ಮಂಗಳವಾರ, ಏಪ್ರಿಲ್ 7, 2020
19 °C
ಗೋವಿನಜೋಳ, ಜೋಳ ಬೆಲೆ ಕುಸಿತ

ಖರೀದಿ ಕೇಂದ್ರ ಆರಂಭಿಸಲು ರೈತರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸವದತ್ತಿ: ‘ಗೋವಿನಜೋಳ ಮತ್ತು ಜೋಳ ಬೆಲೆ ಕುಸಿತದಿಂದ ನಾವು ಬಹಳ ನಷ್ಟ ಅನುಭವಿಸುತ್ತಿದ್ದೇವೆ. ಹೀಗಾಗಿ, ಸರ್ಕಾರದಿಂದ ಕೂಡಲೇ ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರ ಆರಂಭಿಸಬೇಕು’ ಎಂದು ಆಗ್ರಹಿಸಿ ತಾಲ್ಲೂಕಿನ ಹಂಚಿನಾಳ, ಉಗರಗೋಳ, ಹಿರೇಕುಂಬಿ, ಹರಳಕಟ್ಟಿ, ಆಚಮಟ್ಟಿ, ಕಗದಾಳ ಮೊದಲಾದ ಗ್ರಾಮಗಳ ರೈತರು ಸೋಮವಾರ ಇಲ್ಲಿನ ಎಪಿಎಂಸಿ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟಿಸಿದರು.

ಸ್ಥಳಕ್ಕೆ ಬಂದ ತಹಶೀಲ್ದಾರ್‌ ಪ್ರಶಾಂತ ಪಾಟೀಲ ಅವರನ್ನು ತರಾಟೆಗೆ ತೆಗೆದುಕೊಂಡರು.

‘ನಿನ್ನೆ ₹ 1,200 ಇದ್ದ ದರ ಈಗ ₹ 900ಕ್ಕೆ ಕುಸಿದಿದೆ. ನಾಳೆ ಏನಾಗುವುದೋ ಗೊತ್ತಿಲ್ಲ. ನಮ್ಮ ಗೋಳನ್ನು ಹೇಳುವುದಾದರೂ ಯಾರಿಗೆ? ಸರ್ಕಾರ ಇತ್ತ ಗಮನಹರಿಸುತ್ತಿಲ್ಲ. ಸ್ವತಃ ಸರ್ಕಾರವೇ ರೈತರ ಕತ್ತು ಹಿಸುಕುತ್ತಿದೆ. ವಿಷ ಸೇವಿಸಿ ಸತ್ತರೂ ಕೇಳುವುದಿಲ್ಲ’ ಎಂದು ಹಂಚಿನಾಳ ಗ್ರಾಮದ ರೈತ ಪಕೀರಗೌಡ ಪಾಟೀಲ ಆಳುತ್ತಲೇ ಆಕ್ರೋಶ ವ್ಯಕ್ತ‍ಪಡಿಸಿದರು.

ಪ್ರತಿಭಟನೆಗೆ ಬೆಂಬಲ ನೀಡಿದ ರಾಷ್ಟ್ರೀಯ ಬಸವದಳದ ಗೌರವಾಧ್ಯಕ್ಷ ಆನಂದ ಚೋಪ್ರಾ ಮಾತನಾಡಿ, ‘ರೈತನ ಬೆಳೆ ಬಂದು 5 ತಿಂಗಳುಗಳು ಕಳೆದಿವೆ. ಕೇಂದ್ರ ಸರ್ಕಾರ ಬೆಂಬಲ ಬೆಲೆ ನಿಗದಿ ಮಾಡಿದೆ. ರಾಜ್ಯ ಸರ್ಕಾರ ಖರೀದಿ ಮಾಡಬೇಕಿದೆ. ಅತಿವೃಷ್ಟಿ ಹಾಗೂ ಬೆಳೆ ಹಾನಿಯಿಂದ ರೈತರು ಕಂಗಾಲಾಗಿದ್ದಾರೆ. ಅಳಿದುಳಿದದ್ದನ್ನು ಮಾರುಕಟ್ಟೆಗೆ ತಂದರೆ ಬೆಂಬಲ ಬೆಲೆ ಖರೀದಿ ಕೇಂದ್ರಗಳಿಲ್ಲ. ಜಿಲ್ಲಾಧಿಕಾರಿ ಕ್ರಮ ತೆಗೆದುಕೊಳ್ಳುತ್ತಿಲ್ಲ. ಮೂರು ಬಾರಿ ಮನವಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ’ ಎಂದು ದೂರಿದರು.

ತಾಲ್ಲೂಕಿನಾದ್ಯಂತ ಕೂಡಲೇ 10 ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ಒತ್ತಾಯಿಸಿದರು.

ಮೂರು ತಾಸುಗಳವರೆಗೆ ರಸ್ತೆತಡೆ ನಡೆಸಿದರು. ಬಳಿಕ ತಹಶೀಲ್ದಾರ್‌ ಕಚೇರಿಯಲ್ಲಿ ಸಂಜೆವರೆಗೂ ಇದ್ದರು. ‘ಜಿಲ್ಲಾಧಿಕಾರಿಯಿಂದ ಯಾವುದೇ ಸೂಚನೆ ಬರಲಿಲ್ಲ. ಹೀಗಾಗಿ, ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದೇವೆ. ಮುಂದೆಯೂ ಕ್ರಮ ವಹಿಸದಿದ್ದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು’ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು