ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿ ನಿಲಯದಿಂದ ರಾತ್ರೋರಾತ್ರಿ ತಹಶೀಲ್ದಾರ್‌ ಹೊರಕ್ಕೆ; ಶಾಸಕರ ವಿರುದ್ಧ ಆರೋಪ

Last Updated 22 ಜುಲೈ 2020, 7:29 IST
ಅಕ್ಷರ ಗಾತ್ರ

ಬೆಳಗಾವಿ: ಗಾಯರಾಣ ಜಮೀನು ತೆರವುಗೊಳಿಸಲು ಮುಂದಾಗಿದ್ದರೆನ್ನುವ ಕಾರಣಕ್ಕೆ ರಾಯಬಾಗದ ಹಿಂದಿನ ತಹಶೀಲ್ದಾರ್‌ ಚಂದ್ರಕಾಂತ ಭಜಂತ್ರಿ ಅವರನ್ನು ಸರ್ಕಾರಿ ವಸತಿ ನಿಲಯದಿಂದ ರಾತ್ರೋರಾತ್ರಿ ಖಾಲಿ ಮಾಡಿಸಿದ್ದಾರೆ ಎನ್ನುವ ಆರೋಪ ಶಾಸಕ ದುರ್ಯೋಧನ ಐಹೊಳೆ ವಿರುದ್ಧ ಕೇಳಿಬಂದಿದೆ.

ರಾಯಬಾಗ ತಾಲ್ಲೂಕಿನ ಕಂಕಣವಾಡಿಯ ಗಾಯರಾಣ ಜಮೀನನ್ನು ಹಲವರು ಅತಿಕ್ರಮಣ ಮಾಡಿಕೊಂಡಿದ್ದರು. ಇದನ್ನು ತೆರವುಗೊಳಿಸಲು ಭಜಂತ್ರಿ ಅವರು ಮುಂದಾಗಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಐಹೊಳೆ ಅವರು, ಭಜಂತ್ರಿ ಅವರ ವರ್ಗಾವಣೆಯನ್ನೂ ಮಾಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ತಮ್ಮ ವರ್ಗಾವಣೆಯ ವಿರುದ್ಧ ಭಜಂತ್ರಿ ಅವರು ಕಳೆದ ವಾರ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯ (ಕೆಎಟಿ) ಮೊರೆಹೋಗಿದ್ದು, ತೀರ್ಪು ಬರುವವರೆಗೆ ಸಮಾಜ ಕಲ್ಯಾಣ ಇಲಾಖೆಯ ರಾಣಿ ಚನ್ನಮ್ಮ ವಸತಿ ನಿಲಯದ ಪ್ರಾಂಶುಪಾಲರ ಕೊಠಡಿಯಲ್ಲಿ ವಾಸ್ತವ್ಯ ಮುಂದುವರಿಸಿದ್ದರು. ಅವರನ್ನು ಮಂಗಳವಾರ ರಾತ್ರಿ ಹೊರಹಾಕಲಾಗಿದೆ. ಬೇರೆಲ್ಲೂ ಹೋಗಲಾರದೆ ಬುಧವಾರ ಬೆಳಿಗ್ಗೆಯವರೆಗೂ ವಸತಿ ನಿಲಯದ ಆವರಣದಲ್ಲಿಯೇ ಸಮಯ ಕಳೆದರು.

‘ರಾಯಬಾಗಕ್ಕೆ ಬಂದು ಕೇವಲ 8 ತಿಂಗಳಾಗಿದೆ. ಅವಧಿಪೂರ್ವ ವರ್ಗಾವಣೆ ಮಾಡಿದ್ದನ್ನು ಪ್ರಶ್ನಿಸಿ ಕೆಎಟಿ ಮೊರೆ ಹೋಗಿದ್ದೇನೆ. ಅಲ್ಲಿಂದ ತೀರ್ಪು ಬರುವುದನ್ನು ಕಾಯುತ್ತಿದ್ದೇನೆ.ತಹಶೀಲ್ದಾರ್ ವಸತಿ ನಿಲಯವು ಹಾಳಾಗಿದ್ದರಿಂದ ಕಳೆದ 3 ತಿಂಗಳಿನಿಂದ ರಾಣಿ ಚನ್ನಮ್ಮ ವಸತಿ ನಿಲಯದಲ್ಲಿ ವಾಸ್ತವ್ಯ ಹೂಡಿದ್ದೆ. ಇಂತಹ ಪರಿಸ್ಥಿತಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳು ರಾತ್ರೋರಾತ್ರಿ ಕೊಠಡಿ ಖಾಲಿ ಮಾಡಿಸಿದ್ದಾರೆ. ಇದರ ಹಿಂದೆ ಶಾಸಕರ ಕೈವಾಡವಿದೆ’ ಎಂದು ಭಜಂತ್ರಿ ಆರೋಪಿಸಿದ್ದಾರೆ.

‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು, ‘ಪಟ್ಟಣದಲ್ಲಿ ಬೇರೊಂದು ಖಾಸಗಿಯವರ ಮನೆಯನ್ನು ಬಾಡಿಗೆಗೆ ಗೊತ್ತು ಮಾಡಿದ್ದೆ. ಮೊದಲು ಒಪ್ಪಿಕೊಂಡಿದ್ದ ಮಾಲೀಕರು, ಈಗ ಹಿಂದೆ ಸರಿದಿದ್ದಾರೆ. ನನಗೆ ಬಾಡಿಗೆ ಮನೆ ನೀಡದಂತೆ ಶಾಸಕರು ಊರಿನವರಿಗೆಲ್ಲ ಹೇಳಿದ್ದಾರೆ. ಈಗ ಸಾಮಾನುಗಳನ್ನು ತೆಗೆದುಕೊಂಡು ಎಲ್ಲಿಗೆ ಹೋಗಬೇಕು ಎನ್ನುವುದು ಗೊತ್ತಾಗುತ್ತಿಲ್ಲ. ಸರ್ಕಾರಿ ಆದೇಶ ಪಾಲನೆ ಮಾಡಲು ಪ್ರಯತ್ನಿಸಿದ್ದಕ್ಕೆ ಈ ಪರಿಯ ಶಿಕ್ಷೆಯೇ’ ಎಂದು ಪ್ರಶ್ನಿಸಿದ್ದಾರೆ.

‘ಇದೇ ಶಾಸಕರು ವಿಧಾನಸಭೆಯ ಅಧಿವೇಶನದಲ್ಲಿ ಗಾಯರಾಣ ಜಮೀನಿನ ಬಗ್ಗೆ ಪ್ರಶ್ನಿಸಿದ್ದರು. ತಕ್ಷಣ ತೆರವುಗೊಳಿಸಿ, ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಬೇಕೆಂದು ಒತ್ತಾಯಿಸಿದ್ದರು. ಅದರ ಪ್ರಕಾರ, ಪ್ರಾದೇಶಿಕ ಆಯುಕ್ತರು ಅತಿಕ್ರಮಣ ತೆರವುಗೊಳಿಸಲು ಆದೇಶಿಸಿದ್ದರು. ಅದರಂತೆ, ನಾನು ಅತಿಕ್ರಮಣ ಮಾಡಿಕೊಂಡವರಿಗೆ ನೋಟಿಸ್‌ ನೀಡಿದ್ದೆ. ಇನ್ನೇನು ತೆರವುಗೊಳಿಸಲು ಆರಂಭಿಸಬೇಕು ಎನ್ನುವಷ್ಟರಲ್ಲಿ ನನ್ನನ್ನು ವರ್ಗಾವಣೆ ಮಾಡಿಸಿದ್ದಾರೆ’ ಎಂದು ಅಳಲು ತೋಡಿಕೊಂಡರು.

ಸುಳ್ಳು ಆರೋಪ– ಐಹೊಳೆ:

‘ಭಜಂತ್ರಿ ಅವರು ಮಾಡಿರುವ ಆರೋಪಗಳೆಲ್ಲವೂ ಸುಳ್ಳು. ಕೋವಿಡ್‌–19 ನಿಯಂತ್ರಣದ ಹೆಸರಿನಲ್ಲಿ ಅವರು ಸಾಕಷ್ಟು ಹಣ ಲಪಟಾಯಿಸಿದ್ದಾರೆ. ಇದರ ಬಗ್ಗೆ ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ಸುಳ್ಳು ಆರೋಪ ಹೊರಿಸಿದ್ದಾರೆ. ಗಾಯರಾಣ ಜಮೀನಿಗೂ ನನಗೂ ಸಂಬಂಧವಿಲ್ಲ. ಸರ್ಕಾರಿ ಜಮೀನು ಸ್ವಾಧೀನ ಪಡಿಸಿಕೊಳ್ಳಲು ನಾನೇಕೆ ಅಡ್ಡಿಪಡಿಸಲಿ?’ ಎಂದು ಶಾಸಕ ದುರ್ಯೋಧನ ಐಹೊಳೆ ಪ್ರತಿಕ್ರಿಯೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT