ಶನಿವಾರ, ಜುಲೈ 31, 2021
24 °C
ಜಿಲ್ಲಾ ಪಂಚಾಯಿತಿ, ಕೈಗಾರಿಕಾ ಇಲಾಖೆಯಿಂದ ಕ್ರಮ

ಬೆಳಗಾವಿ | ಹಿಂದಿರುಗಿದ ಕಾರ್ಮಿಕರಿಗೆ ಸ್ಥಳೀಯ ಉದ್ಯೋಗ ದೊರಕಿಸಲು ಕ್ರಮ

ಎಂ. ಮಹೇಶ Updated:

ಅಕ್ಷರ ಗಾತ್ರ : | |

ಬೆಳಗಾವಿ: ಕೋವಿಡ್–19 ಲಾಕ್‌ಡೌನ್‌ ಪರಿಣಾಮ ಹೊರ ರಾಜ್ಯಗಳ ಕಾರ್ಮಿಕರು ಅವರವರ ಊರುಗಳಿಗೆ ತೆರಳಿರುವುದರಿಂದಾಗಿ ಉಂಟಾಗಿರುವ ಶ್ರಮಿಕರ ಕೊರತೆಯನ್ನು ನೀಗಿಸಲು ಇಲ್ಲಿ ಯೋಜನೆ ರೂಪಿಸಲಾಗಿದೆ.

ಜಿಲ್ಲೆಯ ಕಾರ್ಮಿಕರಿಗೆ ಉದ್ಯೋಗ ಹಾಗೂ ಕೈಗಾರಿಕೆಗಳಿಗೆ ಕೆಲಸಗಾರರು ಸಿಗುವಂತೆ ಮಾಡಲು ಸಿದ್ಧತೆ ಆರಂಭಿಸಲಾಗಿದೆ.

ಲಾಕ್‌ಡೌನ್‌ ಪರಿಣಾಮ ಹೆಚ್ಚಿನ ಕೈಗಾರಿಕೆಗಳು ಬಂಡವಾಳ, ಮಾರುಕಟ್ಟೆ ಸಮಸ್ಯೆ ಜೊತೆ ಕಾರ್ಮಿಕರ ಕೊರತೆಯನ್ನೂ ಎದುರಿಸುತ್ತಿವೆ. ಕಾರ್ಮಿಕರು ವಲಸೆ ಹೋದ ಕಾರಣ ಇಲ್ಲಿ ಕೆಲಸಗಾರರು ಸಿಗುತ್ತಿಲ್ಲ. ಇದರಿಂದ ಕೈಗಾರಿಕಾ ಅಭಿವೃದ್ಧಿ ಕುಂಠಿತವಾಗುವ ಸಾಧ್ಯತೆ ಇರುವುದರಿಂದಾಗಿ ಎಚ್ಚೆತ್ತಿರುವ ಕೈಗಾರಿಕಾ ಇಲಾಖೆಯು, ಬೇರೆ ಕಡೆಗಳಿಂದ ಬಂದಿರುವ ಜಿಲ್ಲೆಯ ಕಾರ್ಮಿಕರಿಗೆ ಕೆಲಸ ಕೊಡಿಸುವುದಕ್ಕೆ  ಯೋಜಿಸಿದೆ.

ಹೊರ ರಾಜ್ಯಗಳಿಂದ ಬಂದಿರುವವರಿಗೆ ಬೇಕಾಗುವ ಕೌಶಲ ತರಬೇತಿ ಒದಗಿಸಿ, ಕೈಗಾರಿಕೆಗಳಲ್ಲಿ ಉದ್ಯೋಗ ಕಂಡುಕೊಳ್ಳುವಂತೆ ಮಾಡಲು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಕ್ರಮ ವಹಿಸಿದೆ.

ಕೈಗಾರಿಕೆಗಳಿಗೆ ಮಾಹಿತಿ: ಕೈಗಾರಿಕೆಗಳಿಗೆ ಅಗತ್ಯವಿರುವ ಕಾರ್ಮಿಕರ ಬೇಡಿಕೆ ಸಲ್ಲಿಸುವಂತೆಯೂ ಉದ್ಯಮಿಗಳನ್ನು ಕೋರಿದೆ.

‘ಮಹಾರಾಷ್ಟ್ರ, ಗೋವಾ, ಗುಜರಾತ್‌, ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳಿಂದ ಜಿಲ್ಲೆಗೆ ಸಾವಿರಾರು ಕಾರ್ಮಿಕರು ವಾಪಸಾಗಿದ್ದಾರೆ. ಅವರಲ್ಲಿ ಹಲವರು ಸದ್ಯಕ್ಕೆ ಮತ್ತೆ ಹೋಗುವ ಸಾಧ್ಯತೆ ಕಡಿಮೆ. ಹೀಗಾಗಿ, ಅವರ ವಿದ್ಯಾರ್ಹತೆ, ಕೌಶಲ, ಅನುಭವ ಮೊದಲಾದ ಮಾಹಿತಿಯನ್ನು ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಮಾಡಲಾಗುತ್ತಿದೆ. ಈವರೆಗೆ 22ರಿಂದ 40 ವರ್ಷದ 10,080 ಮಂದಿಯನ್ನು ಗುರುತಿಸಿದ್ದೇವೆ. ಇದಕ್ಕಿಂತ ಜಾಸ್ತಿ ವಯಸ್ಸಾದವರನ್ನು ಪರಿಗಣಿಸಿಲ್ಲ. ಇವರ ಪಟ್ಟಿಯನ್ನು ಕೈಗಾರಿಕೋದ್ಯಮಿಗಳೊಂದಿಗೆ ಹಂಚಿಕೊಂಡಿದ್ದೇವೆ. ಅವರು ಅಗತ್ಯವಿರುವ ಕಾರ್ಮಿಕರನ್ನು ನೇಮಿಸಿಕೊಳ್ಳಬಹುದು. ಇದರಿಂದ ಕೊರತೆ ನೀಗಲಿದೆ’ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದೊಡ್ಡಬಸವರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

ಸೇತುವೆಯಾಗಿ ಕೆಲಸ: ‘ನಾಲ್ಕೈದು ಕಂಪನಿಗಳು ಬೇಡಿಕೆ ಸಲ್ಲಿಸಿವೆ. ಅವಶ್ಯವಿದ್ದರೆ ಕೇಂದ್ರದಿಂದಲೇ ಕೌಶಲ ತರಬೇತಿ ನೀಡಲಾಗುವುದು. ಉದ್ಯಮಿಗಳೇ ನೇರವಾಗಿ ಸೇರಿಸಿಕೊಳ್ಳುವುದಕ್ಕೂ ಅವಕಾಶವಿದೆ’ ಎನ್ನುತ್ತಾರೆ ಅವರು.

‘ಹೊರ ರಾಜ್ಯಗಳ ಸಾವಿರಾರು ಕಾರ್ಮಿಕರು ಇಲ್ಲಿಂದ ಹೋಗಿಬಿಟ್ಟಿದ್ದಾರೆ. ಇದರಿಂದ ಸಹಜವಾಗಿಯೇ ಉದ್ಯೋಗಿಗಳ ಕೊರತೆ ಕಂಡುಬಂದಿದೆ. ಇದೇ ವೇಳೆ, ಬೇರೆ ರಾಜ್ಯಗಳಿಂದ ಬಂದವರಿಗೆ ಕೆಲಸದ ಅಗತ್ಯವಿದೆ. ಹೀಗಾಗಿ, ಕಾರ್ಮಿಕರು ಹಾಗೂ ಉದ್ಯಮಿಗಳಿಬ್ಬರಿಗೂ ಸೇತುವೆಯಾಗಿ ನಾವು ಕೆಲಸ ಮಾಡುತ್ತಿದ್ದೇವೆ. ಇದಕ್ಕಾಗಿಯೇ ತಂತ್ರಾಂಶ ರೂಪಿಸುವ ಉದ್ದೇಶವೂ ಇದೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು