ಬುಧವಾರ, ಆಗಸ್ಟ್ 4, 2021
27 °C

ರೆಮ್‌ಡಿಸಿವಿರ್‌ ಅಕ್ರಮ ಮಾರಾಟ ಆಗದಂತೆ ನಿಗಾ ವಹಿಸಲು ಸವದಿ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ರೆಮ್‌ಡಿಸಿವಿರ್ ಉತ್ಪಾದನೆಯನ್ನು ಇತ್ತೀಚೆಗೆ ಕಡಿಮೆ‌ ಮಾಡಲಾಗಿತ್ತು. ಇದರಿಂದ ದಿಢೀರ್ ಕೊರತೆ ಎದುರಾಗಿದೆ. ಇನ್ನೆರಡು ದಿನಗಳಲ್ಲಿ ಸಾಕಷ್ಟು ಲಭಿಸಲಿದೆ’ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದರು.

ಕೋವಿಡ್-19 ನಿಯಂತ್ರಣ, ಆಕ್ಸಿಜನ್ ಹಾಗೂ ರೆಮ್‌ಡಿಸಿವಿರ್ ಪೂರೈಕೆಗೆ ಸಂಬಂಧಿಸಿದಂತೆ ಇಲ್ಲಿನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಜಿಲ್ಲಾವಾರು‌ ರೆಮ್‌ಡಿಸಿವಿರ್‌ ವಿತರಿಸಲಾಗುತ್ತಿದೆ. ಜಿಲ್ಲೆಯಲ್ಲಿ 50ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವುದರಿಂದ ಜಿಲ್ಲೆಯ ಜನಸಂಖ್ಯೆ ಆಧರಿಸಿ ಬೇಡಿಕೆ ಸಲ್ಲಿಸಬೇಕು’ ಎಂದು ಸೂಚಿಸಿದರು.

ಪತ್ತೆಹಚ್ಚಿರಿ:

‘ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಅಗತ್ಯವಿರುವಷ್ಟು ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಖಾಸಗಿ ಆಸ್ಪತ್ರೆಗಳಿಗೆ ಪೂರೈಕೆ ಮಾಡಲಾಗಿರುವ ರೆಮ್‌ಡಿಸಿವಿರ್ ಬಳಕೆ ಹಾಗೂ ಅದಕ್ಕೆ ವಿಧಿಸಲಾಗುತ್ತಿರುವ ದರದ ಮೇಲೆ ಕೂಡ ಔಷಧ ನಿಯಂತ್ರಕರು ನಿಗಾ ವಹಿಸಬೇಕು. ಹೆಚ್ಚು ಬೆಲೆಗೆ ಅಕ್ರಮವಾಗಿ ಮಾರುವವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು’ ಎಂದು ನಿರ್ದೇಶನ ನೀಡಿದರು.

‘ಸರ್ಕಾರವು ಸಾರ್ವಜನಿಕರ ಹಿತದೃಷ್ಟಿಯಿಂದ ಖಾಸಗಿ ಆಸ್ಪತ್ರೆಗಳಿಗೆ ರೆಮ್‌ಡಿಸಿವಿರ್ ನೀಡುತ್ತಿದೆ. ಆದರೆ, ಕೆಲವು ಕಡೆ ಮಿತಿಮೀರಿ ಹಣ ಪಡೆಯಲಾಗುತ್ತಿದೆ ಎಂಬ ದೂರುಗಳಿವೆ. ಈ ಬಗ್ಗೆ ನಿಗಾ ವಹಿಸಬೇಕು’ ಎಂದು ಸಲಹೆ ನೀಡಿದರು. ಪ್ರಾಮಾಣಿಕ ಅಧಿಕಾರಿಗಳ ತಂಡ ರಚಿಸುವಂತೆ ತಿಳಿಸಲಾಯಿತು.

ನಿಭಾಯಿಸಲು ಸಿದ್ಧವಾಗಿ:

‘ತಾಲ್ಲೂಕು ಮಟ್ಟದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ವೈದ್ಯಕೀಯ ಸೌಲಭ್ಯ, ಹಾಸಿಗೆಗಳ ಸಾಮರ್ಥ್ಯ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕು. ಸೋಂಕು ಹೆಚ್ಚುತ್ತಿರುವುದರಿಂದ ತುರ್ತು ಪರಿಸ್ಥಿತಿ ನಿಭಾಯಿಸಲು ಅಗತ್ಯವಿರುವ ಔಷಧೋಪಕರಣಗಳು, ಸಿಬ್ಬಂದಿ, ಆಂಬುಲೆನ್ಸ್ ಮತ್ತಿತರ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು’ ಎಂದು ತಾಕೀತು ಮಾಡಿದರು.

‘ಕಂದಾಯ, ಪೊಲೀಸ್, ಆರೋಗ್ಯ ಸೇರಿದಂತೆ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸುವ ಮೂಲಕ ಕೋವಿಡ್ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ತಿಳಿಸಿದರು.

ಕತ್ತಿ ಅಧ್ಯಕ್ಷತೆಯಲ್ಲಿ ಸಮಿತಿ:

‘ಸಚಿವ ಉಮೇಶ ಕತ್ತಿ ಅವರ ಅಧ್ಯಕ್ಷತೆಯಲ್ಲಿ ‌ಜಿಲ್ಲಾ ಕೋವಿಡ್ ನಿಯಂತ್ರಣ ಸಮಿತಿ ರಚಿಸಲಾಗಿದೆ’ ಎಂದು ಪ್ರಕಟಿಸಿದರು. ‘ಉಸ್ತುವಾರಿ ಸಚಿವರು ಇಲ್ಲದಿರುವುದರಿಂದ ಅವರನ್ನು ನೇಮಿಸಲಾಗಿದೆ. ಜಿಲ್ಲೆಯ ಎಲ್ಲ ಶಾಸಕರು ಸದಸ್ಯರಾಗಿರುತ್ತಾರೆ. ಮಾರ್ಗಸೂಚಿ ಜಾರಿ, ಅಗತ್ಯ ಔಷಧೋಪಕರಣಗಳ ಪೂರೈಕೆಗೆ ಕ್ರಮ ಕೈಗೊಳ್ಳುವ ಕುರಿತು ಸಮಿತಿಯು ನಿರ್ಧರಿಸಲಿದೆ. ವಾರದಲ್ಲಿ ಒಮ್ಮೆ ಸಮಿತಿಯು ಸಭೆ ನಡೆಸಲಿದೆ’ ಎಂದು ವಿವರಿಸಿದರು.

ಪೂರೈಸಲು ಮನವಿ:

‘ನಿಪ್ಪಾಣಿ ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಸೌಲಭ್ಯ ಹೊಂದಿರುವ ಹಾಸಿಗೆಗಳ ಆಧಾರದ ಮೇಲೆ ಕೋವಿಡ್ ಸೋಂಕಿತರಿಗೆ ಚಿಕಿತ್ಸಾ ಸೌಲಭ್ಯ ಆರಂಭಿಸಬೇಕು’ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

‘ರೆಮ್‌ಡಿಸಿವಿರ್‌ಗೆ ಇರುವ ಪರ್ಯಾಯ ಔಷಧದ ಕುರಿತು ಜನರಿಗೆ ಮಾಹಿತಿ ನೀಡಬೇಕು’ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ತಿಳಿಸಿದರು.

ಶಾಸಕ ಅಭಯ ಪಾಟೀಲ, ‘ಜಿಲ್ಲೆಯಲ್ಲಿ ರೆಮ್‌ಡಿಸಿವಿರ್ ಕೊರತೆ‌ ಕಂಡುಬರುತ್ತಿದೆ. ತಕ್ಷಣವೇ ಸಮರ್ಪಕ ಪೂರೈಸಬೇಕು. ಹೆಚ್ಚಿನ ದರ ಪಡೆಯುತ್ತಿರುವ ಖಾಸಗಿ ಆಸ್ಪತ್ರೆಗಳ ಮೇಲೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಬಿಮ್ಸ್ ಅವ್ಯವಸ್ಥೆ ಸರಿಪಡಿಸಿ ಪ್ರತಿದಿನ ದಾಖಲಾಗುವ ರೋಗಿಗಳ ಸಂಖ್ಯೆ ಮತ್ತು ಲಭ್ಯವಿರುವ ಹಾಸಿಗೆಗಳ ಸಂಖ್ಯೆ‌ಯನ್ನು ಸಾರ್ವಜನಿಕರಿಗೆ ತಿಳಿಸಬೇಕು’ ಎಂದರು.

ಲಸಿಕೆ ಸಂಗ್ರಹಕ್ಕೆ ಸಲಹೆ:

‘ಕೋವಿಡ್ ಲಸಿಕೆ ಪಡೆಯಲು ಜನರು ಸ್ವಯಂಪ್ರೇರಣೆಯಿಂದ ಮುಂದೆ ಬರುತ್ತಿದ್ದಾರೆ. 18 ವರ್ಷ ಮೇಲ್ಪಟ್ಟವರಿಗೆ ಮೇ 1ರಿಂದ ಲಸಿಕೆ ನೀಡಲು ನಿರ್ಧರಿಸಿರುವುದರಿಂದ ಬೇಡಿಕೆ ಹೆಚ್ಚಾಗಬಹುದು. ಆದ್ದರಿಂದ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು’ ಎಂದು ಶಾಸಕ ಮಹಾಂತೇಶ ದೊಡಗೌಡರ ತಿಳಿಸಿದರು.

ಸಂಸದ ಅಣ್ಣಾಸಾಹೇಬ ಜೊಲ್ಲೆ, ‘ಚಿಕ್ಕೋಡಿಯಲ್ಲಿ ಮಾದರಿ ಪರೀಕ್ಷೆಗೆ ಪ್ರಯೋಗಾಲಯ ಆರಂಭಿಸಬೇಕು’ ಎಂದು ಒತ್ತಾಯಿಸಿದರು.

ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವ ಉಮೇಶ ಕತ್ತಿ, ನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್, ಜಿಲ್ಲಾ ಪಂಚಾಯ್ತು ಸಿಇಒ ಡಾ.ಎಚ್‌.ವಿ. ದರ್ಶನ್, ಎಸ್ಪಿ ಲಕ್ಷ್ಮಣ ನಿಂಬರಗಿ, ಹೆಚ್ಚವರಿ ಜಿಲ್ಲಾಧಿಕಾರಿ ಎಸ್. ಯೋಗೇಶ್ವರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು