ಗುರುವಾರ , ಮಾರ್ಚ್ 4, 2021
18 °C

ಪಪ್ಪಾಯಿ: ಉತ್ತಮ ಲಾಭ ಕಂಡ ಕೃಷಿಕ ಅಶೋಕ

ಪರಶುರಾಮ ನಂದೇಶ್ವರ Updated:

ಅಕ್ಷರ ಗಾತ್ರ : | |

Deccan Herald

ಅಥಣಿ: ಬರಗಾಲದ ನಡುವೆಯೂ, ಕಡಿಮೆ ಪ್ರಮಾಣದ ನೀರು ಬಳಸಿಕೊಂಡು ಪಪ್ಪಾಯಿ ಬೆಳೆದ ತಾಲ್ಲೂಕಿನ ಅರಟಾಳ ಗ್ರಾಮದ ಕೃಷಿಕ ಅಶೋಕ ದೊಂಡಿಬಾ ಸಾಳುಂಕೆ ಸಿಹಿ–ಖುಷಿ ಎರಡನ್ನೂ ಕಂಡಿದ್ದಾರೆ. ಉತ್ತಮ ವರಮಾನವನ್ನೂ ನೋಡಿದ್ದಾರೆ.

ಈ ಬೆಳೆ ಅವರ ಪಾಲಿಗೆ ಬಂಗಾರದ ಬೆಳೆಯಾಗಿ, ವರವಾಗಿ ಪರಿಣಮಿಸಿದೆ. ಲಾಭವನ್ನೂ ತಂದುಕೊಟ್ಟಿದೆ.

ತಾಲ್ಲೂಕಿನ ಪೂರ್ವ ಭಾಗದ ಐಗಳಿ, ತೆಲಸಂಗ, ಅರಟಾಳ ಮೊದಲಾದ ಗ್ರಾಮಗಳಿಗೆ ಸರಿಯಾದ ನೀರಿನ ವ್ಯವಸ್ಥೆ ಇಲ್ಲ. ಆದರೂ ಇವರು, ಕಡಿಮೆ ನೀರಿನಲ್ಲಿ ಬೇಸಾಯ ಮಾಡಿ ಗಮನಸೆಳೆದಿದ್ದಾರೆ. ಅಲ್ಪ ನೀರು, ಕಡಿಮೆ ಸಮಯ ಹಾಗೂ ವೆಚ್ಚದಲ್ಲಿ ಹೆಚ್ಚಿನ ಲಾಭ ಪಡೆದು, ಇತರ ರೈತರಿಗೆ ಮಾದರಿಯೂ ಆಗಿದ್ದಾರೆ. ಹೊಲದಲ್ಲೇ ಮನೆ ಕಟ್ಟಿಕೊಂಡು ವಾಸವಿರುವ ಅವರು, ಕೃಷಿಯೇ ಜೀವನ ಎಂದು ನಂಬಿದವರು. ಪದವೀಧರರಾದರೂ ವ್ಯವಸಾಯದಿಂದ ವಿಮುಖರಾಗಿಲ್ಲ. 4 ಎಕರೆ ಜಮೀನಿನಲ್ಲಿ 5500 ಪಪ್ಪಾಯಿ ಸಸಿಗಳನ್ನು ನೆಟ್ಟಿದ್ದಾರೆ.

ಶ್ರಮಪಟ್ಟಿದ್ದಕ್ಕೆ: ‘ಟನ್‌ಗೆ ₹ 18ಸಾವಿರ ದೊರೆತಿದೆ. ಒಂದು ಹಣ್ಣು ಕನಿಷ್ಠ 2 ಕೆ.ಜಿ. ತೂಗುತ್ತದೆ. ಪ್ರತಿ ಗಿಡದಲ್ಲಿ 70 ಕಾಯಿಗಳವರೆಗೆ ಸಿಗುತ್ತದೆ. ಪ್ರತಿ ವಾರಕ್ಕೆ 10ರಿಂದ 12 ಟನ್‌ವರೆಗೆ ಹಣ್ಣುಗಳನ್ನು ಮುಂಬೈ  ಮಾರುಕಟ್ಟೆಗೆ ಕಳುಹಿಸುತ್ತೇನೆ. ಇದುವರೆಗೆ 150 ಟನ್‌ನಷ್ಟು ಹಣ್ಣನ್ನು ಮಾರುಕಟ್ಟೆಗೆ ಕಳುಹಿಸಿದ್ದೇನೆ. ಇನ್ನೂ 300 ಟನ್‌ನಷ್ಟು ಹಣ್ಣು ದೊರೆಯುವ ನಿರೀಕ್ಷೆ ಇದೆ’ ಎಂದು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಸುಮಾರು 15 ತಿಂಗಳ ಬೆಳೆ ಇದಾಗಿದೆ. 8 ತಿಂಗಳ ನಂತರ ಹಣ್ಣು ಕೊಡಲು ಪ್ರಾರಂಭಿಸುತ್ತದೆ. ನಂತರ ಸತತವಾಗಿ ಏಳು ತಿಂಗಳವರೆಗೂ ಹಣ್ಣು ನೀಡುತ್ತದೆ’ ಎಂದು ತಿಳಿಸಿದರು.

ನೀರಿನ ಮೂಲ: 5500 ಸಸಿಗಳಿಗೆ ಒಂದು ಬಾವಿಯ ನೀರು ಸಾಲುತ್ತಿಲ್ಲ. ಹೀಗಾಗಿ, ಇತ್ತೀಚೆಗೆ ಕೊಳವೆಬಾವಿ ಕೊರೆಸಿದ್ದೇನೆ. ಕೊಂಚ ನೀರು ದೊರೆಯುತ್ತಿದೆ. ಹನಿ ನೀರಾವರಿ ವ್ಯವಸ್ಥೆ ಮಾಡಿರುವುದರಿಂದ ನೀರು ಉಳಿತಾಯವೂ ಆಗುತ್ತಿದೆ. ಕೊರತೆಯ ಪ್ರಶ್ನೆಯೂ ಇಲ್ಲದಾಂತಾಗಿದೆ. ಕಡಿಮೆ ನೀರಿನಲ್ಲಿ ಹೆಚ್ಚು ಲಾಭವೂ ಬರುತ್ತದೆ. ಹನಿ ನೀರಾವರಿ ಅಳವಡಿಕೆಯಿಂದಾಗಿ, ಸಸಿಗಳಿಗೆ ರೋಗ ಬರುತ್ತದೆ ಎನ್ನುವ ಭಯವೂ ಇರುವುದಿಲ್ಲ’ ಎಂದು ತಮ್ಮ ಅನುಭವ ಹಂಚಿಕೊಂಡರು.

ಮಿಶ್ರ ಬೆಳೆ: ಪಪ್ಪಾಯಿ ಗಿಡಗಳ ನಡುವೆ 6 ಅಡಿ ಉದ್ದ ಹಾಗೂ 7 ಅಡಿ ಅಗಲ ಅಂತರವಿದೆ. ಈ ಜಾಗದಲ್ಲಿ ಮಿಶ್ರ ಬೆಳೆಯನ್ನೂ ಅವರು ಬೆಳೆಯುತ್ತಿದ್ದಾರೆ. 20 ಟನ್‌ ಈರುಳ್ಳಿ, 3 ಕ್ವಿಂಟಲ್ ಹೂಕೋಸು, 4 ಕ್ವಿಂಟಲ್‌ವರೆಗೆ ಕ್ಯಾಬೇಜ್‌ ಬೆಳೆದಿದ್ದಾರೆ. ಇದರಿಂದಲೂ ಒಂದಷ್ಟು ಆರ್ಥಿಕ ಶಕ್ತಿ ಅವರಿಗೆ ಬಂದಿದೆ.

‘ನಿಜವಾಗಿಯೂ ಪಪ್ಪಾಯಿ ಹಣ್ಣು ಲಾಭ ತಂದುಕೊಟ್ಟಿದೆ. ಮಿಶ್ರ ಬೇಸಾಯ ಮಾಡಿದ್ದು ಕೂಡ ಅನುಕೂಲವಾಗಿದೆ. ಎಲ್ಲ ಬೆಳೆಗಳಿಂದಲೂ ಆದಾಯ ಬಂದಿದೆ. ಕಬ್ಬು, ದ್ರಾಕ್ಷಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬೇಕಾಗುತ್ತದೆ. ಆದರೆ, ಪಪ್ಪಾಯಿಗೆ ಹೆಚ್ಚಿನ ನೀರು ಬೇಕಾಗುವುದಿಲ್ಲ ಎನ್ನುವುದು ನನ್ನ ಅನುಭವ. ಹಲವು ಮಂದಿ ತೋಟಕ್ಕೆ ಬಂದು ವೀಕ್ಷಿಸುತ್ತಿದ್ದಾರೆ. ಸಲಹೆ ಪಡೆಯುತ್ತಿದ್ದಾರೆ. ನನಗೆ ತಿಳಿದಿದ್ದನ್ನು ಅವರಿಗೆ ಹೇಳುತ್ತಿದ್ದೇನೆ. ಯೋಜಿತ ಕೃಷಿಯಿಂದ ಹೆಚ್ಚಿನ ಪ್ರಯೋಜನಗಳಿವೆ’ ಎನ್ನುತ್ತಾರೆ ಅವರು.

ಅಶೋಕ ದೊಂಡಿಬಾ ಸಾಳುಂಕೆ​ ಅವರ ಸಂಪರ್ಕಕ್ಕೆ: 95359 48186.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು