ನು ಪ್ರತ್ಯೇಕವಾಗಿ ಬೇರ್ಪಡಿಸಬೇಕು ಎಂದೂ ಭಿತ್ತಿಪತ್ರದಲ್ಲಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT