ಬುಧವಾರ, ಮೇ 25, 2022
28 °C
ಲಂಚ ಕೊಡದವರಿಗೆ ಅನ್ಯಾಯ

ಪರಿಹಾರದಲ್ಲಿ ಭ್ರಷ್ಟಾಚಾರ ಎಂದು ಆರೋಪಿಸಿ ರೈತರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತೆಲಸಂಗ (ಬೆಳಗಾವಿ ಜಿಲ್ಲೆ): ‘ದ್ರಾಕ್ಷಿ ಬೆಳೆ ಇದ್ದವರನ್ನು ಬಿಟ್ಟು, ಲಂಚ ಕೊಟ್ಟವರ ಅರ್ಜಿಗಳನ್ನು ಮಾತ್ರ ಪರಿಗಣಿಸಿ ಪರಿಹಾರದ ಹಣ ವಿತರಿಸಿದ ಕಕಮರಿ ಗ್ರಾಮ ಲೆಕ್ಕಾಧಿಕಾರಿ ಜಗದೀಶ ರಾಠೋಡ ಮತ್ತು ಅವರ ಸಹಾಯಕರನ್ನು ಅಮಾನತುಗೊಳಿಸಬೇಕು. ರೈತರಿಗೆ ನ್ಯಾಯಯುತ ಪರಿಹಾರ ತಲುಪಿಸಬೇಕು’ ಎಂದು ಆಗ್ರಹಿಸಿ ಕಕಮರಿ ಗ್ರಾಮದ ರೈತರು ಇಲ್ಲಿ ಅಥಣಿ–ವಿಜಯಪುರ ರಸ್ತೆ ತಡೆದು ಗುರುವಾರ ಪ್ರತಿಭಟನೆ ನಡೆಸಿದರು.

‘ಸರ್ಕಾರವು ಉಚಿತವಾಗಿ ಬೆಳೆ ಹಾನಿ ಸಮೀಕ್ಷೆ ಮಾಡುವಂತೆ ಹೇಳಿದ್ದರೂ ಪ್ರತಿ ರೈತರಿಂದ ₹ 100ರಿಂದ ₹ 200 ಹಣ ಪಡೆದಿದ್ದಾರೆ. ಆದರೂ ಪರಿಹಾರ ನೀಡಿಕೆಯಲ್ಲಿ ತಾರತಮ್ಯ ಮಾಡಿದ್ದಾರೆ’ ಎಂದು ಆರೋಪಿಸಿದರು.

‘ಅನಿಲ ಬಾಳಿಕಾಯಿ ಅವರಿಗೆ 3 ಎಕರೆ 20 ಗುಂಟೆ ದ್ರಾಕ್ಷಿ ಬೆಳೆ ಇದೆ. ಆದರೆ, 1 ಎಕರೆ ನಮೂದಿಸಲಾಗಿದೆ. ಬಸಪ್ಪ ಸಿಂಧೂರ ಅವರಿಗೆ 2 ಎಕರೆ 17ಗುಂಟೆ ದ್ರಾಕ್ಷಿ ಇದೆ. ಅವರಿಗೆ ಬೆಳೆಯೇ ಇಲ್ಲವೆಂದು ನಮೂದಿಸಿದ್ದಾರೆ. ರಾಚಪ್ಪ ತಂಗಡಿ ಅವರದು 8 ಎಕರೆ ದ್ರಾಕ್ಷಿ ಇದ್ದರೂ, ಒಂದು ಎಕರೆಗಷ್ಟೆ ಪರಿಹಾರ ಸಿಕ್ಕಿದೆ.  ಶಾಂತಾ ಬಾಳಿಕಾಯಿ ಅವರು 5 ಎಕರೆ ದ್ರಾಕ್ಷಿ ಬೆಳೆದಿದ್ದರೂ, ಇಲ್ಲವೆಂದು ನಮೂದಿಸಲಾಗಿದೆ. ಲಂಚ ಕೊಡದವರಿಗೆ ಅನ್ಯಾಯ ಮಾಡಲಾಗಿದೆ’ ಎಂದು ದೂರಿ ದಾಖಲೆಗಳನ್ನು ಪ್ರದರ್ಶಿಸಿದರು.

‘ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ನೈಜ ಫಲಾನುಭವಿಗಳಿಗೆ ಪರಿಹಾರ ಕಲ್ಪಿಸಬೇಕು. ಇಲ್ಲವಾದಲ್ಲಿ ತೀವ್ರ ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ರೈತರಾದ ಈರಣ್ಣ ತಂಗಡಿ, ಶಿವಾನಂದ ಮೈಗೂರ, ಗಿರಿಮಲ್ಲ ಬಾಳಿಕಾಯಿ, ಅಪ್ಪು ಬಾಳಿಕಾಯಿ, ಗುರುನಿಂಗ ಬಾಳಿಕಾಯಿ, ಕಲ್ಲಪ್ಪ ತಂಗಡಿ, ಕಲ್ಲಪ್ಪ ಸಂಕ, ಶಿವು ಬಿರಾದರ, ಕಲ್ಮೇಶ ಬಾಳಿಕಾಯಿ, ರವಿ ತಂಗಡಿ, ಮಲ್ಲು ತಂಗಡಿ, ಮಹಾಂತೇಶ ಕನಮಡಿ, ಹಣಮಂತ ಸಿಂಧೂರ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು