ಶನಿವಾರ, ಸೆಪ್ಟೆಂಬರ್ 18, 2021
30 °C

ಗೋಕಾಕ: ಪರಿಹಾರಕ್ಕಾಗಿ ತಹಶೀಲ್ದಾರ್‌ಗೆ ರೈತ ಮುಖಂಡರ ಘೇರಾವ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೋಕಾಕ (ಬೆಳಗಾವಿ): ‘ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘದ ಕಾರ್ಯದರ್ಶಿ ಭೀಮಶಿ ಗದಾಡಿ ಅವರ ನೇತೃತ್ವದಲ್ಲಿ ರೈತ ಮುಖಂಡರು ತಹಶೀಲ್ದಾರ್‌ ಪ್ರಕಾಶ ಹೊಳೆಪ್ಪಗೋಳ ಅವರಿಗೆ ಕಾರ್ಯಾಲಯದಲ್ಲಿ ಘೇರಾವ್ ಹಾಕಿದರು.

‘2019ರಲ್ಲಿ ಪ್ರವಾಹ ಹಾಗೂ ಮಳೆಯಿಂದ ಹಾನಿಯಾದ ಮನೆಗಳಿಗೆ ಈವರೆಗೂ ಪರಿಹಾರ ದೊರೆತಿಲ್ಲ. ಸಮೀಕ್ಷೆಯಲ್ಲಿ ಅಧಿಕಾರಿಗಳು ತಾರತಮ್ಯ ಮಾಡಿದ್ದಾರೆ’ ಎಂದು ಆರೋಪಿಸಿದರು.

ನಂತರ ಸಭೆಯಲ್ಲಿ ಮಾತನಾಡಿದ ತಹಶೀಲ್ದಾರ್‌, ‘ತಾಲ್ಲೂಕಿನ ಕಲಾರಕೊಪ್ಪ, ಮೆಳವಂಕಿ ಗ್ರಾಮಗಳಲ್ಲಿ ಮೂರು ಬಾರಿ ಸಮೀಕ್ಷೆ ನಡೆದಿದೆ. ಎಲ್ಲರಿಗೂ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗಿದ್ದರೂ ಕಾರ್ಯದ ಒತ್ತಡದಲ್ಲಿ ಕೆಲವೊಂದು ಕಡೆಗಳಲ್ಲಿ ಸಮೀಕ್ಷೆ ಪೂರ್ಣಗೊಳ್ಳದೆ ಉಳಿದಿರಬಹುದು. ಅಂತಹ ಪ್ರಕರಣಗಳನ್ನು ಗುರುತಿಸಿ ಕೂಡಲೇ ಕ್ರಮ ಜರುಗಿಸಲಾಗುವುದು’ ಎಂದು ಸಮಜಾಯಿಷಿ ನೀಡಿದರು.

‘ಆಧಾರ್‌ ಕಾರ್ಡ್‌ ತಿದ್ದುಪಡಿಗಾಗಿ 8 ತಿಂಗಳಿಂದ ನಿಮ್ಮ ಕಾರ್ಯಾಲಯಕ್ಕೆ ಅಲೆದಾಡುತ್ತಿದ್ದೇವೆ. ಆಧಾರ್‌ ಕೇಂದ್ರ ಬಂದಾಗಿದೆ. ನಾವೇನು ಮಾಡಬೇಕು?’ ಎಂದು ಮಹಿಳೆಯೊಬ್ಬರು ಕೇಳಿದರು. ‘ತಾಂತ್ರಿಕ ತೊಂದರೆಯಿಂದ ಫೆಬ್ರುವರಿಯಿಂದ ಆಧಾರ್‌ ಕೇಂದ್ರ ಸ್ಥಗಿತಗೊಂಡಿದ್ದು ಮೂರು ದಿನಗಳಲ್ಲಿ ಪುನರಾರಂಭಿಸಲಾಗುವುದು’ ಎಂದು ತಹಶೀಲ್ದಾರ್‌ ತಿಳಿಸಿದರು.

‘ನೆರೆಯಿಂದ ಹಾನಿಗೀಡಾಗಿರುವ ಬೆಳೆಗಳ ಜಂಟಿ ಸಮೀಕ್ಷೆಯನ್ನು ಇನ್ನೆರಡು ದಿನದಲ್ಲಿ ಆರಂಭಿಸಲಾಗುವುದು’ ಎಂದರು.

ರಾಜ್ಯ ರೈತ ಸಂಘದ ತಾಲ್ಲೂಕು ಘಟಕ ಅಧ್ಯಕ್ಷ ಮುತ್ತೆಪ್ಪ ಬಾಗನ್ನವರ, ಮುಖಂಡರಾದ ಶಂಕರ ಮದಿಹಳ್ಳಿ, ರಾಯಪ್ಪ ಗೌಡಪ್ಪನವರ, ಕುಮಾರ ತಿಗಡಿ, ಶಿವಪ್ಪ ಹೊಸಮನಿ, ಲಕ್ಷ್ಮಣ ಹಳ್ಳೂರ, ಮುದಕಪ್ಪ ಬನಾಜ, ಶಂಕರ ಕಣವಿ, ಪ್ರವೀಣ ಚಂಡುಗೋಳ, ಯಮನಪ್ಪ ಉಪ್ಪಾರ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.