ಶನಿವಾರ, ಅಕ್ಟೋಬರ್ 31, 2020
27 °C

ಮೀರಜ್‌ನ ಡ್ರಗ್‌ ಪೆಡ್ಲರ್ ಬಂಧನ: ₹ 24 ಲಕ್ಷ ಮೌಲ್ಯದ 120 ಕೆ.ಜಿ. ಗಾಂಜಾ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಡಿಸಿಐಬಿ ಪೊಲೀಸರು ನೆರೆಯ ಮಹಾರಾಷ್ಟ್ರದ ಮೀರಜ್‌ನ ಡ್ರಗ್ ಪೆಡ್ಲರ್ ಬಂಧಿಸಿ, ₹ 24 ಲಕ್ಷ ಮೌಲ್ಯದ 120 ಕೆ.ಜಿ. ಗಾಂಜಾ (ತಲಾ 2 ಕೆ.ಜಿ. ತೂಕದ 60 ಪಾಕೆಟ್‌ಗಳು) ವಶಪಡಿಸಿಕೊಂಡಿದ್ದಾರೆ.

ಮೀರಜ್‌ನ ಮಾಳಿ ಗಲ್ಲಿ ದರ್ಗಾ ಚೌಕದ ನಿವಾಸಿ ಆಶ್ಪಾಕ್‌ ಮೈನುದ್ದೀನ್ ಮುಲ್ಲಾ (43) ಬಂಧಿತ.

ಇದೇ 22ರಂದು ಚಿಕ್ಕೋಡಿ ಪೊಲೀಸರು ಮೀರಜ್‌ ವಶೀಮ್‌ ಶೇಖ್‌ ಎನ್ನುವವರನ್ನು ಬಂಧಿಸಿ, 2 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದರು. ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಆಶ್ಪಾಕ್‌ ಪರಾರಿಯಾಗಿದ್ದ.

‘ಇದು ಮಹತ್ವದ ಪ್ರಕರಣವಾದ್ದರಿಂದ ಡಿಸಿಐಬಿ ಇನ್‌ಸ್ಪೆಕ್ಟರ್‌ ನಿಂಗನಗೌಡ ಪಾಟೀಲ ನೇತೃತ್ವದ ತಂಡಕ್ಕೆ ತನಿಖೆಯ ಹೊಣೆ ನೀಡಲಾಗಿತ್ತು. ಅದರಂತೆ ಕಾರ್ಯಾಚರಣೆ ನಡೆಸಿದ ತಂಡ ಆಶ್ಪಾಕ್‌ನನ್ನು ಬುಧವಾರ ಮೀರಜ್‌ನಲ್ಲಿ ಬಂಧಿಸಿದೆ. ಆತ, ತೆಲಂಗಾಣ ಹಾಗೂ ಹೈದರಾಬಾದ್‌ನ ಇಬ್ಬರಿಂದ ಗಾಂಜಾ ಖರೀದಿಸಿ ಮೀರಜ್ ಸುತ್ತಮುತ್ತಲಿನ ಪ್ರದೇಶದಲ್ಲಿ ಶೇಖರಿಸಿಟ್ಟು ಮಹಾರಾಷ್ಟ್ರದ ಸಾಂಗ್ಲಿ, ಮೀರಜ್‌, ಕರ್ನಾಟಕದ ಚಿಕ್ಕೋಡಿ, ಬೆಳಗಾವಿ ಮತ್ತು ಧಾರವಾಡ ಕಡೆಗಳಲ್ಲಿ ಮಾರುತ್ತಿದ್ದ ಎನ್ನುವುದು ವಿಚಾರಣೆಯಿಂದ ತಿಳಿದುಬಂದಿದೆ’ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ.

‘ಆಶ್ಪಾಕ್‌ ಮೈಶಾಳ ಗ್ರಾಮದ ಹೊರವಲಯದಲ್ಲಿ ನಿಲ್ಲಿಸಿದ್ದ ಕಾರ್‌ನ ಡಿಕ್ಕಿಯಲ್ಲಿಟ್ಟಿದ್ದ 40 ಕೆ.ಜಿ. ಹಾಗೂ ಮೈಶಾಳ ಜತ್ತಕ್ಕೆ ನೀರು ಪೂರೈಸುವ ಪಂಪ್‌ಹೌಸ್‌ ಬಳಿ ಸಂಗ್ರಹಿಸಿಟ್ಟಿದ್ದ ಗಾಂಜಾ, ಸ್ವಿಫ್ಟ್ ಡಿಸೈರ್ ಕಾರು, ದ್ವಿಚಕ್ರವಾಹನವನ್ನು ಶನಿವಾರ ವಶಕ್ಕೆ ಪಡೆಯಲಾಗಿದೆ. ಇವೆಲ್ಲದರ ಒಟ್ಟು ಮೌಲ್ಯ ₹ 28.50 ಲಕ್ಷವಾಗುತ್ತದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆತನಿಗೆ ಗಾಂಜಾ ಪೂರೈಸುತ್ತಿದ್ದ ಇಬ್ಬರು ಪರಾರಿಯಾಗಿದ್ದು, ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು