ಗುರುವಾರ , ಏಪ್ರಿಲ್ 22, 2021
28 °C
ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

ಪರಿಶಿಷ್ಟರ ಹಾಸ್ಟೆಲ್‌ಗಳ ಅಭಿವೃದ್ಧಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಪರಿಶಿಷ್ಟ ಜಾತಿ ಹಾಗೂ ಪಂಗಡದ ವಿದ್ಯಾರ್ಥಿಗಳ ಹಾಸ್ಟೆಲ್‌ಗಳಲ್ಲಿ ಮೂಲಸೌಲಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸಬೇಕು’ ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯವರು ಮಂಗಳವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಅವರಿಗೆ ಮನವಿ ಸಲ್ಲಿಸಿದರು.

‘ಸರ್ಕಾರವು ಈ ಸಮುದಾಯದವರ ಹೆಸರಿನಲ್ಲಿ ಹಾಸ್ಟೆಲ್‌ಗಳಿಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡುತ್ತಿದೆ. ಆದರೂ ಹಾಸ್ಟೆಲ್‌ಗಳು ಅಭಿವೃದ್ಧಿ ಕಾಣುತ್ತಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ತೊಂದರೆ ಅನುಭವಿಸುತ್ತಿದ್ದಾರೆ. ಗುಣಮಟ್ಟದ ಶಿಕ್ಷಣ ನೀಡುವಲ್ಲಿ ವಿಫಲರಾದ ಅಧಿಕಾರಿಗಳು ಟೆಂಡರ್ ಮತ್ತು ಕಮಿಷನ್ ಪ್ರಕ್ರಿಯೆಯ ಹೆಸರಿನಲ್ಲಿ ಹಣ ಗುಳುಂ ಮಾಡುತ್ತಿದ್ದಾರೆ’ ಎಂದು ದೂರಿದರು.

‘ಶಿಥಿಲಾವಸ್ಥೆ ತಲುಪಿರುವ ಹಾಸ್ಟೆಲ್‌ಗಳನ್ನು ಕೂಡಲೇ ದುರಸ್ತಿ ಮಾಡಬೇಕು. ದಲಿತ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತಿದ್ದು, ಅದಕ್ಕೆ ತಕ್ಕಂತೆ ಹಾಸ್ಟೆಲ್‌ಗಳಲ್ಲಿನ ವ್ಯವಸ್ಥೆ ಸುಧಾರಿಸುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ವಿದ್ಯಾರ್ಥಿಗಳ ಕಲಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ’ ಎಂದು ಆರೋಪಿಸಿದರು.

‘ಬಾಡಿಗೆ ಕಟ್ಟಡಗಳಿಗೆ ಲಕ್ಷಾಂತರ ರೂಪಾಯಿ ಸುರಿಯಲಾಗುತ್ತಿದೆ. ಆದರೂ ಮೂಲಸೌಕರ್ಯಗಳಿಲ್ಲದೇ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಹಾಸ್ಟೆಲ್‌ಗಳಲ್ಲಿ ಅಡುಗೆ ಮಾಡುತ್ತಿರುವವರಿಗೆ ಅವೈಜ್ಞಾನಿಕವಾಗಿ ಜೂನಿಯರ್‌ ವಾರ್ಡನ್‌ಗಳೆಂದು ಪದೋನ್ನತ್ತಿ ನೀಡಿ 2–3 ಹಾಸ್ಟೆಲ್‌ಗಳ ಜವಾಬ್ದಾರಿ ವಹಿಸಲಾಗಿದೆ’ ಎಂದು ದೂರಿದರು.

‘ಸಮಾಜಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಲ್ಲಿ ಪ್ರಾಥಮಿಕ ಶಾಲೆಯಿಂದಲೂ ನೆಲೆಸಿದ್ದ ವಿದ್ಯಾರ್ಥಿಗಳಿಗೆ, ಮೆಟ್ರಿಕ್‌ ನಂತರ ಮರುಪ್ರವೇಶಾತಿ ಪಡೆಯಬೇಕು ಎಂದು ಆದೇಶ ಹೊರಡಿಸಿರುವುದು ಖಂಡನೀಯ. ಬಹುತೇಕ ವಸತಿನಿಲಯಗಳಲ್ಲಿ ಕೊಠಡಿಯೊಂದರಲ್ಲಿ 20ಕ್ಕೂ ಹೆಚ್ಚಿನ ವಿದ್ಯಾರ್ಥಿಗಳನ್ನು ಒತ್ತಾಯಪೂರ್ವಕವಾಗಿ ಹಾಕಲಾಗುತ್ತಿದೆ. ಇದರಿಂದ ಅವರ ಕಲಿಕೆಗೆ ತೊಂದರೆಯಾಗುತ್ತಿದೆ. ಈ ಸಮಸ್ಯೆಗಳನ್ನು ಪರಿಹರಿಸಬೇಕು. ವಿದ್ಯಾರ್ಥಿವೇತನ ಪಡೆಯುವುದಕ್ಕೆ ಎದುರಾಗಿರುವ ತೊಡಕುಗಳನ್ನು ನಿವಾರಿಸಬೇಕು’ ಎಂದು ಒತ್ತಾಯಿಸಿದರು.

ದಸಂಸ ಸಂಘಟನಾ ಸಂಚಾಲಕ ಎಂ.ಎಸ್. ನಾಗಣ್ಣವರ, ಜಿಲ್ಲಾ ಸಂಚಾಲಕ ಲಕ್ಷ್ಮಣ ಯಳ್ಳೂರಕರ, ಮಾರುತಿ ರಂಗಾಪುರಿ, ಪ್ರಕಾಶ ಹೊಸಮನಿ, ಸುಭಾಸ ಹುಲೆನ್ನವರ, ಯಲ್ಲಪ್ಪ ಗೊರಮಕೊಳ್ಳ, ಯಲಪ್ಪ ಕಾಳಪ್ಪನವರ, ಯಲ್ಲಪ್ಪ ಮಿಯಪ್ಪನವರ, ರಮೇಶ ಮ್ಯಾಗೇರಿ, ನಾಗಪ್ಪ ಬಸಲಿಂಗನವರ, ದುರಗವ್ವ ಮ್ಯಾಗೇರಿ, ದಾಕ್ಷಾಯಿಣಿ ಬಸಲಿಂಗನವರ, ರೇವಣ್ಣ ಬಡೆಪ್ಪನವರ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.