ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ತಕ್ಷಣವೇ ಬರ ಪರಿಹಾರ ಕೊಡಿ’

ರೈತರ ಪ್ರತಿಭಟನೆ, ಉಭಯ ಸರ್ಕಾರಗಳ ವಿರುದ್ಧ ಆಕ್ರೋಶ
Published 3 ಏಪ್ರಿಲ್ 2024, 4:51 IST
Last Updated 3 ಏಪ್ರಿಲ್ 2024, 4:51 IST
ಅಕ್ಷರ ಗಾತ್ರ

ಬೆಳಗಾವಿ: ‘ಬರದಿಂದ ಕಂಗೆಟ್ಟಿರುವ ರೈತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತ್ವರಿತವಾಗಿ ಬರ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಇಲ್ಲಿನ ರಾಣಿ ಚನ್ನಮ್ಮನ ವೃತ್ತದಲ್ಲಿ ಸಮಾವೇಶಗೊಂಡ ರೈತರು, ಉಭಯ ಸರ್ಕಾರಗಳ ವಿರುದ್ಧ ಘೋಷಣೆ‌ ಕೂಗಿ ಆಕ್ರೋಶ ಹೊರಹಾಕಿದರು. ನಂತರ, ಜಿಲ್ಲಾಧಿಕಾರಿ ಕಚೇರಿಯವರೆಗೆ ಬೃಹತ್‌ ಮೆರವಣಿಗೆ ನಡೆಸಿದರು.

ಬ್ಯಾರಿಕೇಡ್‌ ಅಳವಡಿಸಿದ ಪೊಲೀಸರು, ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಲು ಯತ್ನಿಸಿದ ರೈತರನ್ನು ತಡೆದರು. ಆಗ ಪರಸ್ಪರರ ಮಧ್ಯೆ ವಾಗ್ವಾದ, ನೂಕಾಟ-ತಳ್ಳಾಟ ನಡೆಯಿತು.

ರೈತ ಮುಖಂಡ ಚೂನಪ್ಪ ಪೂಜಾರಿ, ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬರ ಪರಿಸ್ಥಿತಿ ನಿರ್ವಹಣೆಯಲ್ಲಿ ವಿಫಲವಾಗಿವೆ. ಒಂದಿಷ್ಟು ರೈತರಿಗೆ ಭಿಕ್ಷೆ ರೂಪದಲ್ಲಿ‌ ₹2 ಸಾವಿರ ತಾತ್ಕಾಲಿಕ ಪರಿಹಾರ ಕೊಡಲಾಗಿದೆ. ಆದರೆ, ಕುಡಿಯುವ ನೀರು, ಮೇವಿಗಾಗಿ ಜನರು ಮತ್ತು ಜಾನುವಾರುಗಳು ಪರದಾಡುತ್ತಿವೆ. ಹಾಗಾಗಿ ತಕ್ಷಣವೇ ಬರ ಪರಿಹಾರ ಕೊಡಬೇಕು. ರೈತರ ಸಾಲಮನ್ನಾ ಮಾಡಬೇಕು’ ಎಂದು ಆಗ್ರಹಿಸಿದರು.

ಮುಖಂಡ ಪ್ರಕಾಶ ನಾಯ್ಕ, ‘ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ನಾಡಿನ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಷ್ಟ್ರಪತಿ ಅವರು ತಮ್ಮ‌ ವಿಶೇಷ ಅಧಿಕಾರ ಬಳಸಿಕೊಂಡು, ರೈತರ ಸಂಪೂರ್ಣ ಸಾಲ‌ ಮನ್ನಾ ಮಾಡಬೇಕು. ಬರ ಪರಿಸ್ಥಿತಿ ಸಮರ್ಪಕವಾಗಿ ನಿರ್ವಹಿಸುವಂತೆ ಆದೇಶಿಸಬೇಕು. ಬೆಳಗಾವಿಯಲ್ಲಿ ₹300 ಕೋಟಿ ವೆಚ್ಚದಲ್ಲಿ ಮಿನಿ ಸುವರ್ಣಸೌಧ ನಿರ್ಮಿಸುವ ಅಗತ್ಯವಿಲ್ಲ. ಆ ಹಣವನ್ನು ರೈತರ ಸಾಲ ಮನ್ನಾಕ್ಕೆ ಬಳಸಬೇಕು’ ಎಂದು ಒತ್ತಾಯಿಸಿದರು.

ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು. ಕಾಡಸಿದ್ಧೇಶ್ವರ ಸ್ವಾಮೀಜಿ, ಶಶಿಕಾಂತ ಪಡಸಲಗಿ, ಕಿಶನ್ ನಂದಿ, ಪ್ರಕಾಶ ಪೂಜಾರಿ, ಸುರೇಶ ಸಂಪಗಾವಿ, ಮಲ್ಲಿಕಾರ್ಜುನ ವಾಲಿ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT