ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಕಾಕ: ಘಟಪ್ರಭೆ ಮಡಿಲಲ್ಲೇ ನೀರಿಗೆ ಹಾಹಾಕಾರ!

ಹೆಸರಿಗಷ್ಟೇ 24x7 ಕುಡಿಯುವ ನೀರು ಸರಬರಾಜು ಯೋಜನೆ
Published 25 ಮಾರ್ಚ್ 2024, 6:38 IST
Last Updated 25 ಮಾರ್ಚ್ 2024, 6:38 IST
ಅಕ್ಷರ ಗಾತ್ರ

ಗೋಕಾಕ: ಘಟಪ್ರಭೆ ಮಡಿಲಲ್ಲಿರುವ ತಾಲ್ಲೂಕಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಸಮರ್ಪಕವಾಗಿ ನೀರು ಸಿಗದೆ ಜನರು ಪರದಾಡುವಂತಾಗಿದೆ.

ಇಲ್ಲಿನ ನಗರಸಭೆ ವ್ಯಾಪ್ತಿಯ 31 ವಾರ್ಡ್‌ಗಳಲ್ಲಿ 24x7 ಕುಡಿಯುವ ನೀರು ಸರಬರಾಜು ಯೋಜನೆ ಅನುಷ್ಠಾನಗೊಳಿಸಲಾಗಿದೆ. ಆದರೆ, ನೀರು ಸಾಕಾಗುತ್ತಿಲ್ಲ. ಈ ಬಗ್ಗೆ ಸ್ಥಳೀಯರು ನಗರಸಭೆಯವರನ್ನು ವಿಚಾರಿಸಿದರೆ, ‘ಘಟಪ್ರಭಾ ನದಿಯಲ್ಲೇ ನೀರಿಲ್ಲ’ ಎಂಬ ಸಿದ್ಧ ಉತ್ತರ ಕೇಳಿಬರುತ್ತಿದೆ.

ತಾಲ್ಲೂಕಿನಲ್ಲಿ ಪ್ರತಿವರ್ಷ ಏಪ್ರಿಲ್‌ ಅಂತ್ಯದ ವೇಳೆಗೆ ಜಲಬವಣೆ ತಲೆದೋರುತ್ತಿತ್ತು. ಆದರೆ, ಈ ಸಲ ಮಾರ್ಚ್‌ನಲ್ಲೇ ಪರಿಸ್ಥಿತಿ ಬಿಗಡಾಯಿಸಿದೆ. ‘ಈಗಲೇ ನೀರಿಲ್ಲ. ಬೇಸಿಗೆ ಮುಗಿಯುವವರೆಗೆ ನಮ್ಮ ಕತೆ ಏನು’ ಎಂಬ ಆತಂಕ ಜನರನ್ನು ಕಾಡುತ್ತಿದೆ.

ತಾಲ್ಲೂಕಿನ ಹಳ್ಳಿಗಳು ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಜಲಾಶಯ ಹಾಗೂ ಶಿರೂರ ಜಲಾಶಯ ಅವಲಂಬಿಸಿವೆ. ಆದರೆ, ಈಗ ಎರಡೂ ಜಲಾಶಯಗಳಲ್ಲಿ ನೀರಿನ ಸಂಗ್ರಹ ಮಟ್ಟ ಕುಸಿದಿದೆ. ಆ ಜಲಾಶಯಗಳಿಂದ ನೀರನ್ನೇ ಹರಿಸದ್ದರಿಂದ ಘಟಪ್ರಭಾ ಮತ್ತು ಮಾರ್ಕಂಡೇಯ ನದಿಗಳ ಒಡಲು ಬರಿದಾಗಿದೆ. ಗೋಕಾಕ, ಅಡಿಬಟ್ಟಿ, ಕಲಾರಕೊಪ್ಪ, ಮೆಳವಂಕಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದೆ.

‘ಗೋಕಾಕದಲ್ಲಿ ನೀರಿನ ಸಮಸ್ಯೆ ದಿನೇದಿನೆ ಹೆಚ್ಚುತ್ತಿದೆ. ಜನಪ್ರತಿನಿಧಿಗಳು ಮತ್ತು ನಗರಸಭೆ ಅಧಿಕಾರಿಗಳು ಹಿಡಕಲ್ ಮತ್ತು ಶಿರೂರ ಜಲಾಶಯಗಳಿಂದ ನದಿಗಳಿಗೆ ನೀರು ಹರಿಸಿದರೆ ಅನುಕೂಲವಾಗುತ್ತದೆ’ ಎಂದು ಸಾಮಾಜಿಕ ಕಾರ್ಯಕರ್ತ ವಸಂತ ಹವಾಲ್ದಾರ ಹೇಳುತ್ತಾರೆ.

ಕಟ್ಟಡ ಕಾಮಗಾರಿಗಳೇ ಸ್ಥಗಿತ: ನಗರದಲ್ಲಿ ವಿವಿಧ ಕಟ್ಟಡ ನಿರ್ಮಾಣ ಕಾಮಗಾರಿಗಳು ಭರದಿಂದ ಸಾಗಿವೆ. ಆದರೆ, ಬೇಡಿಕೆಯಷ್ಟು ನೀರು ಸಿಗದೆ ಕಟ್ಟಡಗಳನ್ನು ನಿರ್ಮಿಸುತ್ತಿರುವವರು ಪರದಾಡುತ್ತಿದ್ದಾರೆ. ನೀರಿಗಾಗಿ ಟ್ಯಾಂಕರ್‌ ಮೊರೆ ಹೋಗುತ್ತಿದ್ದಾರೆ. ಇನ್ನೂ ಕೆಲವರು ಕಟ್ಟಡ ನಿರ್ಮಾಣ ಪ್ರಕ್ರಿಯೆಯನ್ನೇ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ.

‘ನಾವು ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಿಸಿದ್ದೇವೆ. ಕಟ್ಟಡ ಸಾಮಗ್ರಿಗಳಿಗಿಂತ, ನೀರು ಸಂಗ್ರಹಿಸುವುದೇ ದುಬಾರಿಯಾಗಿ ಪರಿಣಮಿಸಿದೆ. ಅನಿವಾರ್ಯವಾಗಿ ಟ್ಯಾಂಕರ್ ನೀರು ತರಿಸುತ್ತಿದ್ದೇವೆ’ ಎಂದು ಸ್ಥಳೀಯ ನಿವಾಸಿ ವಿಶ್ವನಾಥ ಪ್ಯಾಟಿಗೌಡರ ತಿಳಿಸಿದರು.

ಗೋಕಾಕ ತಾಲ್ಲೂಕಿನ ಲೋಳಸೂರ ಗ್ರಾಮದ ಬಳಿ ಘಟಪ್ರಭಾ ನದಿ ಬರಿದಾಗಿದೆ– ಪ್ರಜಾವಾಣಿ ಚಿತ್ರ
ಗೋಕಾಕ ತಾಲ್ಲೂಕಿನ ಲೋಳಸೂರ ಗ್ರಾಮದ ಬಳಿ ಘಟಪ್ರಭಾ ನದಿ ಬರಿದಾಗಿದೆ– ಪ್ರಜಾವಾಣಿ ಚಿತ್ರ
‘ಬೇಡಿಕೆ ಸಲ್ಲಿಸಿದ್ದೇವೆ’
‘ಗೋಕಾಕದ ಕುಡಿಯುವ ನೀರು ಶುದ್ಧೀಕರಣ ಘಟಕದಲ್ಲಿದ್ದ ಪರಿಕರವೊಂದು ಸುಟ್ಟಿದೆ. ಲಭ್ಯವಿರುವ ಪರಿಕರಗಳಿಂದ ನಗರಕ್ಕೆ ಸಮರ್ಪಕವಾಗಿ ನೀರು ಪೂರೈಸಲಾಗುತ್ತಿಲ್ಲ. ಹಿಡಕಲ್‌ ಜಲಾಶಯದಿಂದ ಗೋಕಾಕ ನಗರಕ್ಕೆ ನೀರು ಬಿಡುಗಡೆಗೊಳಿಸುವಂತೆ ಸಣ್ಣ ನೀರಾವರಿ ಇಲಾಖೆಯಿಂದ ಬೇಡಿಕೆ ಸಲ್ಲಿಸಿದ್ದೇವೆ’ ಎಂದು ಗೋಕಾಕ ನಗರಸಭೆ ಆಯುಕ್ತ ರಮೇಶ ಜಾಧವ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT