ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕಿ ಪಾವತಿಸದ ಸಕ್ಕರೆ ಕಾರ್ಖಾನೆ ಬಂದ್‌ ಮಾಡಿಸಿ: ಡಿಸಿಗೆ ರೈತರು ಮನವಿ

Last Updated 14 ನವೆಂಬರ್ 2018, 11:16 IST
ಅಕ್ಷರ ಗಾತ್ರ

ಬೆಳಗಾವಿ: ‘ಕಳೆದ ಹಂಗಾಮಿನ ಬಾಕಿ ಪಾವತಿಸದ ಹಾಗೂ ಪ್ರಕಟಿಸಿದ ಪ್ರಕಾರ ವ್ಯತ್ಯಾಸದ ಹಣ ನೀಡದ ಸಕ್ಕರೆ ಕಾರ್ಖಾನೆಗಳನ್ನು ಬಂದ್‌ ಮಾಡಿಸಬೇಕು’ ಎಂಬ ಬೇಡಿಕೆ ಕುರಿತು ಪ್ರತಿಕ್ರಿಯಿಸದ ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ ಅವರನ್ನು ರೈತ ಮುಖಂಡರು ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಬುಧವಾರ ನಡೆದ ಸಭೆಯಲ್ಲಿ ಸಕ್ಕರೆ ಕಾರ್ಖಾನೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮುಖಂಡರು, ‘ನಮಗೆ ನ್ಯಾಯ ಕೊಡಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಹಲವು ಸಭೆಗಳನ್ನು ನಡೆಸಲಾಗಿದೆಯಾದರೂ ಕಾರ್ಖಾನೆಗಳವರು ಬಾಕಿ ಪಾವತಿಸಿಲ್ಲ. ಇದರಿಂದ ಕೆಲವು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಆರೋಪಿಸಿದರು.

‘ಬಾಕಿ ಪಾವತಿಯೊಂದಿಗೆ, ಈ ಹಂಗಾಮಿನಲ್ಲಿ ಟನ್‌ಗೆ ಕನಿಷ್ಠ ₹ 2,900 ದರ ನಿಗದಿಪಡಿಸಬೇಕು. ಇದಕ್ಕೆ ಸಕ್ಕರೆ ಕಾರ್ಖಾನೆಗಳವರನ್ನು ಒಪ್ಪಿಸಬೇಕು. ಇಲ್ಲದಿದ್ದಲ್ಲಿ, ಹೋರಾಟ ತೀವ್ರಗೊಳಿಸಬೇಕಾಗುತ್ತದೆ. ಆಗ ಆಗುವ ಅನಾಹುತಗಳಿಗೆ ಜಿಲ್ಲಾಡಳಿತವೇ ಹೊಣೆ ಆಗಬೇಕಾಗುತ್ತದೆ. ಪೊಲೀಸ್‌ ಬಲ ಬಳಸಿ ಹೋರಾಟ ಹತ್ತಿಕ್ಕಲು ಮುಂದಾದರೆ, ಪರಿಸ್ಥಿತಿ ಬೇರೆಯಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಮಹಾರಾಷ್ಟ್ರ ಮಾದರಿ ಅನುಸರಿಸಿ:ರೈತ ಮುಖಂಡ ರವಿ ಸಿದ್ದಪ್ಪ ಗಾಣಿಗೇರ ಮಾತನಾಡಿ, ‘ಎಫ್ಆರ್‌ಪಿ ದರ ಎನ್ನದೇ ಮಹಾರಾಷ್ಟ್ರ ಮಾದರಿಯಲ್ಲಿ ದರ ನಿಗದಿಪಡಿಸಬೇಕು. ಅಲ್ಲಿನ ಕಾರ್ಖಾನೆಗಳು ಟನ್‌ಗೆ ₹ 3ಸಾವಿರ ಮೇಲ್ಪಟ್ಟು ದರ ನೀಡುತ್ತಿವೆ. ಇಲ್ಲೇಕೆ ಆಗುವುದಿಲ್ಲ?’ ಎಂದು ಕೇಳಿದರು.

ಮುಖಂಡ ಶಶಿಕಾಂತ ಜೋಶಿ ಮಾತನಾಡಿ, ‘ಜಿಲ್ಲೆಯ ಕಾರ್ಖಾನೆಗಳು ತಾವೇ ನಿಗದಿಪಡಿಸಿದ ದರ ನೀಡದೇ ಹಾಗೂ ಸಕಾಲಕ್ಕೆ ಪೂರ್ಣ ಪ್ರಮಾಣದ ಬಿಲ್ ಪಾವತಿಸದೇ ಒಟ್ಟಾರೆ ₹ 154 ಕೋಟಿ ಬಾಕಿ ಉಳಿಸಿಕೊಂಡಿವೆ’ ಎಂದು ತಿಳಿಸಿದರು.

‘ಕಬ್ಬು ನುರಿಸಿದ 14 ದಿನಗಳಲ್ಲಿ ಬಿಲ್ ಪಾವತಿಸಬೇಕು ಎಂಬ ಆದೇಶವಿದೆ. ಆದರೆ, 6–7 ತಿಂಗಳಾದರೂ ಕಾರ್ಖಾನೆಗಳು ಬಿಲ್ ಪಾವತಿಸಿಲ್ಲ. ಮನಬಂದಂತೆ ದರ ನಿಗದಿಪಡಿಸುವ ಕಾರ್ಖಾನೆಗಳು, ಕಬ್ಬು ಪೂರೈಕೆ ಕಡಿಮೆಯಾಗುತ್ತಿದ್ದಂತೆಯೇ ದರ ಇಳಿಸಿ ರೈತರನ್ನು ಗೊಂದಲಕ್ಕೀಡು ಮಾಡುತ್ತವೆ. ಇದರ ಬದಲು ಎಲ್ಲರಿಗೂ ಒಂದೇ ರೀತಿ ಬಿಲ್ ಪಾವತಿಸಬೇಕು’ ಎಂದು ಒತ್ತಾಯಿಸಿದರು.

ಲಾಬಿಗೆ ಮಣಿಯುತ್ತಿದ್ದೀರಿ:ಮುಖಂಡ ಸಂಜಯ ನಾಡಗೌಡ ಮಾತನಾಡಿ, ‘ಸಕ್ಕರೆ ಕಾರ್ಖಾನೆಗಳು ಉಪ ಉತ್ಪನ್ನಗಳ ಲಾಭದ ಬಗ್ಗೆ ಮಾತನಾಡುವುದಿಲ್ಲ. ಗುಜರಾತ್‌ನಲ್ಲಿ ಟನ್‌ಗೆ ₹ 4700, ಮಹಾರಾಷ್ಟ್ರದಲ್ಲಿ ಕನಿಷ್ಠ ₹ 2800 ಕೊಡಲಾಗಿದೆ. ಉಪ ಉತ್ಪಾದನೆಯ ಶೇ. 30ರಷ್ಟನ್ನು ರೈತರಿಗೆ ನೀಡಬೇಕು’ ಎಂದು ಆಗ್ರಹಿಸಿದರು.

ರೈತ ಬಸವರಾಜ ನಾಗಠಾಣ ಮಾತನಾಡಿ, ‘2017-18 ನೇ ಸಾಲಿನಲ್ಲಿ ಹಿರಣ್ಯಕೇಶಿ ಮತ್ತು ವಿಶ್ವರಾಜ್ ಕಾರ್ಖಾನೆಗಳವರು ₹3ಸಾವಿರ ನಿಗದಿಪಡಿಸಿದ್ದರು. ಆರಂಭದಲ್ಲಿ ಅಷ್ಟನ್ನೇ ಪಾವತಿಸಿ, ನಂತರ ₹ 2,500 ಕೊಟ್ಟಿದ್ದಾರೆ. ಬಾಕಿಯನ್ನೂ ಕೊಟ್ಟಿಲ್ಲ’ ಎಂದು ಆರೋಪಿಸಿದರು.

ರೈತ ಸಂಘದ ಜಯಶ್ರೀ ಗುರಣ್ಣವರ ಮಾತನಾಡಿ, ‘ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಒಡೆತನದ ಸೌಭಾಗ್ಯಲಕ್ಷ್ಮಿ ಸಕ್ಕರೆ ಕಾರ್ಖಾನೆಯವರು ಬಾಕಿ ಉಳಿಸಿಕೊಂಡಿದ್ದಾರೆ. ಪ್ರತಿ ಬಾರಿ ಸಭೆಯಲ್ಲೂ ದಾಖಲಾತಿ ಕೊಡಿ ಎಂದು ಹೇಳುತ್ತೀರಿ. ಎಷ್ಟು ಬಾಕಿ ದಾಖಲೆ ತಂದುಕೊಡುವುದು? ಸಕ್ಕರೆ ಕಾರ್ಖಾನೆಗಳವರ ಲಾಬಿಗೆ ಅಧಿಕಾರಿಗಳು ಮಣಿಯುತ್ತಿದ್ದೀರಿ. ಹೀಗಾಗಿ, ಜಿಲ್ಲಾಡಳಿತ ವಿರುದ್ಧವೂ ಪ್ರಕರಣ ದಾಖಲಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಕಟ್ಟುನಿಟ್ಟಿನ ಸೂಚನೆ: ಜಿಲ್ಲಾಧಿಕಾರಿ ಮಾತನಾಡಿ, ‘ಬಾಕಿ, ವ್ಯತ್ಯಾಸದ ಹಣ ಪಾವತಿಸುವಂತೆ ಸಕ್ಕರೆ ಕಾರ್ಖಾನೆಗಳ ವ್ಯವಸ್ಥಾಪಕ ನಿರ್ದೇಶಕರಿಗೆ ನಿರ್ದೇಶನ ನೀಡಲಾಗುವುದು. ಸರ್ಕಾರ ಈಗಾಗಲೇ ಎಫ್‌ಆರ್‌ಪಿ (ಇಳುವರಿ ಆಧರಿಸಿ) ಘೋಷಿಸಿದೆ. ಆ ಪ್ರಕಾರ ದರ ಕೊಡುವುದು ಕಡ್ಡಾಯ. ಇದರಲ್ಲಿ ರಾಜಿ ಇಲ್ಲ. ಕಡಿಮೆ ಕೊಟ್ಟಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು. ಈ ಸಂಬಂಧ ಲಿಖಿತವಾಗಿಯೂ ಕಾರ್ಖಾನೆಗಳಿಗೆ ನಿರ್ದೇಶನ ನೀಡಲಾಗಿದೆ. ಕಬ್ಬು ಪೂರೈಸಿದ 14 ದಿನಗಳಲ್ಲಿ, ಒಂದೇ ಕಂತಿನಲ್ಲಿ ಬಿಲ್‌ ಕೊಡುವಂತೆಯೂ ತಿಳಿಸಲಾಗಿದೆ’ ಎಂದು ಪ್ರತಿಕ್ರಿಯಿಸಿದರು.

‘ಮಹಾರಾಷ್ಟ್ರ ಹಾಗೂ ಗುಜರಾತ್ ಮಾದರಿ ದರ ನೀಡಬೇಕು ಎನ್ನುವ ಬೇಡಿಕೆ ಕುರಿತು ಸರ್ಕಾರಕ್ಕೆ ಪತ್ರಬರೆಯಲಾಗುವುದು. ಸೌಭಾಗ್ಯಲಕ್ಷ್ಮಿ ಸಕ್ಕರೆ ಕಾರ್ಖಾನೆಯವರು ಬಾಕಿ ಉಳಿಸಿಕೊಂಡಿದ್ದರೆ ಪರಿಶೀಲಿಸಲಾಗುವುದು. ಕೊಡಿಸಲು ಕ್ರಮ ಕೈಗೊಳ್ಳಲಾಗುವುದು. ರೈತರ ಹಿತಾಸಕ್ತಿ ಕಾಪಾಡಲು ಬದ್ಧವಾಗಿದ್ದೇವೆ’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT