ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಆರ್‌ಪಿ ದರ ನೀಡುವುದು ಕಡ್ಡಾಯ: ಡಿ.ಸಿ

ಜಿಲ್ಲೆಯ ಸಕ್ಕರೆ ಕರ್ಖಾನೆಗಳು, ಅಧಿಕಾರಿಗಳು, ರೈತರ ಸಭೆಯಲ್ಲಿ ನಿತೇಶ್‌ ಪಾಟೀಲ ತಾಕೀತು
Last Updated 7 ಅಕ್ಟೋಬರ್ 2022, 16:07 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯ ಯಾವುದೇ ಸಕ್ಕರೆ ಕಾರ್ಖಾನೆ ಸರ್ಕಾರದ ನಿಯಮಗಳನ್ನು ಅಲ್ಲಗಳೆಯುವಂತಿಲ್ಲ. ಕಬ್ಬು ಸಾಗಿಸುವ ರೈತರಿಗೆ ನ್ಯಾಯೋಚಿತ ಹಾಗೂ ಲಾಭದಾಯಕ (ಎಫ್‌ಆರ್‌ಪಿ) ದರ ನೀಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ತಾಕೀತು ಮಾಡಿದರು.

ನಗರದಲ್ಲಿ ಶುಕ್ರವಾರ ನಡೆದ ಜಿಲ್ಲೆಯ ವಿವಿಧ ಸಕ್ಕರೆ ಕಾರ್ಖಾನೆಗಳ ಅಧಿಕಾರಿಗಳು, ಇಲಾಖೆಯ ಅಧಿಕಾರಿಗಳು ಹಾಗೂ ರೈತರ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

‘ಕಾರ್ಖಾನೆಗಳಲ್ಲಿ ರೈತರಿಗೆ ಮೋಸ ಆಗದಂತೆ ನಿರ್ದೇಶನ ನೀಡಲಾಗುವುದು. ಆಡಿಟ್ ವರದಿಯಲ್ಲಿ ಯಾವುದೇ ಅವ್ಯವಹಾರ ಪತ್ತೆಯಾದಲ್ಲಿ, ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ರೈತರಿಗೆ ಪಾವತಿಸಬೇಕಾದ ಕಬ್ಬಿನ ಬಾಕಿ ಬಿಲ್ ತಕ್ಷಣ ಪಾವತಿಸಲು ಸೂಚಿಸಲಾಗುವುದು’ ಎಂದರು.

ಈ ಸಂದರ್ಭ ಮಾತನಾಡಿದ ರೈತ ಮುಖಂಡ ಚೂನಪ್ಪ ಪೂಜಾರಿ, ಜಿಲ್ಲಾಧಿಕಾರಿ ಕರೆದ ಸಭೆಗೆ ಕಾರ್ಖಾನೆಯವರು ಹಾಜರಾಗಿಲ್ಲ. ಜಿಲ್ಲೆಯಲ್ಲಿ 29 ಸಕ್ಕರೆ ಕಾರ್ಖಾನೆಗಳಿವೆ. ಆದರೆ, ಬೆರಳೆಣಿಕೆಯಷ್ಟು ಜನ ಮಾತ್ರ ಬಂದಿದ್ದಾರೆ. ಇವರಿಗೆ ಇನ್ಯಾರು ಆದೇಶ ಮಾಡಬೇಕು?’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಸಭೆಯಲ್ಲಿ ಭಾಗವಹಿಸದ ಕಾರ್ಖಾನೆಗಳವರಿಗೆ ನೋಟಿಸ್ ಜಾರಿ ಮಾಡಲಾಗುವುದು. ಮುಂದಿನ ಸಭೆಯಲ್ಲಿ ಕಡ್ಡಾಯವಾಗಿ ಹಾಜರಾಗುವಂತೆ ಸೂಚಿಸಲಾಗುವುದು’ ಎಂದರು.

‘ಬಹಳಷ್ಟು ಕಾರ್ಖಾನೆಗಳಲ್ಲಿ ಎಫ್‌ಆರ್‌ಪಿ ದರ ನೀಡುತ್ತಿಲ್ಲ. ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ರೈತರನ್ನು ಮೋಸ ಮಾಡಲಾಗುತ್ತಿದೆ. ಇಂಥವರ ಮೇಲೆ ಸಕ್ಕರೆ ಆಯುಕ್ತರು ಕಠಿಣ ಕ್ರಮ ಜರುಗಿಸಬೇಕು’ ಎಂದು ಮುಖಂಡರು ಆಗ್ರಹಿಸಿದರು.

ಮಾಹಿತಿ ಅಳವಡಿಸಿ: ರೈತರ ಬಿಲ್‌ನಲ್ಲಿ ಸಾಗಣೆ ವೆಚ್ಚ ಕಡಿತ ಮಾಡುವ ಕಾರ್ಖಾನೆಗಳು ಅದರ ವಿವರಗಳನ್ನು ಕಾರ್ಖಾನೆಗಳ ನೋಟಿಸ್ ಬೋರ್ಡ್‌ನಲ್ಲಿ ಅಳವಡಿಸಬೇಕು. ಇಲ್ಲದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದೂ ನಿತೇಶ್ ಪಾಟೀಲ ಎಚ್ಚರಿಕೆ ನೀಡಿದರು.

ಸೆಪ್ಟೆಂಬರ್ 21ರಂದು ನಾಲ್ಕು ಕಾರ್ಖಾನೆಗಳು ಹಂಗಾಮು ಆರಂಭಿಸಿವೆ. ರೈತರ ಕಬ್ಬಿನ ಬಿಲ್‌ನಲ್ಲಿ ಕಡಿತ ಮಾಡುವ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಈ ರೀತಿಯಲ್ಲಿ ಬೇಕಾಬಿಟ್ಟಿ ಮುಂದುವರಿಯಬಾರದು. ಕಾರ್ಖಾನೆ ಪ್ರಾರಂಭಿಸುವ ಮುನ್ನ ಸಕ್ಕರೆ ಆಯುಕ್ತರ ಅನುಮತಿ ಪಡೆಯಬೇಕು ಹಾಗೂ ಜಿಲ್ಲಾಡಳಿತಕ್ಕೂ ಮಾಹಿತಿ ನೀಡಬೇಕು ಎಂದು ಸೂಚಿಸಿದರು.

ಸಕ್ಕರೆ ಆಯುಕ್ತ ಶಿವಾನಂದ, ಎಸ್ಪಿ ಡಾ.ಸಂಜೀವ ಪಾಟೀಲ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್‌.ವಿ.ದರ್ಶನ್, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ಲೀಡ್ ಬ್ಯಾಂಕ್ ಮ್ಯಾನೇಜರ್ ಸುಚಿಂದ್ರ ಕುಲಕರ್ಣಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

*

‘ಟನ್‌ ಕಬ್ಬಿಗೆ ₹ 5,000 ನೀಡಿ’

ಕಳೆದ 10 ವರ್ಷಗಳಿಂದ ರೈತರಿಗೆ ಟನ್‌ ಕಬ್ಬಿಗೆ ₹ 2500 ದರ ನೀಡಲಾಗುತ್ತಿದೆ. ದಶಕದ ನಂತರವೂ ಅದೇ ದರವಿದೆ. ಈಗ ಪೆಟ್ರೋಲ್, ಡೀಸೆಲ್, ಟ್ರ್ಯಾಕ್ಟರ್, ಟ್ರಕ್ ಬಾಡಿಗೆ ಸೇರಿದಂತೆ ಗೃಹೋಪಯೋಗಿ ವಸ್ತುಗಳನ್ನು ಬೆಲೆ ಕೂಡ ಏರಿಕೆಯಾಗಿದೆ. ಅದಕ್ಕೆ ತಕ್ಕಂತೆ ಕಬ್ಬಿನ ದರ ಹೆಚ್ಚಿಸಬೇಕು. ಪ್ರಸಕ್ತ ದಿನಮಾನಗಳ ಪ್ರಕಾರ ಕನಿಷ್ಠ ₹ 5,000 ದರ ನೀಡಲು ಕ್ರಮ ವಹಿಸಬೇಕು ಎಂದು ಸಭೆಯಲ್ಲಿದ್ದ ರೈತ ಮುಖಂಡರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT