ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕೋಡಿ ಉಪ ವಿಭಾಗದಲ್ಲಿ ಜಲ‘ಬಾಧೆ’

ಕುಡಿಯುವ ನೀರಿನ ಸಮಸ್ಯೆ ಉಲ್ಭಣ, ಹಳ್ಳಿಗಳಲ್ಲಿ ಟ್ಯಾಂಕರ್‌ ಮೂಲಕ ‍ಪೂರೈಕೆ ಆರಂಭ
ಚಂದ್ರಶೇಖರ ಎಸ್. ಚಿನಕೇಕರ
Published 14 ಮಾರ್ಚ್ 2024, 4:32 IST
Last Updated 14 ಮಾರ್ಚ್ 2024, 4:32 IST
ಅಕ್ಷರ ಗಾತ್ರ

ಚಿಕ್ಕೋಡಿ: ಉಪ ವಿಭಾಗ ವ್ಯಾಪ್ತಿಯ ಚಿಕ್ಕೋಡಿ, ಅಥಣಿ, ರಾಯಬಾಗ, ಕಾಗವಾಡ, ನಿಪ್ಪಾಣಿ ತಾಲ್ಲೂಕುಗಳ ಅಲ್ಲಲ್ಲಿ ಕುಡಿಯುವ ನೀರಿನ ಸಮಸ್ಯೆ ವಿಪರೀತವಾಗಿದೆ. ಕೃಷ್ಣಾ, ದೂಧಗಂಗಾ, ವೇದಗಂಗಾ ನದಿಗಳು ಹರಿದಿದ್ದರೂ ಜನ ಜಲಕ್ಕಾಗಿ ಅಲೆದಾಡುವುದು ತಪ್ಪಿಲ್ಲ.

ಕೃಷ್ಣಾ ನದಿಯಿಂದ 12 ಬಹು ಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಗಳು ಇವೆ. ಕೊಕಟನೂರು ಮತ್ತು 17 ಗ್ರಾಮಗಳು, ಮಂಗಸೂಳಿ ಹಾಗೂ 2 ಗ್ರಾಮಗಳು, ತಂಗಡಿ ಹಾಗೂ 2 ಗ್ರಾಮಗಳು, ಕಕಮರಿ ಹಾಗೂ 13 ಗ್ರಾಮಗಳು, ಮದಭಾವಿ ಹಾಗೂ 18 ಗ್ರಾಮಗಳು, ಬಳ್ಳಿಗೇರಿ ಹಾಗೂ 14 ಗ್ರಾಮಗಳು, ದಿಗ್ಗೇವಾಡಿ ಹಾಗೂ 4 ಗ್ರಾಮಗಳು, ಬೆಂಡವಾಡ ಮತ್ತು 9 ಗ್ರಾಮಗಳು, ಸುಟ್ಟಟ್ಟಿ ಮತ್ತು 3 ಗ್ರಾಮಗಳು, ಖೇಮಲಾಪೂರ ಮತ್ತು 5 ಗ್ರಾಮಗಳು, ಸಿದ್ದಾಪೂರ ಹಾಗೂ ರೂಪಿನಾಳ ಗ್ರಾಮ, ಕಾಡಾಪುರ ಹಾಗೂ ಕೇರೂರು ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಗಳು ಇವೆ.

ದೂಧಗಂಗಾ ನದಿಯಿಂದ 8 ಹಾಗೂ ವೇದಗಂಗಾ ನದಿಯಿಂದ 4 ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಗಳು ಇವೆ. ಕೆಲವೊಂದು ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಗಳು ತಾಂತ್ರಿಕ ಕಾರಣದಿಂದ ಸ್ಥಗಿತಗೊಂಡಿದ್ದರಿಂದ ಅಂತಹ ಗ್ರಾಮಗಳಲ್ಲಿ ನೀರಿನ ಸಮಸ್ಯೆ ವಿಪರೀತವಾಗಿದೆ.

ಗಂಭೀರ: ಚಿಕ್ಕೋಡಿ ತಾಲ್ಲೂಕಿನ 41 ಗ್ರಾಮಗಳು, ರಾಯಬಾಗ–33, ಅಥಣಿ–31, ಕಾಗವಾಡ–16 ಹಾಗೂ ನಿಪ್ಪಾಣಿ ತಾಲ್ಲೂಕಿನ 16 ಗ್ರಾಮಗಳು ಸೇರಿದಂತೆ ಉಪ ವಿಭಾಗದ ವ್ಯಾಪ್ತಿಯಲ್ಲಿ ಒಟ್ಟು 137 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ಇಲಾಖೆ ಗುರುತಿಸಿದೆ.

ಚಿಕ್ಕೋಡಿ-56, ರಾಯಬಾಗ-58, ಅಥಣಿ-163, ಕಾಗವಾಡ-37, ನಿಪ್ಪಾಣಿ-45 ಸೇರಿದಂತೆ ಒಟ್ಟು 359 ಕೊಳವೆ ಬಾವಿಗಳನ್ನು ಗುರುತಿಸಲಾಗಿದೆ.

ಟ್ಯಾಂಕರ್‌ ಬಳಕೆ: ಐಗಳಿ, ತೆಲಸಂಗ, ಅಡಹಳ್ಳಿ, ಅನಂತಪೂರ, ಜಂಬಗಿ, ಬಳ್ಳಿಗೇರಿ, ಕನ್ನಾಳ, ಗುಂಡೇವಾಡಿ, ಬಡಚಿ, ಉಮರಾಣಿ, ಬ್ಯಾಕೂಡ, ಹುಬ್ಬರವಾಡಿ, ಸವಸುದ್ದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈಗಾಗಲೇ ನೀರನ್ನು ಟ್ಯಾಂಕರ್ ಮೂಲಕ ಪೂರೈಕೆ ಮಾಡಲಾಗುತ್ತಿದೆ. ಅವು ಕೂಡ ಸಮರ್ಪಕವಾಗಿಲ್ಲ ಎನ್ನುವುದು ಸ್ಥಳೀಯ ದೂರು.

ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿಯೂ ಕೂಡ ಕುಡಿಯುವ ನೀರಿನ ಕೊರತೆ ಆಗಬಹುದು ಎಂಬುದನ್ನು ಈಗಾಗಲೇ ಗುರುತಿಸಲಾಗಿದ್ದು, ಚಿಕ್ಕೋಡಿ ತಾಲ್ಲೂಕಿನಲ್ಲಿ 9, ರಾಯಬಾಗ ತಾಲ್ಲೂಕಿನಲ್ಲಿ 5, ಕಾಗವಾಡ ತಾಲ್ಲೂಕಿನಲ್ಲಿ 22 ವಾರ್ಡ್‌ಗಳು ಸೇರಿದಂತೆ 36 ವಾರ್ಡ್‍ಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಬೇಕಾದ ಅನಿವಾರ್ಯತೆ ಇದೆ ಎನ್ನುವುದು ಇಲಾಖೆಯ ಮಾಹಿತಿ.

6 ಟಿಎಂಸಿ ಅಡಿ ನೀರು ಸಂಗ್ರಹಣಾ ಸಾಮರ್ಥ್ಯದ ಹಿಪ್ಪರಗಿ ಜಲಾಶಯದಲ್ಲಿ ಈಗ 3 ಟಿಎಂಸಿ ಅಡಿ ನೀರು ಮಾತ್ರ ಲಭ್ಯವಿದೆ. ಬಾಗಲಕೋಟೆ, ವಿಜಯಪುರ ಜಿಲ್ಲೆಗೆ ಪೂರೈಸಿದ ಬಳಿಕ ಅಥಣಿ, ಕಾಗವಾಡ ತಾಲ್ಲೂಕಿನ ಜನರಿಗೆ ಸಿಗುವುದು ಅತ್ಯಲ್ಪ ನೀರು ಎಂಬುದು ಜನರ ಅಂಬೋಣ.

ಚಿಕ್ಕೋಡಿ ತಾಲ್ಲೂಕಿನ ಬೆಳಕೂಡ ಗ್ರಾಮದಲ್ಲಿ ಮಹಿಳೆಯೊಬ್ಬರು ಒತ್ತುವ ಗಾಡಿ ಮೂಲಕ ನೀರು ಸಂಗ್ರಹಿಸಿದರು – ಪ್ರಜಾವಾಣಿ ಚಿತ್ರ
ಚಿಕ್ಕೋಡಿ ತಾಲ್ಲೂಕಿನ ಬೆಳಕೂಡ ಗ್ರಾಮದಲ್ಲಿ ಮಹಿಳೆಯೊಬ್ಬರು ಒತ್ತುವ ಗಾಡಿ ಮೂಲಕ ನೀರು ಸಂಗ್ರಹಿಸಿದರು – ಪ್ರಜಾವಾಣಿ ಚಿತ್ರ

ತೋಟಪಟ್ಟಿಯ ಜನರಿಗೆ ಮೂರು ದಿನಕ್ಕೊಮ್ಮೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ದಿನವೂ ಪೂರೈಕೆ ಮಾಡಬೇಕು

-ಮಹಾದೇವ ಮಡಿವಾಳ ಅಧ್ಯಕ್ಷ ರೈತ ಸಂಘ ಅಥಣಿ ತಾಲ್ಲೂಕು

ಶಾಸಕರ ಅಧ್ಯಕ್ಷತೆಯಲ್ಲಿ 10ಕ್ಕೂ ಹೆಚ್ಚು ಟಾಸ್ಕಫೋರ್ಸ್ ಸಭೆ ಮಾಡಿ ಬರ ನಿರ್ವಹಣೆಯ ಕುರಿತು ಚರ್ಚೆ ಮಾಡಲಾಗಿದೆ. ಅಗತ್ಯ ಕ್ರಮ ಕೈಗೊಳ್ಳಲಾಗಿದೆ

-ಮಹಿಬೂಬಿ ಉಪ ವಿಭಾಗಾಧಿಕಾರಿ ಚಿಕ್ಕೋಡಿ

ಮನುಷ್ಯರಿಗಿಂತ ಹೆಚ್ಚಾಗಿ ದನ ಕರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗಿದೆ. ಸರಿಯಾಗಿ ವಿದ್ಯುತ್‌ ಇಲ್ಲದಿರುವುದೂ ಜಲಕ್ಷಾಮಕ್ಕೆ ಕಾರಣ

0ಬಾಳಾಸಾಹೇಬ ಅಕ್ಕೋಳೆ ಬಂಬಲವಾಡ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT