ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸತೀಶ ಜಾರಕಿಹೊಳಿಯಿಂದ ಎಸ್‌.ಸಿ ನಾಯಕರ ನಿರ್ನಾಮ: ಶಾಸಕ ಮಹೇಂದ್ರ ಕಿಡಿ

Published 6 ಜೂನ್ 2024, 12:34 IST
Last Updated 6 ಜೂನ್ 2024, 12:34 IST
ಅಕ್ಷರ ಗಾತ್ರ

ಚಿಕ್ಕೋಡಿ: ‘ಸಚಿವ ಸತೀಶ ಜಾರಕಿಹೊಳಿ ಅವರು ಚಿಕ್ಕೋಡಿ ಭಾಗದ ಎಲ್ಲ ನಾಯಕರನ್ನು ತುಳಿಯುತ್ತಿದ್ದಾರೆ. ಮೇಲಾಗಿ, ನಮ್ಮ ಸಮುದಾಯದ ಮುಖಂಡರನ್ನು ನಿರ್ನಾಮ ಮಾಡುತ್ತಿದ್ದಾರೆ’ ಎಂದು ಕುಡಚಿಯ ಕಾಂಗ್ರೆಸ್‌ ಶಾಸಕ ಮಹೇಂದ್ರ ತಮ್ಮಣ್ಣವರ ಕಿಡಿ ಕಾರಿದರು.

‘ಲೋಕಸಭೆ ಚುನಾವಣೆಯಲ್ಲಿ ನಾನು ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಪರವಾಗಿ ಕೆಲಸ ಮಾಡಿಲ್ಲ ಎಂದು ಸತೀಶ ಆರೋಪಿಸಿದ್ದಾರೆ. ಈ ಬಗ್ಗೆ ಹೈಕಮಾಂಡ್‌ಗೆ ದೂರು ನೀಡುವುದಾಗಿಯೂ ಹೇಳಿದ್ದಾರೆ. ಇಂಥ ಯಾವುದೇ ದೂರಿಗೂ ನಾನು ದಾಖಲೆ ಸಮೇತ ಉತ್ತರ ಕೊಡಲು ಸಿದ್ಧನಿದ್ದೇನೆ’ ಎಂದು ಪಟ್ಟಣದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ನನ್ನ ಸೋದರಮಾವ ಶಂಭು ಕಲ್ಲೋಳಿಕರ ಚಿಕ್ಕೋಡಿ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಆಗಿ ನಿಂತಿದ್ದರು. ಅವರು 25 ಸಾವಿರ ಮತ ಪಡೆದಿದ್ದಾರೆ. ನನ್ನ ಕ್ಷೇತ್ರದಲ್ಲಿ ಕೇವಲ 3,000 ಮತಗಳು ಅವರಿಗೆ ಬಂದಿವೆ. ಆದರೆ, ಕಾಂಗ್ರೆಸ್‌ ಅಭ್ಯರ್ಥಿಗೆ ನಾನು 22 ಸಾವಿರ ಮತಗಳ ಮುನ್ನಡೆ ಕೊಡಿಸಿದ್ದೇನೆ. ಅಂದ ಮೇಲೆ ಪಕ್ಷಕ್ಕೆ ಮೋಸ ಹೇಗಾಗುತ್ತದೆ?’ ಎಂದೂ ಪ್ರಶ್ನಿಸಿದರು.

‘ಯಮಕನಮರಡಿ ವಿಧಾನಸಭೆ ಕ್ಷೇತ್ರದಲ್ಲಿ ಸಚಿವ ಸತೀಶ ಅವರು 50 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದಿದ್ದಾರೆ. ಈಗ ಅದೇ ಕ್ಷೇತ್ರದಲ್ಲಿ ಪುತ್ರಿಗೆ ಕೇವಲ 25 ಸಾವಿರ ಮತಗಳ ಮುನ್ನಡೆ ಕೊಡಿಸಿದ್ದಾರೆ. ಇದಕ್ಕೆ ಏನು ಕಾರಣ ಎಂದು ಸತೀಶ ಅವರು ಉತ್ತರ ಕೊಡಬೇಕು’ ಎಂದರು.

‘ಈ ಭಾಗದ ಪರಿಶಿಷ್ಟ ಜಾತಿ ಸಮುದಾಯದ ಎಲ್ಲ ನಾಯಕರನ್ನೂ ಜಾರಕಿಹೊಳಿ ಕುಟುಂಬದವರು ಮುಗಿಸುತ್ತಲೇ ಬಂದಿದ್ದಾರೆ. ಮಾಜಿ ಶಾಸಕ ಶ್ಯಾಮ ಘಾಟಗೆ, ಮಹಾವೀರ ಮೊಹಿತೆ, ಪ್ರದೀಪ ಮಾಳಗಿ ಅವರೆಲ್ಲ ಮನೆಯಲ್ಲಿ ಕುಳಿತುಕೊಳ್ಳುವಂತೆ ಮಾಡಿದ್ದು ಇದೇ ಕುಟುಂಬ. ಈಗ ಶಂಭು ಕಲ್ಲೋಳಿಕರ ಅವರನ್ನೂ ಮುಗಿಸಿದ್ದಾರೆ. ಕೊನೆಗೆ ಉಳಿದಿದ್ದು ನಾನೊಬ್ಬನೇ. ಹೀಗಾಗಿ, ನನ್ನ ಬೆನ್ನಿಗೆ ಬಿದ್ದಿದ್ದಾರೆ. ಅವರಿಗೆ ಪರಿಶಿಷ್ಟ ಜಾತಿ ಸಮುದಾಯದ ಏಳಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ’ ಎಂದು ಕಿಡಿ ಕಾರಿದರು.

‘ಬುದ್ಧ, ಬಸವ, ಅಂಬೇಡ್ಕರ್ ತತ್ವಗಳನ್ನು ನಾನು ಪಾಲಿಸುತ್ತೇನೆ‌. ನಮಗೆ ಬೆಲೆ ಇಲ್ಲದ ಜಾಗದಲ್ಲಿ ಇರಲು ನಾನು ಇಷ್ಟಪಡುವುದಿಲ್ಲ’ ಎಂದೂ ಅವರು ‍ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT