ಶನಿವಾರ, ಸೆಪ್ಟೆಂಬರ್ 19, 2020
21 °C

ಕಬ್ಬಿನ ಬಾಕಿ ಹಣ: ನೂರಕ್ಕೆ ನೂರರಷ್ಟು ಪಾವತಿಸಿದ 18 ಸಕ್ಕರೆ ಕಾರ್ಖಾನೆಗಳು

ಶ್ರೀಕಾಂತ ಕಲ್ಲಮ್ಮನವರ Updated:

ಅಕ್ಷರ ಗಾತ್ರ : | |

ಬೆಳಗಾವಿ: 2018–19 ನೇ ಹಂಗಾಮಿನಲ್ಲಿ ಕಬ್ಬು ಪೂರೈಸಿದ ಎಲ್ಲ ರೈತರ ಬಾಕಿ ಹಣವನ್ನು ಜಿಲ್ಲೆಯ 25 ಸಕ್ಕರೆ ಕಾರ್ಖಾನೆಗಳ ಪೈಕಿ 18 ಕಾರ್ಖಾನೆಗಳು ಸಂಪೂರ್ಣವಾಗಿ ಪಾವತಿ ಮಾಡಿವೆ. ಇನ್ನುಳಿದ ಕಾರ್ಖಾನೆಗಳಿಂದಲೂ ಬಾಕಿ ಕೊಡಿಸಲು ಜಿಲ್ಲಾಧಿಕಾರಿ ಎಸ್‌.ಬಿ. ಬೊಮ್ಮನಹಳ್ಳಿ ಮುಂದಾಗಿದ್ದಾರೆ.

ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 1.58 ಕೋಟಿ ಮೆಟ್ರಿಕ್‌ ಟನ್‌ ಕಬ್ಬು ನುರಿಸಲಾಗಿತ್ತು. ಶೇ 10ರಿಂದ ಶೇ 12ರವರೆಗೆ ಇಳುವರಿ ಬಂದಿತ್ತು. ಸುಮಾರು 17.92 ಲಕ್ಷ ಮೆಟ್ರಿಕ್‌ ಟನ್‌ ಸಕ್ಕರೆ ಉತ್ಪಾದಿಸಲಾಗಿತ್ತು. ಎಫ್‌ಆರ್‌ಪಿ ದರದ ಅನ್ವಯ ಕಬ್ಬು ಪೂರೈಸಿದ ರೈತರಿಗೆ ಒಟ್ಟು ₹ 4,811.41 ಕೋಟಿ ಹಣ ನೀಡಬೇಕಾಗಿತ್ತು. ಇದರಲ್ಲಿ 18 ಕಾರ್ಖಾನೆಗಳು ₹ 3,756.48 ಕೋಟಿ ಪಾವತಿಸಿದ್ದರೆ, ಇನ್ನುಳಿದ ಕಾರ್ಖಾನೆಗಳು ₹ 936.04 ಕೋಟಿ ಪಾವತಿಸಿವೆ. ಒಟ್ಟು ₹ 4,692.52 ಕೋಟಿ ಹಣ ಪಾವತಿಸಿದಂತಾಗಿದ್ದು, ₹ 150.64 ಕೋಟಿ ಮಾತ್ರ ಬಾಕಿ ಉಳಿದಿದೆ.

ಬಾಕಿ ಉಳಿಸಿಕೊಂಡಿರುವ ಕಾರ್ಖಾನೆಗಳು:

ಅಥಣಿ ಫಾರ್ಮರ್ಸ್‌ ಲಿಮಿಟೆಡ್‌ (₹ 54.67 ಕೋಟಿ), ಬೈಲಹೊಂಗಲದ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ (₹ 2.64 ಕೋಟಿ), ಅಥಣಿಯ ಉಗಾರ ಶುಗರ್ಸ್‌ ಲಿಮಿಟೆಡ್‌ (₹ 52.19 ಕೋಟಿ), ಗೋಕಾಕದ ಸೌಭಾಗ್ಯಲಕ್ಷ್ಮಿ ಶುಗರ್ಸ್‌ (₹ 1.22) ಉಳಿಸಿಕೊಂಡಿವೆ.

ಸಕ್ಕರೆ ಜಪ್ತಿ:

ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಎಂ.ಕೆ. ಹುಬ್ಬಳ್ಳಿಯಲ್ಲಿರುವ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯು ಇದುವರೆಗೆ ₹ 75 ಕೋಟಿ (ಶೇ89) ಬಾಕಿ ಪಾವತಿಸಿದೆ. ಇನ್ನುಳಿದ ₹ 9.64 ಕೋಟಿ ಬಾಕಿ ಪಾವತಿಸುವಂತೆ ಹಲವು ಬಾರಿ ಜಿಲ್ಲಾಧಿಕಾರಿಯವರು ನೋಟಿಸ್‌ ಜಾರಿಗೊಳಿಸಿದ್ದರು. ಇಷ್ಟಾಗಿಯೂ ಹಣ ಪಾವತಿಸದ ಕಾರಣ, ಕಾರ್ಖಾನೆಯ 29,495 ಕ್ವಿಂಟಲ್‌ ಸಕ್ಕರೆ ಜಪ್ತಿ ಮಾಡಿದ್ದರು.

ಖಾನಾಪುರದ ಭಾಗ್ಯಲಕ್ಷ್ಮಿ ಸಹಕಾರಿ ಸಕ್ಕರೆ ಕಾರ್ಖಾನೆಯು ₹ 37.92 ಕೋಟಿ (ಶೇ 56) ಬಾಕಿ ತೀರಿಸಿದೆ. ₹ 30.30 ಕೋಟಿ ಬಾಕಿ ಉಳಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಕಾರ್ಖಾನೆಯು ಹೈಕೋರ್ಟ್‌ನಲ್ಲಿ ದಾವೆ ಹೂಡಿದೆ.

ಕಠಿಣ ಕ್ರಮ: ‘ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ ರೈತರಿಗೆ ಬಾಕಿ ಹಣವನ್ನು ಕೊಡಿಸಲು ಜಿಲ್ಲಾಡಳಿತ ಬದ್ಧವಾಗಿದೆ. ಇದುವರೆಗೆ 18 ಸಕ್ಕರೆ ಕಾರ್ಖಾನೆಗಳು ಸಂಪೂರ್ಣವಾಗಿ ಬಾಕಿ ಹಣ ಪಾವತಿಸಿವೆ. ಇನ್ನುಳಿದ ಕಾರ್ಖಾನೆಗಳಿಗೂ ಬಾಕಿ ಪಾವತಿಸುವಂತೆ ಸೂಚಿಸಿದ್ದೇನೆ. ಪಾವತಿಸದಿದ್ದರೆ ಕಾನೂನು ರೀತಿಯ ಕ್ರಮಕೈಗೊಳ್ಳುವೆ’ ಎಂದು ಜಿಲ್ಲಾಧಿಕಾರಿ ಎಸ್‌.ಬಿ. ಬೊಮ್ಮನಹಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎಂ.ಕೆ. ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯವರು ಬಾಕಿ ಹಣವನ್ನು ಪಾವತಿಸಿದರೆ, ಜಪ್ತಿ ಮಾಡಿಕೊಂಡ ಸಕ್ಕರೆಯನ್ನು ತಕ್ಷಣ ಬಿಡುಗಡೆ ಮಾಡುತ್ತೇವೆ’ ಎಂದು ನುಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು