ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಜನರ ಸೆಳೆದ ‘ರೈತನ ಮನೆ’ ನಾಟಕ

ಜೇವರ್ಗಿಯ ರಾಜಣ್ಣ ಅವರ ವಿಶ್ವಜ್ಯೋತಿ ಶ್ರೀ ಪಂಚಾಕ್ಷರಿ ನಾಟ್ಯ ಸಂಘದ ಕೊಡುಗೆ
ಎಸ್.ಬಿ.ವಿಭೂತಿಮಠ
Published 27 ನವೆಂಬರ್ 2023, 4:49 IST
Last Updated 27 ನವೆಂಬರ್ 2023, 4:49 IST
ಅಕ್ಷರ ಗಾತ್ರ

ಎಂ.ಕೆ.ಹುಬ್ಬಳ್ಳಿ: ‘ಕುಂಟ ಕೋಣ, ಮೂಕ ಜಾಣ’ದಂಥ ಪ್ರಸಿದ್ಧ ನಾಟಕವನ್ನು ನಾಡಿಗೆ ನೀಡಿದ ಜೇವರ್ಗಿಯ ರಾಜಣ್ಣ ಅವರ ವಿಶ್ವಜ್ಯೋತಿ ಶ್ರೀ ಪಂಚಾಕ್ಷರಿ ನಾಟ್ಯ ಸಂಘವು, ಈಗ ಪಟ್ಟಣದಲ್ಲಿ ‘ರೈತನ ಮನೆ’ ನಾಟಕ ಪ್ರದರ್ಶನ ಏರ್ಪಡಿಸಿದೆ. ಅವಿಭಕ್ತ ಕುಟುಂಬದ ಸುಂದರ ಸಾಮಾಜಿಕ ಕಥಾಹಂದರ ಹೊಂದಿರುವ ಈ ನಾಟಕ ನವಿರು ನಿರೂಪಣೆ, ಪರಿಪಕ್ವ ನಿರ್ದೇಶನದಿಂದಲೇ ಅಯಸ್ಕಾಂತದಂತೆ ಸೆಳೆಯುತ್ತಿದೆ.

ಆಧುನಿಕ ಕಾಲಘಟ್ಟದಲ್ಲಿ ನಶಿಸುತ್ತಿರುವ ರಂಗಭೂಮಿ ಕಲೆಯನ್ನು ಉಳಿಸಲು ಕೆಲವೇ ರಂಗಭೂಮಿ ಕಲಾತಂಡಗಳು  ಶ್ರಮಿಸುತ್ತಿವೆ. ಜೇವರ್ಗಿ ರಾಜಣ್ಣ ಅವರ ಮನೆತನ ಕೂಡ ಇದರಲ್ಲಿ ಒಂದು. ದಶಕಗಳಿಂದ ವೃತ್ತಿ ರಂಗಭೂಮಿ ಕ್ಷೇತ್ರದಲ್ಲಿ ತೊಡಗಿರುವ ರಾಜಣ್ಣ ಅವರ ತಂಡ ಈವರೆಗೆ ಸಾವಿರಾರು ಯಶಸ್ವಿ ಪ್ರದರ್ಶನ ನೀಡಿದೆ. ರಾಜ್ಯದೆಲ್ಲೆಡೆ ಸಂಚರಿಸಿ ರಂಗಭೂಮಿಯ ಅಮೃತ ಉಣಬಡಿಸುತ್ತಿದೆ.

ಸದ್ಯಕ್ಕೆ ಇವರ ನಾಟಕ ನೋಡುವ ಸಂಭ್ರಮ ಜಿಲ್ಲೆಯ ಜನರದ್ದು. ಎಂ.ಕೆ.ಹುಬ್ಬಳ್ಳಿಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಸುಂದರ ರಂಗಸಜ್ಜಿಕೆ ಹಾಕಲಾಗಿದೆ. ಪ್ರತಿ ಸಂಜೆ 6.15 ಮತ್ತು ರಾತ್ರಿ 9.45ಕ್ಕೆ ನಾಟಕ ಪ್ರದರ್ಶನ ನಡೆಯುತ್ತಿದೆ. ಏಕಕಾಲಕ್ಕೆ 300ಕ್ಕೂ ಅಧಿಕ ಜನ ಕುಳಿತುಕೊಂಡು ನಾಟಕ ನೋಡಬಹುದು. ವಾಹನ ನಿಲುಗಡೆಗೆ ಪಾರ್ಕಿಂಗ್‌, ಸುರಕ್ಷತಾ ವ್ಯವಸ್ಥೆ ಕೂಡ ಮಾಡಲಾಗಿದೆ.

ರಾಜಣ್ಣ ಅವರ ಪುತ್ರಿ ನೀಲಾ ಜೇವರ್ಗಿ ಅವರೇ ಈಗ ಈ ರಂಗರಥವನ್ನು ಎಳೆದುಕೊಂಡು ಹೊರಟಿದ್ದಾರೆ. 20ಕ್ಕೂ ಅಧಿಕ ಅನುಭವಿ ಕಲಾವಿದರು ಮತ್ತು ಸಿಬ್ಬಂದಿ ಇಲ್ಲಿದ್ದಾರೆ. ಇಡೀ ತಂಡವನ್ನು, ವ್ಯವಸ್ಥೆಯನ್ನು, ಕಲೆಯನ್ನು, ಎದುರಾಗುವ ಸವಾಲುಗಳನ್ನು ಮೈಮೇಲೆ ಎಳೆದುಕೊಂಡು ಛಲದಿಂದ ಮುನ್ನಡೆದಿದ್ದಾರೆ ನೀಲಾ.

ಸುಂದರ ಕಥಾನಕ: ಗ್ರಾಮೀಣ ಸೊಗಡಿನಲ್ಲಿ ಮೂಡಿಬಂದ ‘ರೈತನ ಮನೆ’ ತಿಳಿಹಾಸ್ಯ, ದಟ್ಟ ನೈತಿಕ ಸ್ವತ್ತು ಹೊಂದಿದೆ. ರೈತ ದಂಪತಿ, ಎತ್ತಿನ ವೇಷದಲ್ಲಿ ಹಾಕಿ ಕಲಾವಿದರು ರಂಗಸಜ್ಜಿಕೆ ಮೇಲೆ ಬಂದರೆ ಸಾಕು; ಜನ ಸಿಳ್ಳೆ– ಚಪ್ಪಾಳೆ ಹೊಡೆಯುತ್ತಾರೆ.

‘ನನ್ನ ಎತ್ತುಗಳೇ ನನ್ನ ಮಕ್ಕಳು. ನನಗೆ ಮಕ್ಕಳೇ ಬೇಡ...’ ಎನ್ನುವ ರೈತ ಮಹಿಳೆಯ ಮಾತುಗಳು ಹಳ್ಳಿಗರ ಕಣ್ಣಲ್ಲಿ ಕರುಣಾ ರಸ ಉಕ್ಕಿಸುತ್ತವೆ. ರೈತರು, ಕೃಷಿ ಕಾರ್ಮಿಕರು ತಮ್ಮ ಎತ್ತುಗಳನ್ನು ಮಕ್ಕಳಂತೆ ಕಾಣುವ ದೃಶ್ಯಾವಳಿಗಳು ವರ್ಣನಾತೀತ.

ಸಾರಾಯಿ ಅಂಗಡಿ ಸಂಗವ್ವ, ಮಂಗಳೂರು ಮಾಣಿ– ಹುಬ್ಬಳ್ಳಿ ರಾಣಿ, ಚಡ್ಡಿ ಚಿಲಕ್ಯಾ– ಮಡ್ಡಿ ಮಲಿಕ್ಯಾ... ಸೇರಿ ಈ ವರೆಗೆ ಹಲವು ಯಶಸ್ವಿ ನಾಟಕಗಳು ಇದೇ ನಾಟ್ಯ ಸಂಘದ ಕೊಡುಗೆ. ಮುಖ್ಯಸ್ಥೆ ನೀಲಾ ಜೇವರ್ಗಿ, ವ್ಯವಸ್ಥಾಪಕ ಶಂಕರೆಪ್ಪ ಚೌಡಾಪೂರ, ವಿಷ್ಣು ಶಂಕರೆಪ್ಪನವರ, ವರುಣ ಹಿರೇಮಠ ಕೂಡ ಈ ತಂಡದ ಜೀವಾಳ.

ಎಂ.ಕೆ.ಹುಬ್ಬಳ್ಳಿಯಲ್ಲಿ ಪ್ರದರ್ಶನ ಏರ್ಪಡಿಸಿದ ‘ರೈತನ ಮನೆ’ ನಾಟಕದ ದೃಶ್ಯ
ಎಂ.ಕೆ.ಹುಬ್ಬಳ್ಳಿಯಲ್ಲಿ ಪ್ರದರ್ಶನ ಏರ್ಪಡಿಸಿದ ‘ರೈತನ ಮನೆ’ ನಾಟಕದ ದೃಶ್ಯ

ಮಹಿಳೆಯರಿಗೆ ಉಚಿತ ಪ್ರವೇಶ

ವೃತ್ತಿ ರಂಗಭೂಮಿ ನಾಟಕ ನೋಡಲು ಪುರುಷರೇ ಹೆಚ್ಚಾಗಿ ಬರುತ್ತಾರೆ. ಮಹಿಳೆಯರನ್ನೂ ರಂಗಸ್ಥಳಕ್ಕೆ ಕರೆ ತರಬೇಕು ಎನ್ನುವ ಸದುದ್ದೇಶ ಈ ನಾಟ್ಯಸಂಘದ್ದು. ಹೀಗಾಗಿ ಎಂ.ಕೆ.ಹುಬ್ಬಳ್ಳಿಯ ಪ್ರದರ್ಶನದಲ್ಲಿ ಮಹಿಳೆಯರಿಗೆ ಉಚಿತ ಪ್ರವೇಶ ನೀಡಲಾಗಿದೆ ಎಂದು ಸಂಘದ ಮುಖ್ಯಸ್ಥೆ ನೀಲಾ ಜೇವರ್ಗಿ ತಿಳಿಸಿದ್ದಾರೆ. ‘ರಂಗಭೂಮಿ ಕಲೆ ಉಳಿಸಿ– ಬೆಳೆಸಲು ಪ್ರತಿಯೊಬ್ಬರು ಪ್ರೋತ್ಸಾಹಿಸಬೇಕು. ರಂಗಭೂಮಿ ಕಲಾವಿದರು ಪ್ರದರ್ಶಿಸುವ ನಾಟಕಗಳನ್ನು ಕುಟುಂಬ ಸಮೇತರಾಗಿ ಬಂದು ನೋಡಬೇಕು. ಇದೇ ನಮಗೆ ನೀಡುವ ಪ್ರೋತ್ಸಾಹ’ ಎಂದರು. ‘ಕೆಲವು ನಾಟಕಗಳಲ್ಲಿ ಬಳಕೆಯಾಗುವ ಅಶ್ಲೀಲ ಸಂಭಾಷಣೆ ಮತ್ತು ದೃಶ್ಯಗಳಿಂದ ಗ್ರಾಮೀಣ ಭಾಗದಲ್ಲಿ ಮಹಿಳೆಯರು ನಾಟಕ ವೀಕ್ಷಣೆಯಿಂದ ದೂರಾಗುತ್ತಿದ್ದಾರೆ. ಹಾಗಾಗಿ ನಮ್ಮ ಸಂಘ ಅಂತಹ ಅಶ್ಲೀಲ ಮಾತು ಮತ್ತು ದೃಶ್ಯಗಳನ್ನು ನಾಟಕದಿಂದ ದೂರವಿಟ್ಟಿದೆ. ಸುಂದರ ಸಾಮಾಜಿಕ ಸಂದೇಶ ಅರ್ಥ ಹೊಂದಿರುವ ಈ ನಾಟಕವನ್ನು ಪ್ರತಿಯೊಬ್ಬರೂ ನೋಡಿ ಪ್ರೋತ್ಸಾಹಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT